ಕೊಡಗಿನಲ್ಲಿ ನಿರಂತರ ಮಳೆ | ಮಡಿಕೇರಿಯಲ್ಲಿ ಮೈಕೊರೆಯುವ ಚಳಿ : ಜನಜೀವನ ಅಸ್ತವ್ಯಸ್ತ
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಅವಧಿಗೂ ಮೊದಲೇ ಅಧಿಕ ಮಳೆಯಾಗಿರುವುದರಿಂದ ಜಿಲ್ಲಾವ್ಯಾಪಿ ಶೀತದ ವಾತಾವರಣವಿದೆ. ಮಡಿಕೇರಿಯಲ್ಲಿ ಮೈಕೊರೆಯುವ ಚಳಿ ಮತ್ತು ಮಂಜು ಮುಸುಕಿದ ವಾತಾವರಣವಿದ್ದು, ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಮಂಜಿನ ನಗರಿ ಮಡಿಕೇರಿ ದೇಶ, ವಿದೇಶಗಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಹಸಿರ ವಾತಾವರಣ ಮತ್ತು ತಂಪಾದ ಹವಾಗುಣ. ಬೇಸಿಗೆಯಲ್ಲಿ ಪ್ರವಾಸಿಗರಿಂದ ತುಂಬಿ ಹೋಗುವ ಮಡಿಕೇರಿ ಮಳೆಗಾಲದಲ್ಲೂ ಮಾನ್ಸೂನ್ ಟೂರಿಸಂ ಹೆಸರಿನಲ್ಲಿ ಆಕರ್ಷಿಸುತ್ತಿತ್ತು. ಆದರೆ ಪ್ರಸ್ತುತ ವರ್ಷ ಅತಿಯಾದ ಗಾಳಿಮಳೆ ಮತ್ತು ಮೈಕೊರೆಯುವ ಚಳಿಯಿಂದ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ. ಇದರಿಂದ ಪ್ರವಾಸೋದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿರುವವರ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ನಷ್ಟ ಅನುಭವಿಸುತ್ತಿದ್ದಾರೆ.
ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವ್ಯಾಪಾರ ವಹಿವಾಟು ಕಳೆದ ಒಂದು ತಿಂಗಳಿನಿಂದ ಚೇತರಿಕೆ ಕಾಣುತ್ತಿಲ್ಲ. ಅತಿಯಾದ ಮಳೆ, ಮಂಜು ಮತ್ತು ಚಳಿಯಿಂದ ರಸ್ತೆಗಳಲ್ಲಿ ಜನರ ಓಡಾಟ ವಿರಳವಾಗಿದೆ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ವಾಹನಗಳ ಸಂಚಾರವೂ ಕಡಿಮೆಯಾಗಿದೆ. ಇದು ವರ್ತಕರ ಹಾಗೂ ಹೊಟೇಲ್ ಉದ್ಯಮಿಗಳ ಮೇಲೆ ನೇರ ಪರಿಣಾಮ ಬೀರಿದ್ದು, ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಸಣ್ಣ ವ್ಯಾಪಾರಿಗಳು ಹಾಗೂ ಸಂತೆ ವ್ಯಾಪಾರಿಗಳು ಕೂಡ ವ್ಯಾಪಾರವಿಲ್ಲದೆ ಪರಿತಪಿಸುವಂತ್ತಾಗಿದೆ.
ಅತಿ ಶೀತದ ವಾತಾವರಣದಿಂದ ಶೀತ, ಜ್ವರ ವ್ಯಾಪಕಾಗುತ್ತಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗಿದೆ. ವಯೋವೃದ್ಧರು ವಯೋಸಹಜ ಕಾಯಿಲೆಗಳೊಂದಿಗೆ ಶೀತದ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ ಪರದಾಡುತ್ತಿದ್ದಾರೆ.
ಸುತ್ತಮುತ್ತಲ ಮಣ್ಣು ಮೃದುವಾಗಿದ್ದು, ಇನ್ನೂ ಎರಡು ತಿಂಗಳು ಮಳೆ ಇರುವುದರಿಂದ ಮುಂದಿನ ದಿನಗಳ ಬಗ್ಗೆ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಾಫಿ ಮತ್ತಿತರ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿದ್ದು, ಕೃಷಿಕ ವರ್ಗ ಕೂಡ ಕಷ್ಟನಷ್ಟಗಳನ್ನು ಅನುಭವಿಸುತ್ತಿದೆ. ವಿದ್ಯಾರ್ಥಿಗಳು ಮೈಕೊರೆಯುವ ಚಳಿಗೆ ಸಿಲುಕಿ ಶಾಲೆಗೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ಉದ್ಭವಿಸಿದೆ.
ಕೊಡಗು ಜಿಲ್ಲಾ ವ್ಯಾಪಿ ಜನವರಿಯಿಂದ ಇಲ್ಲಿಯವರೆಗೆ 80 ಇಂಚಿಗೂ ಅಧಿಕ ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 110 ಇಂಚು ಮಳೆ ದಾಖಲಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿದೆ.