ಬಿಡದಿ ಟೌನ್‍ಶಿಪ್ | ರಾಹುಲ್ ಗಾಂಧಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ರ
ಬೆಂಗಳೂರು : ಬಿಡದಿಯಲ್ಲಿ ರೈತರ ಫಲವತ್ತಾದ ಭೂಮಿಯನ್ನು ಟೌನ್‍ಶಿಪ್ ಹೆಸರಿನಲ್ಲಿ ಕಬಳಿಸಲು ರಾಜ್ಯ ಸರಕಾರ ಮುಂದಾಗಿದೆ. ಹೀಗಾಗಿ ತಾವು ಕೂಡಲೇ ಮಧ್ಯಪ್ರವೇಶ ಮಾಡಿ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಲು ಕಾಂಗ್ರೆಸ್ ಸರಕಾರಕ್ಕೆ ಸೂಚಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನವಿ ಮಾಡಿದ್ದಾರೆ.
ರವಿವಾರ ಈ ಸಂಬಂಧ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷನಾಗಿ, ಇಲ್ಲಿನ ಆಡಳಿತಾರೂಢ ಕಾಂಗ್ರೆಸ್ ಸರಕಾರ, ರಾಜ್ಯದ ರೈತರ ಅಳಲನ್ನು ಕೇಳಿಸಿಕೊಳ್ಳದಿರುವುದರಿಂದ, ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಬಿಡದಿಯಲ್ಲಿ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಸಾವಿರಾರು ಅನ್ನದಾತ ರೈತ ಕುಟುಂಬಗಳ ಧ್ವನಿಯಾಗಿ ನಿಮ್ಮ ಗಮನಕ್ಕೆ ಕೆಲವು ವಿಷಯಗಳನ್ನು ತರಲು ಬಯಸುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ನೀವು ದೇಶದಾದ್ಯಂತ ರೈತರ ಭೂಮಿ ಉಳಿಸುವ ಹಾಗೂ ಕಾರ್ಪೊ ರೇಟ್ ಕಪಿಮುಷ್ಟಿಯಿಂದ ದೇಶವನ್ನು ರಕ್ಷಿಸುವ ಹೆಸರಿನಲ್ಲಿ ಘೋಷಣೆ ಕೂಗುತ್ತೀರಿ, ಯಾತ್ರೆ ನಡೆಸುತ್ತೀರಿ. ಆದರೆ, ಕಾಂಗ್ರೆಸ್ ಸರಕಾರವಿರುವ ಕರ್ನಾಟಕದಲ್ಲಿ, ನಿಮ್ಮ ಮುಖ್ಯಮಂತ್ರಿ ನಾಡಿನ ಅನ್ನದಾತ ರೈತರ ಹಿತ ನಿರ್ಲಕ್ಷಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸುತ್ತೇನೆ. ಬಿಡದಿ ಸಮಗ್ರ ನಗರ ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ ಈ ‘ಸರಕಾರಿ ಭೂಕಬಳಿಕೆ’ಯ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ವಿಜಯೇಂದ್ರ ಕೋರಿದ್ದಾರೆ.
ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಜನಸಂದಣಿ ಒತ್ತಡವನ್ನು ಕಡಿಮೆ ಮಾಡಲು, ಕಾಂಗ್ರೆಸ್ ಸರಕಾರ ಬಿಡದಿ ಮತ್ತು ಹಾರೋಹಳ್ಳಿ ನಡುವೆ ಸುಮಾರು 7,481 ಎಕರೆ ಪ್ರದೇಶದಲ್ಲಿ ‘ವರ್ಕ್-ಲಿವ್-ಪ್ಲೇ’ ಮಾದರಿಯ ಬೃಹತ್ ಉಪನಗರವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಯೋಜನೆಗೆ ಅಂದಾಜು 18ಸಾವಿರ ಕೋಟಿ ರೂ.ವೆಚ್ಚ ಮಾಡಲಿದ್ದು, ಎರಡನೇ ಪ್ರಮುಖ ವಾಣಿಜ್ಯ ಕೇಂದ್ರವನ್ನು ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು 2026ರ ಜೂ.11ರಂದು ಅಧಿಕೃತವಾಗಿ ರಾಜ್ಯ ಗೆಜೆಟ್‍ನಲ್ಲಿ ಪ್ರಕಟಿಸಲಾಗಿದೆ. ಫಲವತ್ತಾದ ಕೃಷಿ ಭೂಮಿಯನ್ನೇ ಆಯ್ಕೆ ಮಾಡಿಕೊಂಡು ಈ ಯೋಜನೆಯನ್ನು ಮುಂದುವರಿಸುವ ಅಗತ್ಯ ಮತ್ತು ಸಮರ್ಥನೆ ಏನು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಈ ಹಿನ್ನೆಲೆಯಲ್ಲಿ, ರೈತರ ಪರವಾಗಿ ಕೆಲವು ವಿಚಾರಗಳನ್ನು ತಮ್ಮ ಮುಂದಿಡುತ್ತಿದ್ದು, ತಾವು ಸ್ಪಂದಿಸುವಿರಿ ಎನ್ನುವ ನಂಬಿಕೆಯಿದೆ ಎಂದು ಅವರು ತಿಳಿಸಿದ್ದಾರೆ.
ರೈತರ ಹೋರಾಟಕ್ಕೆ ಬೆಲೆ ಇಲ್ಲವೇ?: ಬಿಡದಿಯ 25 ಹಳ್ಳಿಗಳ ಅನ್ನದಾತರು ಕಳೆದ 470ಕ್ಕೂ ಅಧಿಕ ದಿನಗಳಿಂದ ನಿರಂತರವಾಗಿ ಶಾಂತಿಯುತ ಧರಣಿ ನಡೆಸುತ್ತಿದ್ದಾರೆ. 3,500ಕ್ಕೂ ಹೆಚ್ಚು ಸಣ್ಣ ಹಿಡುವಳಿದಾರರು ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರೂ, ಮುಖ್ಯಮಂತ್ರಿ ಯಾವುದೇ ಸಾರ್ವಜನಿಕ ಸಭೆ ನಡೆಸದೆ, ರೈತರ ಒಪ್ಪಿಗೆಯನ್ನು ಸಂಪೂರ್ಣವಾಗಿ ಬದಿಗೊತ್ತಿ, ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಸ್ವಾಧೀನಪಡಿಸಿಕೊಳ್ಳಲಾಗುತ್ತಿರುವ ಈ ಭೂಮಿ ಬಂಜರು ಭೂಮಿಯಲ್ಲ. ಇದು ಬೆಂಗಳೂರು ನಗರಕ್ಕೆ ಪ್ರತಿದಿನ ಹಾಲು, ತರಕಾರಿ ಮತ್ತು ಹಣ್ಣುಗಳನ್ನು ಪೂರೈಸುವ, ತೆಂಗು, ಅಡಿಕೆ ಮತ್ತು ಬಾಳೆ ಬೆಳೆಯುವ ಫಲವತ್ತಾದ ಭೂಮಿಯಾಗಿದೆ. ಸಾವಿರಾರು ಮಹಿಳೆಯರು ಈ ಕೃಷಿ ಮತ್ತು ಸ್ಥಳೀಯ ಅಡಿಕೆ ತಟ್ಟೆ ತಯಾರಿಕಾ ಘಟಕಗಳನ್ನು ನಂಬಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಹತ್ತಿರದಲ್ಲೇ ಇರುವ 1ಸಾವಿರ ಎಕರೆ ವಿಸ್ತೀರ್ಣದ ಐತಿಹಾಸಿಕ ಬೈರಮಂಗಲ ಕೆರೆಯ ಪರಿಸರ ವ್ಯವಸ್ಥೆಯನ್ನು ನಾಶ ಮಾಡಿ, ಅಲ್ಲಿ ‘ವರ್ಕ್-ಲಿವ್-ಪ್ಲೇ’ ಹೆಸರಿನ ಕಾಂಕ್ರೀಟ್ ಜಂಗಲ್ ನಿರ್ಮಿಸಲು ಹೊರಟಿರುವುದು ಯಾವ ರೀತಿಯಲ್ಲಿ ಸಮರ್ಥನೀಯ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.