ವಿದೇಶಿ ಹೂಡಿಕೆಯಿಂದ ಷೇರು ಖರೀದಿ ಆರೋಪ: ಕಾಫಿ ಡೇ ವಿರುದ್ಧದ ಫೆಮಾ ಪ್ರಕರಣದ ವಿಚಾರಣೆ ಮುಂದೂಡಲು ಈಡಿಗೆ ಹೈಕೋರ್ಟ್ ಸೂಚನೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿದೇಶಿ ಕಂಪನಿಗಳಿಂದ ಪಡೆದಿರುವ ಕೋಟ್ಯಂತರ ರೂ. ಹೂಡಿಕೆ ಹಣವನ್ನು ಭಾರತದ ಕಂಪನಿಗಳಲ್ಲಿ ಷೇರು ಖರೀದಿಸಲು ವಿನಿಯೋಗಿಸಿದ ಆರೋಪ ಪ್ರಕರಣದಲ್ಲಿ 'ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್' ವಿರುದ್ಧದ ವಿಚಾರಣೆಯನ್ನು ಮುಂದೂಡುವಂತೆ ಜಾರಿ ನಿರ್ದೇಶನಾಲಯಕ್ಕೆ (ಈಡಿ) ಹೈಕೋರ್ಟ್ ಸೂಚಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ 2022ರ ನವೆಂಬರ್ 3ರ ದೂರು ಮತ್ತು ನವೆಂಬರ್ 23ರಂದು ಜಾರಿ ಮಾಡಿರುವ ಶೋಕಾಸ್ ನೋಟಿಸ್ ಹಾಗೂ ಪ್ರಕರಣದ ವಿಚಾರಣಾ ಪ್ರಕ್ರಿಯೆಗೆ ಹಾಜರಾಗಲು ಸೂಚಿಸಿ 2026ರ ಜನವರಿ 7ರಂದು ನೀಡಿರುವ ನೋಟಿಸ್ ರದ್ದು ಕೋರಿ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಪ್ರತಿನಿಧಿ ಸದಾನಂದ ಪೂಜಾರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 30ರಂದು ನಿಗದಿಯಾಗಿದ್ದ ಅರ್ಜಿದಾರ ಕಂಪನಿಯ ವಿಚಾರಣಾ ಪ್ರಕ್ರಿಯೆಯನ್ನು ನ್ಯಾಯಾಲಯದ ಮುಂದಿನ ವಿಚಾರಣೆವರೆಗೆ ಮುಂದೂಡುವಂತೆ ಈಡಿ ವಿಶೇಷ ನಿರ್ದೇಶಕರಿಗೆ ಸೂಚಿಸಿ ಮಧ್ಯಂತರ ಆದೇಶ ಮಾಡಿತಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ಇಡಿ ನಿರ್ದೇಶಕರು, ವಿಶೇಷ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, 2009ರಲ್ಲಿ ನಡೆದಿದೆ ಎನ್ನಲಾದ ಕೃತ್ಯಕ್ಕಾಗಿ 2022ರಲ್ಲಿ ಇಡಿ ದೂರು ದಾಖಲಿಸಿ, ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಈ ವಿಳಂಬವು ಇಡೀ ಪ್ರಕ್ರಿಯೆಗಳಿಗೆ ಮಾರಕವಾಗುತ್ತದೆ ಎಂದರಲ್ಲದೆ, ಫೆಮಾ ಸೆಕ್ಷನ್ 13ರ ಅಡಿಯಲ್ಲಿನ ನ್ಯಾಯನಿರ್ಣಯದ ಉದ್ದೇಶಕ್ಕಾಗಿ 2014ರ ಸೆಪ್ಟೆಂಬರ್ 26ರ ತಾಂತ್ರಿಕ ಸುತ್ತೋಲೆಯ ಪ್ರಕಾರ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಿಚಾರಣಾ ಪ್ರಾಧಿಕಾರವು ನೋಟಿಸ್ ಪಡೆದವರ ವಿರುದ್ಧ ಏಕೆ ಪ್ರಕ್ರಿಯೆ ಮುಂದುವರಿಯಲು ಉದ್ದೇಶಿಸಿದೆ ಎಂಬುದರ ಕುರಿತು ಒಂದು ಅಭಿಪ್ರಾಯವನ್ನು ರೂಪಿಸಬೇಕು ಹಾಗೂ ಆ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ದಾಖಲಿಸಿ, ಪ್ರತಿಯನ್ನು ಸಂಬಂಧಪಟ್ಟವರಿಗೆ ಒದಗಿಸಬೇಕು. ಆದರೆ, ಹಾಲಿ ಪ್ರಕರಣದಲ್ಲಿ ನ್ಯಾಯನಿರ್ಣಯ ಪ್ರಕ್ರಿಯೆ ಮುಂದುವರಿಸಲು ಇರುವ ಕಾರಣಗಳನ್ನು ಅರ್ಜಿದಾರರಿಗೆ ನೀಡಿಲ್ಲ. ಅದರ ಅನುಪಸ್ಥಿತಿಯಲ್ಲಿ ಅರ್ಜಿದಾರರ ವಿರುದ್ಧದ ವಿಚಾರಣೆ ಅನುಮತಿಸಲಾಗದು ಎಂದು ಆಕ್ಷೇಪಿಸಿದರಲ್ಲದೆ, ಇದೇ 30ರಂದು ನಿಗದಿಯಾಗಿರುವ ವಿಚಾರಣೆಯನ್ನು ಮುಂದೂಡುವಂತೆ ಮಧ್ಯಂತರ ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಪ್ರಕರಣದಲ್ಲಿ ಈಡಿ ದಾಖಲಿಸಿರುವ ದೂರು ಹಾಗೂ ಶೋಕಾಸ್ ನೋಟಿಸ್ ರದ್ದುಕೋರಿ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಾಳವಿಕಾ ಹೆಗ್ಡೆ ಸಲ್ಲಿಸಿದ್ದ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಾಳವಿಕಾ ಅವರಿಗೆ 2022ರ ನವೆಂವರ್ 23ರಂದು ಜಾರಿ ಮಾಡಲಾಗಿದ್ದ ಶೋಕಾಸ್ ನೋಟಿಸ್ ಮತ್ತು ಅದರಡಿಯ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು.