ರಾಜ್ಯಪಾಲರು ಕಾನೂನು, ನಿಯಾವಳಿಗಳಿಗೆ ಬದ್ಧರಾಗಿರುತ್ತಾರೆ ಎಂಬ ವಿಶ್ವಾಸವಿದೆ: ಸ್ಪೀಕರ್ ಯು.ಟಿ.ಖಾದರ್
ಸ್ಪೀಕರ್ ಯು.ಟಿ.ಖಾದರ್ (File Photo)
ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಹಾಗೂ ವಿಬಿ: ಜಿ ರಾಮ್ ಜಿ ಕಾಯ್ದೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನವನ್ನು ಜ.22 ರಿಂದ 31ರವರೆಗೆ ನಡೆಸಲು ನಿರ್ಧರಿಸಲಾಗಿದೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.22ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಜ.23ರಂದು ಮಾಜಿ ಸಚಿವ ಭೀಮಣ್ಣ ಖಂಡ್ರೆ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಜ.27ರಿಂದ ಪ್ರಶ್ನೋತ್ತರ ಕಲಾಪವು ಇರಲಿದೆ. ಕೇಂದ್ರ ಸರಕಾರದ ವಿಬಿ: ಜಿ ರಾಮ್ ಜಿ ಕಾಯ್ದೆಗೆ ಸಂಬಂಧಿಸಿದಂತೆ ಚರ್ಚೆಯ ಸ್ವರೂಪ ಹೇಗಿರಲಿದೆ ಎಂಬುದರ ಕುರಿತು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಖಾದರ್ ತಿಳಿಸಿದರು.
ತಮಿಳುನಾಡು ಹಾಗೂ ಕೇರಳದಲ್ಲಿ ರಾಜ್ಯಪಾಲರು ಸರಕಾರದ ಭಾಷಣವನ್ನು ಸಂಪೂರ್ಣವಾಗಿ ಓದಿಲ್ಲ. ನಮ್ಮ ರಾಜ್ಯದಲ್ಲೂ ಇದೇ ರೀತಿಯ ಸಂಘರ್ಷ ಎದುರಾಗಲಿದೆಯೇ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೀಕರ್, ನಮ್ಮ ರಾಜ್ಯಪಾಲರು ಹಿರಿಯರು, ಅನುಭವಿಗಳು, ಪ್ರಜಾಪ್ರಭುತ್ವ ಹಾಗೂ ಕಾನೂನು, ನಿಯಾವಳಿಗಳಿಗೆ ಬದ್ಧರಾಗಿರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸರಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಲೇಬೇಕು. ಭಾಷಣದಲ್ಲಿ ಯಾವುದೆ ಅಂಶವನ್ನು ಸೇರಿಸಲು, ತೆಗೆದು ಹಾಕಲು ಅವರಿಗೆ ಅಧಿಕಾರ ಇಲ್ಲ. ಸರಕಾರ ಕೊಟ್ಟಿರುವ ಭಾಷಣವನ್ನು ರಾಜ್ಯಪಾಲರು ಓದಲೇಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿರುವುದನ್ನು ನಾನು ಅನುಮೋದಿಸುತ್ತೇನೆ ಎಂದು ಖಾದರ್ ತಿಳಿಸಿದರು.