ಅರ್ಹತಾ ಪ್ರಮಾಣಪತ್ರ ನವೀಕರಣಕ್ಕೆ ಬರುವ ವಾಹನಗಳ ತಪಾಸಣೆಗೆ ಕಾರ್ಯವಿಧಾನ (ಎಸ್‍ಒಪಿ) ಪಾಲಿಸುವಂತೆ ಆದೇಶ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಅರ್ಹತಾ ಪ್ರಮಾಣಪತ್ರ ನವೀಕರಣಕ್ಕೆ ಬರುವ ವಾಹನಗಳ ತಪಾಸಣೆಗೆ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (ಎಸ್‍ಒಪಿ) ಪಾಲಿಸುವಂತೆ ಸಾರಿಗೆ ಇಲಾಖೆ ಆದೇಶಿಸಿದೆ.
ನೋಂದಣಿ ಪ್ರಾಧಿಕಾರದ ಕಚೇರಿಯ ನಿಗದಿತ ಜಾಗದಲ್ಲಿ ಮಾತ್ರ ಅರ್ಹತಾ ಪ್ರಮಾಣ ಪತ್ರ ನವೀಕರಣಕ್ಕೆ ಬರುವ ವಾಹನಗಳನ್ನು ಹಿರಿಯ ಮೋಟಾರು ವಾಹನ ನಿರೀಕ್ಷಕರು ಖುದ್ದಾಗಿ ಪರಿಶೀಲಿಸಿ, ಅರ್ಹತಾ ಪ್ರಮಾಣಪತ್ರವನ್ನು ನವೀಕರಿಸಬೇಕು.
ವಾಹನಗಳನ್ನು ಪರಿಶೀಲಿಸುವ ಹಿರಿಯ ಮೋಟಾರು, ಮೋಟಾರು ವಾಹನ ನಿರೀಕ್ಷಕರು ಅವರ ಹಾಗೂ ವಾಹನದ ವಾಹನದ ನಂಬರ್ ಪ್ಲೇಟ್ ಸೇರಿ ಜಿಪಿಎಸ್ ಫೋಟೊ ಲೊಕೇಷನ್ ಆಪ್ ಬಳಸಿ ದಿನಾಂಕ, ಸಮಯ ಮತ್ತು ಸ್ಥಳ ಸೃಜನೆಯಾಗುವಂತೆ ಛಾಯಾಚಿತ್ರವನ್ನು ತೆಗೆದು ತಮ್ಮ ಕಚೇರಿಯ ನೋಂದಣಿ ಪ್ರಾಧಿಕಾರಿಗಳ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್‍ನಲ್ಲಿ ಸಲ್ಲಿಸಬೇಕು. ನೋಂದಣಿ ಪ್ರಾಧಿಕಾರಿಗಳ, ಕಚೇರಿ ಮುಖ್ಯಸ್ಥರ ವಾಟ್ಸ್ ಆಪ್‍ನಲ್ಲಿ ಹಿರಿಯ ಮೋಟಾರು, ಮೋಟಾರು ವಾಹನ ನಿರೀಕ್ಷಕರಿಂದ ಸಲ್ಲಿಕೆಯಾಗುವ ಆಯಾ ದಿವಸದ ವಾಹನಗಳ ಛಾಯಾಚಿತ್ರಗಳು ವಾಹನ್ ತಂತ್ರಾಂಶದಲ್ಲಿ ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಬೇಕು.
ಸಂಬಂಧಪಟ್ಟ ಕಚೇರಿಯ ನೋಂದಣಿ ಪ್ರಾಧಿಕಾರಿಗಳ, ಕಚೇರಿ ಮುಖ್ಯಸ್ಥರು ಅರ್ಹತಾ ಪ್ರಮಾಣಪತ್ರ ನವೀಕರಣಕ್ಕೆ ಕಚೇರಿಗೆ ಬರುವ ವಾಹನಗಳಲ್ಲಿ ಕನಿಷ್ಠ ಶೇ.20ರಷ್ಟು ವಾಹನಗಳನ್ನು ಖುದ್ದಾಗಿ ಪರಿಶೀಲಿಸಿ ಮೇಲ್ವಿಚಾರಣೆ ಮಾಡಬೇಕು. ಎಲ್ಲ ವಿಭಾಗದ ಜಂಟಿ ಸಾರಿಗೆ ಆಯುಕ್ತರು ಮಾನದಂಡಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವ ಕುರಿತು ಕಚೇರಿ ಸಮಯದಲ್ಲಿ ಅಥವಾ ಮಾಸಿಕ ಸಭೆಯಲ್ಲಿ ಪರಿಶೀಲಿಸಿ ಖಚಿತಪಡಿಸಿಕೊಂಡು ವರದಿಯನ್ನು ನೀಡಬೇಕು.
ಇತರೆ ರಾಜ್ಯದ ವಾಹನಗಳ ಅರ್ಹತಾ ಪ್ರಮಾಣ ಪತ್ರ ನವೀಕರಣವನ್ನು ಹಿರಿಯ ಮೋಟಾರು, ಮೋಟಾರು ವಾಹನ ನಿರೀಕ್ಷಕರು ಭೌತಿಕವಾಗಿ ಪರಿಶೀಲಿಸಿದ ನಂತರ ಖುದ್ದಾಗಿ ಕಚೇರಿ ಮುಖ್ಯಸ್ಥರೇ ಮೇಲ್ವಿಚಾರಣೆಯನ್ನು ಮಾಡಬೇಕು.
ಫೆ.2ರಿಂದ ಹಂತ ಹಂತವಾಗಿ ರಾಜ್ಯದ ಎಲ್ಲ ನೋಂದಣಿ ಪ್ರಾಧಿಕಾರಿಗಳ ಕಚೇರಿಯಲ್ಲಿ ಎಂ-ಫಿಟ್ನೆಸ್ ಆಪ್ ಅನ್ನು ಜಾರಿಗೊಳಿಸುವ ಸಂಬಂಧ ಈಗಾಗಲೇ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ವಾಹನಗಳು ಕಡ್ಡಾಯವಾಗಿ ಕಚೇರಿಗಳಿಗೆ ಹಾಜರಾಗಬೇಕು. ವಾಹನಗಳ ಛಾಯಾಚಿತ್ರ ಮತ್ತು ಕೋ-ಆರ್ಡಿನೆಟ್ಸ್‍ಗಳನ್ನು ಪಡೆದು ದಾಖಲಿಸದ ನಂತರವಷ್ಟೇ ಅರ್ಹತಾ ಪ್ರಮಾಣಪತ್ರವನ್ನು ನೀಡುವ ಕುರಿತು ತಾಂತ್ರಿಕವಾಗಿ ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲೇ ಅಳವಡಿಸಲಾಗುತ್ತದೆ. ಅಲ್ಲಿಯ ವರೆಗೆ ಎಲ್ಲ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.