ರಾಮನಗರ ಇನ್ಮುಂದೆ ʼಬೆಂಗಳೂರು ದಕ್ಷಿಣ ಜಿಲ್ಲೆʼ : ಡಿಸಿಎಂ ಡಿ.ಕೆ.ಶಿವಕುಮಾರ್
PC:x/@DKShivakumar
ಬೆಂಗಳೂರು : ರಾಮನಗರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ದಕ್ಷಿಣ’ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಇಂದು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ರಾಮನಗರವು ಜಿಲ್ಲಾ ಕೇಂದ್ರವಾಗಿ ಮುಂದುವರೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರದ ಈ ನಿರ್ಧಾರದಿಂದ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಈ ಹಿಂದೆ ರಾಮನಗರ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚನ್ನಪಟ್ಟಣ, ಮಾಗಡಿ, ಕನಕಪುರ ಎಲ್ಲವೂ ಬೆಂಗಳೂರು ಜಿಲ್ಲೆಗೆ ಸೇರಿದ್ದವು. ಎಲ್ಲ ಕಾನೂನುಗಳು, ನಿಯಮಾವಳಿಗಳನ್ನು ಪರಿಶೀಲಿಸಿದ ಬಳಿಕವೇ ನಮ್ಮ ಬೆಂಗಳೂರಿನ ಹೆಸರನ್ನು ಉಳಿಸಿಕೊಳ್ಳಲು ಈ ತೀರ್ಮಾನ ಮಾಡಿದ್ದೇವೆ ಎಂದರು.
ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಲು ತಡೆಯಲು ಕೇಂದ್ರ ಸರಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಅವರಿಗೆ ಮಾಹಿತಿ ಕೊಡಬೇಕಾದದ್ದು ನಮ್ಮ ಕರ್ತವ್ಯ. ಅದನ್ನು ಮಾಡಿದ್ದೇವೆ. ಜಿಲ್ಲೆಗಳ ಹೆಸರು ಮರು ನಾಮಕರಣ ಮಾಡುವುದು ರಾಜ್ಯದ ವಿಷಯ. ಗದಗ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳನ್ನು ಮಾಡಿದ್ದೇವೆ. ಅಷ್ಟೇ ಅಲ್ಲ, ರಾಮನಗರ ಜಿಲ್ಲೆಯನ್ನು ರಚನೆ ಮಾಡುವಾಗಲೂ ಕೇಂದ್ರದ ಅನುಮತಿಯನ್ನು ಪಡೆದಿರಲಿಲ್ಲ ಎಂದು ಶಿವಕುಮಾರ್ ತಿಳಿಸಿದರು.
ಭೂ ದಾಖಲೆಗಳೆಲ್ಲವೂ ಬದಲಾಗಲಿದೆ. ಇನ್ನು ಮುಂದೆ ರಾಮನಗರವು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಸಿಕೊಳ್ಳುತ್ತದೆ. ಈ ಸಂಬಂಧ ಅಧಿಸೂಚನೆಯೂ ಪ್ರಕಟವಾಗಲಿದೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಪಡೆದಿರುವ ವಿವಿಧ ಸಂಘ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಸಂಪೂರ್ಣ ಗುತ್ತಿಗೆ ಮೌಲ್ಯವನ್ನು ಪ್ರಾಧಿಕಾರವು ಪ್ರಕಟಣೆ ನೀಡಿದ 120 ದಿನಗಳೊಳಗಾಗಿ ಪಾವತಿಸಿದಲ್ಲಿ ಒಂದು ಬಾರಿಯ ಕ್ರಮವಾಗಿ ನಿಯಮಾನುಸಾರ ವಿಧಿಸಲಾಗುವ ಬಡ್ಡಿಯ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಬೆಂಗಳೂರಿನ ಹೆಬ್ಬಾಳ(ಎಸ್ಟೀಮ್ ಮಾಲ್) ಜಂಕ್ಷನ್‍ನಿಂದ ಎಚ್‍ಎಸ್‍ಆರ್ ಲೇಔಟ್ ಸಿಲ್ಕ್ ಬೋರ್ಡ್ ಜಂಕ್ಷನ್‍ವರೆಗೆ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಯನ್ನು ಎರಡು ಪ್ಯಾಕೇಜ್‍ಗಳಲ್ಲಿ ಅನುಷ್ಠಾನಗೊಳಿಸಲು ಸಿದ್ಧಪಡಿಸಿರುವ 17,780 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ. ಈ ಯೋಜನೆಗೆ ಜಾಗತಿಕ ಟೆಂಡರ್ ಕರೆಯಲು ತೀರ್ಮಾನ ಮಾಡಿದ್ದೇವೆ. ಟನಲ್ ರಸ್ತೆಯ ವಿನ್ಯಾಸದ ಕುರಿತು ನಾನು ಹಾಗೂ ಮುಖ್ಯಮಂತ್ರಿ ಕೂತು ತಾಂತ್ರಿಕ ತಜ್ಞರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಅವರು ತಿಳಿಸಿದರು.
ಬೆಂಗಳೂರು ಮೆಟ್ರೋ ರೈಲು ಹಂತ-3 ಯೋಜನೆಯ 40,425 ಕೋಟಿ ರೂ.ಗಳ ಪರಿಷ್ಕಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ತ್ಯಾಜ್ಯದ ಸಂಗ್ರಹಣೆ ಮತ್ತು ಸಾಗಾಣಿಕೆ ಸೇವೆಗಾಗಿ 7 ವರ್ಷಗಳ ಅವಧಿಗೆ 4,791.95 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ 33 ಪ್ಯಾಕೇಜ್‍ಗಳನ್ನಾಗಿ ವಿಂಗಡಿಸಿ ಟೆಂಡರ್ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಶಿವಕುಮಾರ್ ಹೇಳಿದರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಲು ನಿರಕ್ಷೇಪಣಾ ಪತ್ರ ಕೋರಿ, ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಮಂತ್ರಾಲಯವು ತಿರಸ್ಕರಿಸಿತ್ತು. ಭೂಮಿ ಹಾಗೂ ಭೂ ಕಂದಾಯ ವಿಷಯವು ರಾಜ್ಯ ವಿಷಯವಾಗಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ (4) ರಲ್ಲಿ ರಾಜ್ಯ ಸರಕಾರಕ್ಕೆ ವಲಯಗಳನ್ನು, ತಾಲೂಕುಗಳನ್ನು, ಜಿಲ್ಲೆಗಳನ್ನು ರಚಿಸಲು, ಬದಲಾಯಿಸಲು, ರದ್ದುಪಡಿಸಲು ಹಾಗೂ ಹೆಸರನ್ನು ಮರುನಾಮಕರಣ ಮಾಡಲು ಅವಕಾಶ ಕಲ್ಪಿಸಿದೆ.
-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಲೇಖಕಿ ಬಾನು ಮುಷ್ತಾಕ್ ಇಚ್ಛೆ ವ್ಯಕ್ತಪಡಿಸಿದರೆ, ಬೆಂಗಳೂರು ನಗರದಲ್ಲಿ ಬಿಡಿಎದಲ್ಲಿ ಅವರಿಗೆ ಜಿ ಕೆಟಗರಿ ನಿವೇಶನ ನೀಡಲು ಸಚಿವ ಸಂಪುಟ ತೀರ್ಮಾನ ಮಾಡಿದೆ.
-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಬಾನು ಮುಷ್ತಾಕ್‍ಗೆ ಸಂಪುಟ ಅಭಿನಂದನೆ: ಲೇಖಕಿ ಬಾನು ಮುಷ್ತಾಕ್ ಅವರ ಕೃತಿಗೆ ಜಗತ್ತಿನ ಪ್ರತಿಷ್ಠಿತ ಅಂತರ್‍ರಾಷ್ಟ್ರೀಯ ಬೂಕರ್ ಪ್ರಶಸ್ತಿಯು ಸಂದಿದೆ. ಈ ಕೃತಿಯನ್ನು ದೀಪಾ ಬಸ್ತಿಯವರು ಇಂಗ್ಲಿಷ್ ಭಾಷೆಗೆ ‘ಹಾರ್ಟ್ ಲ್ಯಾಂಪ್’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಈ ಪ್ರಶಸ್ತಿಯು ಕನ್ನಡ, ಕರ್ನಾಟಕ ಮತ್ತು ದೇಶದ ಗೌರವ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟವು ಬಾನು ಮುಷ್ತಾಕ್ ಹಾಗೂ ದೀಪಾ ಬಸ್ತಿ ಅವರಿಗೆ ಅಭಿನಂದನೆ ಸಲ್ಲಿಸಿ ನಿರ್ಣಯ ಕೈಗೊಂಡಿದೆ.
-ಎಚ್.ಕೆ.ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ