ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ನ್ಯಾಯಾಲಯ, ನ್ಯಾಯಮಂಡಳಿಗಳು ಹಗುರವಾಗಿ ಪರಿಗಣಿಸಬಾರದು: ಹೈಕೋರ್ಟ್
Photo credit: PTI
ಬೆಂಗಳೂರು: ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಭ್ರಷ್ಟಾಚಾರ ಇಡೀ ಕಾನೂನು ಸುವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತದೆ. ಭ್ರಷ್ಟಾಚಾರ ಆರೋಪದ ಮೇಲಿನ ದುರ್ನಡತೆ ಪ್ರಕರಣಗಳನ್ನು ನ್ಯಾಯಾಲಯಗಳು ಅಥವಾ ನ್ಯಾಯಮಂಡಳಿಗಳು ಹಗುರವಾಗಿ ಪರಿಗಣಿಸಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಭ್ರಷ್ಟಾಚಾರ ಆರೋಪದಲ್ಲಿ ಗ್ರಾಮ ಲೆಕ್ಕಿಗನೊಬ್ಬನನ್ನು ಕಡ್ಡಾಯ ನಿವೃತ್ತಿಗೊಳಿಸಿ ಹೊರಡಿಸಿದ್ದ ಅದೇಶ ರದ್ದುಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಕ್ರಮ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಭ್ರಷ್ಟಾಚಾರವು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ಬೆದರಿಕೆ ಹಾಕುವುದಲ್ಲದೆ, ಕಾನೂನಿನ ನಿಯಮ ಮತ್ತು ಅದರ ರಕ್ಷಕರಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳನ್ನು ದುರ್ಬಲಗೊಳಿಸುವ ಅಪಾಯವಿದೆ. ಲಂಚದ ಆರೋಪದ ಪ್ರಕರಣಗಳಲ್ಲಿ ನ್ಯಾಯಾಲಯಗಳು ಮೂಕ ಪ್ರೇಕ್ಷಕರಂತಿರಬಾರದು. ಬದಲಿಗೆ ನ್ಯಾಯದ ದಂಡನೆಯನ್ನು ಎತ್ತಿ ಹಿಡಿಯಬೇಕಾಗಿದೆ ಮತ್ತು ತಮ್ಮ ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಳ್ಳುವ ಕರ್ತವ್ಯವನ್ನು ಹೊಂದಿರುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಸಾಕ್ಷಿಗಳ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆರೋಪಿಯು ಲೋಕಾಯುಕ್ತ ಬಲೆಗೆ ಬೀಳುವ ಮುನ್ನ ಮತ್ತು ಆನಂತರದ ದೂರು ಮತ್ತು ಮಹಜರುಗಳೊಂದಿಗೆ ಹೋಲಿಸಿದಾಗ ಮತ್ತು ಸಾಕ್ಷಿಗಳ ಹೇಳಿಕೆ ಪ್ರಕಾರ ಗ್ರಾಮ ಲೆಕ್ಕಿಗ ಹಣಕ್ಕೆ ಬೇಡಿಕೆಯೊಡ್ಡಿ, ಅಕ್ರಮ ಎಸಗಿದ್ದಾರೆಂದು ಒಪ್ಪಿಕೊಂಡಿದ್ದಾರೆ ಮತ್ತು ತನಿಖಾ ಅಧಿಕಾರಿ ಕಾನೂನಿನ ಪ್ರಕಾರ ಟ್ರ್ಯಾಪ್ ಕಾರ್ಯವಿಧಾನ ನಡೆಸಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಉದ್ಯೋಗದಾತರು ಉದ್ಯೋಗಿಯ ವಿರುದ್ಧ ಹೊರಿಸಲಾದ ಆರೋಪಗಳನ್ನು ಸಾಬೀತುಪಡಿಸಲು ಇಲಾಖಾ ಪ್ರಕ್ರಿಯೆಗಳಲ್ಲಿ ಮೌಖಿಕ ಮತ್ತು ಸಾಕ್ಷ್ಯಚಿತ್ರ ಸಾಕ್ಷ್ಯವನ್ನು ನೀಡಿದ್ದಾರೆಂಬ ತೀರ್ಮಾನಕ್ಕೆ ಬರಲು ಸಾಕಷ್ಟು ಪುರಾವೆಗಳಿವೆ. ಇದರಿಂದ, ಉದ್ಯೋಗಿಯ ವಿರುದ್ಧ ಹೊರಿಸಲಾದ ಆರೋಪಗಳು ಸಾಬೀತಾಗಿವೆ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕೆಎಟಿ ನೀಡಿರುವ ಕಾರಣಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ನ್ಯಾಯಾಲಯ, ಈ ವಿಚಾರದಲ್ಲಿ ಕೆಎಟಿ ತಪ್ಪೆಸಗಿದೆ ಎನಿಸುತ್ತದೆ. ಕ್ರಿಮಿನಲ್ ಪ್ರಕರಣವೇ ಬೇರೆ ಮತ್ತು ಇಲಾಖಾ ತನಿಖೆಯೇ ಬೇರೆ. ಕೆಎಟಿ ಇಲಾಖಾ ತನಿಖೆಯಲ್ಲಿನ ಅಂಶಗಳನ್ನು ಪರಿಗಣಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.
ಪ್ರಕರಣವೇನು?
ಶಿವನಗೌಡ ವಸನದ್ ಎಂಬವರು 2011ರಲ್ಲಿ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆಳವಡಿ ಗ್ರಾಮದಲ್ಲಿ ಗ್ರಾಮ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಕಂದಾಯ ದಾಖಲೆಗಳನ್ನು ಸರಿಪಡಿಸಲು ಶಿವನಗೌಡ 2,500 ರೂ. ಲಂಚ ಕೇಳಿದ್ದರು ಎಂದು ವಿಜಯಕುಮಾರ್ ಹನಮಪ್ಪ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಶಿವನಗೌಡ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಅವರ ವಿರುದ್ಧ ಜಿಲ್ಲಾಧಿಕಾರಿ ಇಲಾಖಾ ತನಿಖೆ ನಡೆಸಿದ್ದರು. 2019ರಲ್ಲಿ ತನಿಖಾ ವರದಿ ಸಲ್ಲಿಸಲಾಗಿತ್ತು. ಆನಂತರ ಸರ್ಕಾರ ತನಿಖಾ ವರದಿಯನ್ನು ಆಧರಿಸಿ 2020ರ ಅಕ್ಟೋಬರ್ 21ರಂದು ಶಿವನಗೌಡ ಅವರನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿ ಶಿವನಗೌಡ ಬೆಳಗಾವಿಯ ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಕೆಎಟಿ ಆದೇಶ ರದ್ದು ಕೋರಿ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳು ಹೈಕೋರ್ಟ್ ಧಾರವಾಡ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.