×
Ad

ರಾಜ್ಯದಲ್ಲಿ ಡೇಟಾ ಕೇಂದ್ರ ಸ್ಥಾಪನೆಗೆ ʼಸಿಫಿʼ, ʼಭಾರತಿʼ ಒಲವು: ಎಂ.ಬಿ.ಪಾಟೀಲ್

ʼಕಂಪೆನಿಗಳ ಜತೆಗಿನ ಚರ್ಚೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿʼ

Update: 2026-01-22 00:22 IST

Photo: X/@MBPatil

ದಾವೋಸ್,: ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಸಿಫಿ ಟೆಕ್ನಾಲಜೀಸ್ ಮತ್ತು ಭಾರತಿ ಎಂಟರ್ ಪ್ರೈಸಸ್ ರಾಜ್ಯದ ದ್ವಿತೀಯ ಸ್ತರದ ನಗರಗಳಲ್ಲಿ ಡೇಟಾ ಕೇಂದ್ರಗಳನ್ನು ತೆರೆಯಲು ಆಸಕ್ತಿ ವ್ಯಕ್ತಪಡಿಸಿದೆ. ಜತೆಗೆ ಪಾನೀಯ ತಯಾರಿಕೆ ವಲಯದಲ್ಲಿ ಕಾಲ್ರ್ಸ್ ಬರ್ಗ್ ಗ್ರೂಪ್ ರಾಜ್ಯದಲ್ಲಿ 350 ಕೋಟಿ ರೂ. ಹೂಡಿಕೆಯೊಂದಿಗೆ ಬಾಟ್ಲಿಂಗ್ ಘಟಕ ಸ್ಥಾಪಿಸುವ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಬುಧವಾರ ಸ್ವಿಟ್ಜಲೆರ್ಂಡಿನ ದಾವೋಸ್ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಸಮಾವೇಶದ ಮೂರನೆಯ ದಿನ ಅವರು ಹಲವು ಕಂಪೆನಿಗಳ ಜೊತೆ ಬಂಡವಾಳ ಹೂಡಿಕೆ ಮತ್ತು ವಿಸ್ತರಣೆ ಸಂಬಂಧ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದರು. ಈ ಪೈಕಿ ಭಾರತಿ ಎಂಟರ್ ಪ್ರೈಸಸ್ ಉಪಾಧ್ಯಕ್ಷ ರಾಜನ್ ಭಾರತಿ ಮಿತ್ತಲ್ ಜತೆಗಿನ ಮಾತುಕತೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು.

ಉದ್ಯಮಿಗಳ ಜತೆಗಿನ ಸಭೆಗಳ ಬಗ್ಗೆ ಮಾಹಿತಿ ನೀಡಿರುವ ಸಚಿವ ಪಾಟೀಲ್, ಬೆಂಗಳೂರಿನಲ್ಲಿರುವ ಹಲವು ಡೇಟಾ ಕೇಂದ್ರಗಳಲ್ಲಿ ಸಿಫಿ ಟೆಕ್ನಾಲಜೀಸ್ ಈಗಾಗಲೇ ಸಾಕಷ್ಟು ಹೂಡಿಕೆ ಮಾಡಿದ್ದು, ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಅದು ಅಭಿವೃದ್ಧಿ ಪಡಿಸಿರುವ ಡೇಟಾ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿದ್ದು, ಎರಡನೇ ಸ್ತರದ ನಗರಗಳ ಮೇಲೂ ಅದು ಆಸಕ್ತಿ ತಾಳಿದೆ. ಈ ನಿಟ್ಟಿನಲ್ಲಿ ಅದು ಸಂಪರ್ಕ ವ್ಯವಸ್ಥೆ ಮತ್ತು ಭೂಮಿಯ ಲಭ್ಯತೆ ಇತ್ಯಾದಿಗಳ ಬಗ್ಗೆ ಚರ್ಚಿಸಿದೆ ಎಂದಿದ್ದಾರೆ.

ಭಾರತಿ ಎಂಟರ್ ಪ್ರೈಸಸ್ ರಾಜ್ಯದಲ್ಲಿ ಇದುವರೆಗೆ 13ಸಾವಿರ ಕೋಟಿ ರೂ.ಹೂಡಿಕೆ ಮಾಡಿದೆ. ಇದೂ ರಾಜ್ಯದಲ್ಲಿ ಮತ್ತೊಂದು ಡೇಟಾ ಕೇಂದ್ರ ಸ್ಥಾಪಿಸುವ ಒಲವು ಹೊಂದಿದ್ದು, ಮಾತುಕತೆಯ ಸಂದರ್ಭದಲ್ಲಿ ಪ್ರಸ್ತಾಪವಾಗಿದೆ. ಪೊರ್ಜಿಂಗ್ ಮತ್ತು ಪ್ರಿಸಿಷನ್ ಎಂಜಿನಿಯರಿಂಗ್ ಕಂಪೆನಿಯಾಗಿರುವ ಭಾರತ್ ಫೋರ್ಜ್ ಲಿಮಿಟೆಡ್ ರಾಜ್ಯದಲ್ಲಿ ಮತ್ತಷ್ಟು ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ನಮ್ಮಿಂದ ಮಾಹಿತಿ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಫ್ರಾನ್ಸ್ ಮೂಲದ ಎಐ ಕಂಪೆನಿ ಮಿಸ್ಟ್ರಾಲ್ ಎಐ, ಬೆಂಗಳೂರಿನಲ್ಲಿ ಹಂತಹಂತವಾಗಿ ತನ್ನ ಜಿಸಿಸಿ/ಆರ್ ಮತ್ತು ಡಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ಉತ್ಸುಕವಾಗಿದೆ. ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳಿಗೆ ಹೆಸರಾಗಿರುವ ಅಮೆರಿಕ ಮೂಲದ ಫಿಲಿಪ್ ಮಾರಿಸ್ ಕಂಪೆನಿ ರಾಜ್ಯದಲ್ಲಿ ಹೂಡಿಕೆ ಮಾಡಿ, ಧೂಮರಹಿತ ಉತ್ಪನ್ನಗಳನ್ನು ತಯಾರಿಸುವ ಇಚ್ಛೆಯನ್ನು ಹಂಚಿಕೊಂಡಿದೆ. ಬೆಲ್ ರೈಸ್ ಕಂಪೆನಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬಯಸಿದೆ ಎಂದು ಪಾಟೀಲ್ ನುಡಿದರು.

‘ಲಂಡನ್ನಿನ ಅಗ್ರಗಣ್ಯ ವಿ.ವಿ.ಗಳಲ್ಲಿ ಒಂದಾಗಿರುವ ಇಂಪೀರಿಯಲ್ ಕಾಲೇಜು, ಡಾಬಸಪೇಟೆ-ದೊಡ್ಡಬಳ್ಳಾಪುರದ ಮಧ್ಯೆ ಅಸ್ತಿತ್ವಕ್ಕೆ ಬರುತ್ತಿರುವ ಕ್ವಿನ್‍ಸಿಟಿಯಲ್ಲಿ ತನ್ನ ಸಂಶೋಧನಾ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಕೇಂದ್ರವನ್ನು ಆರಂಭಿಸುವ ಕುರಿತು ಮಾತುಕತೆ ನಡೆಸಿದೆ. ಇಂಪೀರಿಯಲ್ ಕಾಲೇಜು ಈಗಾಗಲೇ ಬೆಂಗಳೂರಿನಲ್ಲಿ ಇನ್ನೋವೇಶನ್ ಹಬ್ ಹೊಂದಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿದೆ. ಅದು ವಿಜ್ಞಾನ, ಎಂಜಿನಿಯರಿಂಗ್, ಔಷಧ ವಿಜ್ಞಾನ ಮತ್ತು ಬಿಝಿನೆಸ್ ವಿಚಾರಗಳ ಕಲಿಕೆಯಲ್ಲಿ ಉನ್ನತ ಮಟ್ಟದಲ್ಲಿದ್ದು, ನಮ್ಮಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಮತ್ತಷ್ಟು ಸಹಯೋಗದ ಮೂಲಕ ಸಂಶೋಧನಾ ಚಟುವಟಿಕೆ ನಡೆಸಲು ತುದಿಗಾಲಲ್ಲಿ ನಿಂತಿದೆ. ಆ ವಿವಿಯ ಮುಖ್ಯಸ್ಥ ಪ್ರೊ.ಹಗ್ ಬ್ರಾಡಿ ಅವರು ಲಂಡನ್ನಿನಲ್ಲಿರುವ ಕ್ಯಾಂಪಸ್ಸಿಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ’

ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News