×
Ad

‘ದರ್ಶನ್‍ಗೆ ವಿಡಿಯೋ ಕಾಲ್’: ರೌಡಿಶೀಟರ್ ಪೊಲೀಸ್ ವಶಕ್ಕೆ

Update: 2024-08-26 22:02 IST

Photo credit: oneindia.com

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ಜಾಮೀನಿನಡಿ ಹೊರಗಿರುವ ರೌಡಿಶೀಟರ್ ಸತ್ಯ ಎಂಬಾತನೊಂದಿಗೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದು, ಈ ಸಂಬಂಧ ರೌಡಿಶೀಟರ್ ಸತ್ಯನನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಮಂಡ್ಯದಲ್ಲಿ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಆ.25ರಂದು ನಟ ದರ್ಶನ್ ರೌಡಿಶೀಟರ್ ಸತ್ಯನ ಜೊತೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದರು. ಆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಕೂಡಲೇ ಬ್ಯಾಡರಹಳ್ಳಿ ಠಾಣಾ ಪೊಲೀಸರು ಕ್ರಮ ಕೈಕೊಂಡು ದರ್ಶನ್ ಜತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ಸತ್ಯನನ್ನು ಮಂಡ್ಯದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿರುವುದಾಗಿ ಹೇಳಿದ್ದಾರೆ.

ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್‍ಗೆ ಪರಪ್ಪನ ಅಗ್ರಹಾರ ಜೈಲಿನೊಳಗೆ ರೌಡಿಶೀಟರ್‍ಗಳ ಜೊತೆ ಸಂಪರ್ಕ, ಗಾರ್ಡನ್ ಏರಿಯಾದಲ್ಲಿ ಹರಟೆ ಹೊಡೆಯುವ ಅವಕಾಶ, ಸಿಗರೇಟ್, ಕುರ್ಚಿ ಸೇರಿದಂತೆ ರಾಜಾತಿಥ್ಯ ಲಭಿಸಿದೆ ಎನ್ನಲಾಗಿದ್ದು, ಅದರ ಜೊತೆಗೆ ವಿಡಿಯೋ ಕಾಲ್ ಕೂಡ ಬಹಿರಂಗವಾಗಿರುವುದು ದೊಡ್ಡ ಸಂಚಲನ ಸೃಷ್ಟಿದೆ.

ವಿಡಿಯೋ ಕಾಲ್ ಮಾಡಿದ್ದೇಗೆ..?: ದರ್ಶನ್ ಮಾತನಾಡಿರುವ ವಿಡಿಯೋ ಕಾಲ್‍ನ ತುಣುಕಿನಲ್ಲಿ ಇರುವವನು ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಯಾನೆ ಜನಾರ್ದನ್ ಎಂಬಾತನ ಮಗ ಸತ್ಯ. ಆತನಿಗೆ ಜೈಲಿನಿಂದ ವಿಡಿಯೋ ಕಾಲ್ ಮಾಡಿ ದರ್ಶನ್‍ರನ್ನು ತೋರಿಸಿದವನು ಇನ್ನೋರ್ವ ರೌಡಿಶೀಟರ್ ಮಾರ್ಕೆಟ್ ಧರ್ಮ.

ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಮಾರಾಕಾಸ್ತ್ರಗಳಿಂದ ಹೊಡೆದು ಸತ್ಯ ಎಂಬಾತ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿದ್ದ. ಹೊರಗೆ ಬಂದವನು ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ‘ದರ್ಶನ್ ಇರುವುದು ನಮ್ಮ ಪಕ್ಕದ ಸೆಲ್‍ನಲ್ಲಿ, ನಿನಗೂ ತೋರಿಸುತ್ತೀನಿ’ ಎಂದು ಸತ್ಯನಿಗೆ ಹೇಳಿದ್ದ ಮಾರ್ಕೆಟ್ ಧರ್ಮ, ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದ.

ದರ್ಶನ್ ಜೊತೆಗೆ ಮಾತನಾಡಿದ ವಿಡಿಯೋ ಕಾಲ್ ತುಣುಕನ್ನು ಸತ್ಯ ತನ್ನ ಸಹಚರರಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದ. ಈ ವಿಡಿಯೋ ತುಣುಕನ್ನು ಆತನ ಸಹಚರರ ವಾಟ್ಸಪ್ ಸ್ಟೇಟಸ್‍ನಲ್ಲಿ ಅಪ್‍ಲೋಡ್ ಮಾಡಿದ್ದರು. ಆದ್ದರಿಂದ ದರ್ಶನ್ ಜೊತೆಗಿನ ಆತನ ವಿಡಿಯೋ ಕಾಲ್ ಎಲ್ಲ ಕಡೆಗಳಲ್ಲಿ ವೈರಲ್ ಆಯಿತು ಎಂದು ತಿಳಿದುಬಂದಿದೆ.

ದರ್ಶನ್ ರೆಸಾರ್ಟ್‍ನಲ್ಲಿದ್ದಾರೋ..!?: ಜೈಲಿನಿಂದ ನಟ ದರ್ಶನ್‍ನ ಫೋಟೋ ಹಾಗೂ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದು, ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಜೈಲಿನಲ್ಲಿದ್ದಾರೋ ಅಥವಾ ರೆಸಾರ್ಟ್‍ನಲ್ಲಿದ್ದಾರೋ ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ.

ಜೈಲಿನಲ್ಲಿ ಆರೋಪಿಗಳಿಗೆ ರಾಜ್ಯಾತಿಥ್ಯ ದೊರೆಯುತ್ತಿದೆ. ಆರೋಪಿಗಳು ಚರ್ಚೆ ಮಾಡಲು ಕುರ್ಚಿ ಟೇಬಲ್‍ಗಳನ್ನು ಹಾಕಲಾಗಿದೆ. ಟೀ ಕಪ್, ಸಿಗರೇಟ್‍ಗಳನ್ನು ಹಿಡಿದಿದ್ದಾರೆ ಎಂದು ಕಾಶಿನಾಥಯ್ಯ ಅಸಹನೆ ವ್ಯಕ್ತಪಡಿಸಿದರು.

ಪೊಲೀಸ್ ಅಧಿಕಾರಿಗಳ ತನಿಖೆಯ ಬಗ್ಗೆ ನಮಗೆ ನಂಬಿಕೆ ಇತ್ತು. ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಜೈಲಿನ ವಾತಾವರಣ ಗಾಬರಿಯಾಗುವಂತಿದೆ. ಕೈದಿಗಳಲ್ಲಿ ಶ್ರೀಮಂತ, ಬಡವ, ಸಾಹಿತಿ, ರಾಜಕಾರಣಿ ಎಂಬ ಬೇಧಭಾವ ಇರಬಾರದು. ಆದರೆ, ದರ್ಶನ್ ಪ್ರಕರಣದಲ್ಲಿ ಲೋಪವಾಗಿದೆ. ಮುಖ್ಯಮಂತ್ರಿಯವರು ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕಾಶಿನಾಥಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News