ಸದನ ಸಮಿತಿಗೆ ‘ಜನಸಂದಣಿ ನಿಯಂತ್ರಣ ವಿಧೇಯಕ’
ಬೆಂಗಳೂರು: ಕಾನೂನು ಬಾಹಿರವಾಗಿ ಗುಂಪುಗೂಡುವುದನ್ನು ಪ್ರತಿಬಂಧಿಸಲು ಮತ್ತು ಅಪರಾಧ ದಂಡನೆಗಾಗಿ ಉಪಬಂಧಗಳನ್ನು ಕಲ್ಪಿಸುವ 2025ನೆ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ನಿರ್ವಹಣೆ) ವಿಧೇಯಕವನ್ನು ಸದನ ಸಮಿತಿಗೆ ವಹಿಸಲಾಯಿತು.
ಗುರುವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈ ವಿಧೇಯಕ ಮಂಡಿಸಿ, ಸುದೀರ್ಘ ವಿವರಣೆ ನೀಡಿದ ನಂತರ ಸದಸ್ಯರು ಪಕ್ಷಬೇಧ ಮರೆತು, ಇದೊಂದು ಗಂಭೀರವಾದ ವಿಧೇಯಕವಾಗಿದ್ದು, ಸುದೀರ್ಘ ಚರ್ಚೆ ಅಗತ್ಯವಿದೆ. ಇದನ್ನು ಸದನ ಸಮಿತಿಗೆ ವಹಿಸುವಂತೆ ಆಗ್ರಹಿಸಿದರು. ಇದಕ್ಕೆ ಡಾ.ಜಿ.ಪರಮೇಶ್ವರ್ ಸದನ ಸಮಿತಿ ರಚನೆಗೆ ಒಪ್ಪಿಗೆ ಸೂಚಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸಚಿವರು, ‘ಆರ್‍ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದ ಘಟನೆ, ದೇಶದ ಹಲವೆಡೆ ಸಂಭವಿಸಿರುವ ಕಾಲ್ತುಳಿತದ ದುರ್ಘಟನೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳನ್ನು ರಕ್ಷಣೆ ಮಾಡುವ ಹಾಗೂ ಆಯೋಜಕರನ್ನು ಜವಾಬ್ದಾರರನ್ನಾಗಿ ಮಾಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ’ ಎಂದು ಉಲ್ಲೇಖಿಸಿದರು.
‘ಖಾಸಗಿ ಆವರಣದೊಳಗೆ ಆಚರಿಸುವ ಅಥವಾ ನಡೆಸುವ ಕೌಟುಂಬಿಕ ಸಮಾರಂಭ ಅಥವಾ ಕಾರ್ಯಕ್ರಮಗಳು ಮದುವೆ ಮನೆಗಳಿಗೆ ಇವು ಅನ್ವಯಿಸುವುದಿಲ್ಲ. ಖಾಸಗಿ ಆವರಣಗಳು ಎಂಬುದು ಭೋಗ್ಯಕ್ಕೆ ಪಡೆದ, ಬಾಡಿಗೆಗೆ ಪಡೆದ ಅಥವಾ ಗುತ್ತಿಗೆಗೆ ಪಡೆದ ಆವರಣಗಳು ಒಳಗೊಂಡಿರುತ್ತವೆ. ದೊಡ್ಡ ದೊಡ್ಡ ಸಮಾರಂಭಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ನಿಯಂತ್ರಣ ಇಲ್ಲದೆ ನಡೆಯುತ್ತವೆ. ಅಹಿತಕರ ಘಟನೆ ನಡೆಯದಿದ್ದರೆ ಪರವಾಗಿಲ್ಲ. ನಡೆದಾಗ ಯಾರಾದರೂ ಜವಾಬ್ದಾರಿ ಹೊರಬೇಕು ಎಂಬುದು ಈ ವಿಧೇಯಕ ಉದ್ದೇಶ’ ಎಂದು ಅವರು ವಿವರಿಸಿದರು.
ಈ ವೇಳೆ ಬಿಜೆಪಿ ಸದಸ್ಯ ಸುರೇಶ್‍ಕುಮಾರ್ ಮಾತನಾಡಿ, ‘ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಹೈಕೋರ್ಟ್ ಹೇಳಿದ ಮೇಲೆ ಈ ವಿಧೇಯಕ ತರಲಾಗುತ್ತಿದೆ. ಮುಂಚೆ ತಂದಿದ್ದರೆ ಆರ್‍ಸಿಬಿ ವಿಜಯೋತ್ಸವದ ದುರಂತದಲ್ಲಿ 11 ಮಂದಿ ಸಾವು ಆಗುತ್ತಿರಲಿಲ್ಲ. ಫ್ರೀಡಂಪಾರ್ಕ್‍ನಲ್ಲಿ ನಡೆಯುವ ಪ್ರತಿಭಟನೆಗಳಿಂದ ಸುತ್ತಲಿನ ಕಾಲೇಜುಗಳಿಗೆ ಪಾಠ ಕೇಳಲಾಗದಷ್ಟು ತೊಂದರೆಯಾಗುತ್ತಿದೆ. ಪರೀಕ್ಷೆಗೆ ಸಂದರ್ಶನಕ್ಕೆ, ಆ್ಯಂಬುಲೆನ್ಸ್ ಗಳು ಹೋಗಲಾಗದಂತಹ ಪರಿಸ್ಥಿತಿ ಇದೆ. ಮೊದಲು ಈ ರೀತಿಯ ಚುಟವಟಿಕೆಗಳನ್ನು ತಡೆಯಲು ನಿಯಮ ರೂಪಿಸಿ’ ಎಂದರು.
ವಿರೋಧ ಪಕ್ಷದ ನಾಯಕ ಅಶೋಕ್ ಮಾತನಾಡಿ, ‘ಹೈಕೋರ್ಟ್ 5 ಪ್ರಶ್ನೆಗಳನ್ನು ಕೇಳಿದೆ. ಸದನದಲ್ಲಿ ಆರ್ ಸಿಬಿ ಕಾಲ್ತುಳಿತದ ವಿಚಾರ ಚರ್ಚೆಯಾಗಿದೆ. ಇದಕ್ಕೆ ಉತ್ತರ ಕೊಡಲು ವಿಧೇಯಕ ತಂದಿದ್ದಾರೆ’ ಎಂದು ಉಲ್ಲೇಖಿಸಿದರು.
ಜಾತ್ರೆ, ಹಬ್ಬಗಳ ಬಗ್ಗೆ ವಿಧೇಯಕದಲ್ಲಿ ಸ್ಪಷ್ಟತೆ ಇಲ್ಲ. ಕಾರ್ಯಕ್ರಮಗಳನ್ನು ಹತ್ತಿಕ್ಕುವ ಉದ್ದೇಶವಿದೆ. ಈ ಬಗ್ಗೆ ಸಮಗ್ರ ಚರ್ಚೆಯಾಗಲು ಸದನ ಸಮಿತಿಗೆ ವಹಿಸಬೇಕೆಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಒತ್ತಾಯ ಮಾಡಿದರು.
ಜೆಡಿಎಸ್ ಸದಸ್ಯ ಶರಣಗೌಡ ಕಂದಕೂರು, ಬಿಜೆಪಿಯ ಸುರೇಶ್ ಗೌಡ ಸೇರಿದಂತೆ ಹಲವು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ವಿಧೇಯಕದ ಸಾಧಕಬಾಧಕಗಳ ಮೇಲೆ ಬೆಳಕು ಚೆಲ್ಲಿದರು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಈ ವಿಧೇಯಕವನ್ನು ಸದನ ಸಮಿತಿಗೆ ವಹಿಸಲಾಗುವುದು ಎಂದು ಪ್ರಕಟಿಸಿದರು.