ಬೆಂಗಳೂರಿನಲ್ಲಿ ಮೊಳಗಿದ ‘ಕಾಕ್ರೋಚ್’ ಕಹಳೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
ಮಳೆ ನಡುವೆಯೇ ಸಿಜೆಪಿ ಬೃಹತ್ ಧರಣಿ : ನಟ ಪ್ರಕಾಶ್ ರಾಜ್ ಬೆಂಬಲ
ಬೆಂಗಳೂರು : ಹೈದರಾಬಾದ್, ಪುಣೆ, ದಿಲ್ಲಿ ಬಳಿಕ ‘ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ)’ ಬೆಂಗಳೂರಿನಲ್ಲಿ ಎಡಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೇ ಹೋರಾಟದ ಕಹಳೆ ಮೊಳಗಿಸಿದೆ. ರವಿವಾರ(ಜೂ.14) ಸಂಜೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ವಕ್ತಾರ ಸೌರವ್ ದಾಸ್ ನೇತೃತ್ವದಲ್ಲಿ ಪಕ್ಷದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್‍ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಧರಣಿ ನಡೆಸಿದರು.
ಈ ಹೋರಾಟಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಹಾಗೂ ಕಿರಣ ಶ್ರೀನಿವಾಸ್ ಸೇರಿದಂತೆ ಹಲವರು ಪಾಲ್ಗೊಂಡು ಬೆಂಬಲಿಸಿದರು. ಧರಣಿ ಸತ್ಯಾಗ್ರಹದ ವೇಳೆ, ದೇಶದಲ್ಲಿ ಇತ್ತೀಚೆಗೆ ನಡೆದ ಶೈಕ್ಷಣಿಕ ಅಕ್ರಮಗಳು ಮತ್ತು ಪರೀಕ್ಷಾ ಹಗರಣಗಳನ್ನು ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರವನ್ನೂ ಹಾಗೂ ಜೈ ಭೀಮ್ ಘೋಷಣೆಗಳನ್ನು ಕೂಗಲಾಯಿತು. ಜೊತೆಗೆ, ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಧರಣಿಯನ್ನು ಬೆಂಬಲಿಸಿದ ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡಿ, ‘ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಯುವ ಜನತೆಯನ್ನು ಬೀದಿಗೆ ತಳ್ಳಿ ಪ್ರಧಾನಿ ವಿದೇಶ ಸುತ್ತುತ್ತಿದ್ದಾರೆ. ನಿರುದ್ಯೋಗ, ಆರ್ಥಿಕ ಬಿಕ್ಕಟ್ಟಿನಂತಹ ಬಹುದೊಡ್ಡ ಸಮಸ್ಯೆಗಳಿಂದ ನಮ್ಮ ದೇಶವನ್ನು ವಿನಾಶದೆಡೆಗೆ ದೂಡಲಾಗುತ್ತಿದೆ. ಯುವಜನತೆ ಇದರ ವಿರುದ್ಧ ಸಿಡಿಯುವ ಕಾಲ ಈಗ ಬಂದೊದಗಿದೆ. ಅನ್ಯಾಯಗಳ ವಿರುದ್ಧ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಬಾರದು ಎಂದರು.
ಕೇಂದ್ರ ಸರಕಾರ ಮತ್ತು ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನದಿಂದ ದೇಶದಲ್ಲಿ ಒಂದು ಕೋಟಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಳೆಂಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹೊಣೆಗಾರಿಕೆಯನ್ನು ಧರ್ಮೇಂದ್ರ ಪ್ರಧಾನ್ ವಹಿಸಿಕೊಳ್ಳಬೇಕು ಎಂದು ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದರು.
ಸಿಜೆಪಿ ವಕ್ತಾರ ಸೌರವ್ ದಾಸ್ ಮಾತನಾಡಿ, ನೀಟ್ ಮಾತ್ರವಲ್ಲ, ಸಿಬಿಎಸ್‍ಇ ಫಲಿತಾಂಶದಲ್ಲಿಯೂ ಅಕ್ರಮ ನಡೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಸಹಿಸಲು ಸಾಧ್ಯವಿಲ್ಲ. ಆಡಳಿತ ನಡೆಸುವವರ ಕುಮ್ಮಕ್ಕಿನಿಂದಾಗಿಯೇ ಅಕ್ರಮಗಳು ನಡೆಯುತ್ತವೆ. ಇದನ್ನು ವಿರೋಧಿಸಿ ನಮ್ಮ ಹೋರಾಟಕ್ಕೆ ದೇಶದೆಲ್ಲೆಡೆ ಕೋಟ್ಯಂತರ ಯುವಜನರು ಭಾಗವಹಿಸುತ್ತಿದ್ದಾರೆ. ಈ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ದೇಶದ ದುರಾಡಳಿತ ವ್ಯವಸ್ಥೆ ಬದಲಾಗಬೇಕು ಎಂದು ಹೇಳಿದರು.
ಧರಣಿಯಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ನೂರಾರು ಮಂದಿ ಯುವಜನತೆ ಪಾಲ್ಗೊಂಡಿದ್ದರು. ಭಾರೀ ಮಳೆಯ ನಡುವೆಯೇ ಸತತ ಮೂರು ಗಂಟೆಗಳ ಕಾಲ ಧರಣಿ ಜರುಗಿತು. ಈ ಧರಣಿಗೂ ಮುನ್ನ ಕಾಕ್ರೋಚ್ ಜನತಾ ಪಕ್ಷದ ಕಾರ್ಯಕರ್ತರು ನಟ ಪುನೀತ್ ರಾಜ್‍ಕುಮಾರ್ ಸಮಾಧಿಗೆ ನಮನ ಸಲ್ಲಿಸಿದರು. ಇನ್ನು, ಫ್ರೀಡಂ ಪಾರ್ಕ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.