ಡಾ.ರೋನಾಲ್ಡ್ ಕೊಲಾಸೊ ನೇತೃತ್ವದಲ್ಲಿ ಸಿಎಂ-ಡಿಸಿಎಂರನ್ನು ಭೇಟಿಯಾದ ಹತ್ತಕ್ಕೂ ಹೆಚ್ಚು ದೇಶಗಳ 45 ಮಂದಿ ಕನ್ನಡಿಗ ಪ್ರತಿನಿಧಿಗಳ NRI ನಿಯೋಗ
ಶೀಘ್ರವೇ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
ಬೆಳಗಾವಿ: ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಸಚಿವಾಲಯವನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಖ್ಯಾತ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ ರೂಪುಗೊಂಡ ಹತ್ತಕ್ಕೂ ಹೆಚ್ಚು ದೇಶಗಳ 45 ಮಂದಿ ಕನ್ನಡಿಗ ಪ್ರತಿನಿಧಿಗಳ NRI ನಿಯೋಗವು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಭೇಟಿ ಮಾಡಿ ಅನಿವಾಸಿ ಕನ್ನಡಿಗರ ಸಮಸ್ಯೆ ಹಾಗು ಪ್ರತ್ಯೇಕ ಸಚಿವಾಲಯ-ಇಲಾಖೆಯನ್ನು ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದು, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಹೊಸದಾಗಿ ಪ್ರತ್ಯೇಕ ಸಚಿವಾಲಯ ಹಾಗು ಇಲಾಖೆಯನ್ನು ಆರಂಭಿಸಬೇಕಾದರೆ ಪಕ್ಷದ ಹೈಕಮಾಂಡ್ ಜೊತೆ ಮಾತನಾಡಬೇಕಾಗುತ್ತೆ, ಚರ್ಚಿಸಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ನಾನು ದಿಲ್ಲಿಗೆ ಆದಷ್ಟು ಬೇಗ ತೆರಳಿ, ಅಲ್ಲಿ ಹೈಕಮಾಂಡಿನೊಟ್ಟಿಗೆ ಮಾತನಾಡಿ, ಪ್ರತ್ಯೇಕ ಸಚಿವಾಲಯ ಹಾಗು ಇಲಾಖೆ ಸ್ಥಾಪನೆಗೆ ಮುಂದಿನ ಹೆಜ್ಜೆಯನ್ನಿಡುತ್ತೇನೆ ಎಂದು ಸಿದ್ದರಾಮಯ್ಯ ಭರವಸೆಯನ್ನು ನೀಡಿದ್ದಾರೆ.
ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ನೀಡಿರುವ ಇನ್ನೊಂದು ಗ್ಯಾರಂಟಿಯಾದ ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಉದ್ಯಮ ನಡೆಸಲು ಉತ್ತೇಜನ ನೀಡುವ ಉದ್ದೇಶದಿಂದ 1 ಸಾವಿರ ಕೋಟಿ ರೂ. ಆವರ್ತನ ನಿಧಿ ಬಗ್ಗೆಯೂ ಹೈಕಮಾಂಡ್ ಜೊತೆ ಮಾತನಾಡಿ, ಅದನ್ನು ಈಡೇರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಆಶ್ವಾಸನೆ ನೀಡಿದರು.
NRI ನಿಯೋಗಕ್ಕೆ ಸಾಥ್ ನೀಡಿದ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ, ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ, ಅನಿವಾಸಿ ಕನ್ನಡಿಗರ ಬೇಡೀಕೆಯನ್ನು ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯಗೆ ವಿಶೇಷ ಮನವಿಯನ್ನು ಮಾಡಿದರು.
ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡ ಸಂಘಟನೆಗಳ ಪ್ರತಿನಿಧಿಗಳ ಹೆಸರುಗಳ ಪಟ್ಟಿಯೊಂದಿಗೆ ಈ ಮನವಿ ಸರ್ಕಾರಕ್ಕೆ ಸಲ್ಲಿಸಲಾಯಿತು. ಮನವಿಯಲ್ಲಿ ಅನಿವಾಸಿ ಕನ್ನಡಿಗರ ದೀರ್ಘಕಾಲದ ಬೇಡಿಕೆಗಳಿಗೆ ಸರಕಾರ ತ್ವರಿತ ಮತ್ತು ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
NRI ನಿಯೋಗದ ನೇತೃತ್ವವನ್ನು ಖ್ಯಾತ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ ವಹಿಸಿದ್ದು, ಸೌದಿ ಅರೇಬಿಯಾದ ಖ್ಯಾತ ಉದ್ಯಮಿ ಝಕರಿಯಾ ಜೋಕಟ್ಟೆ, ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು(ದುಬೈ), KNRI ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ(ದುಬೈ), ಮೊಹಮ್ಮದ್ ಆಯಾಝ್ ಮಜೂರು(ಸೌದಿ ಅರೆಬಿಯಾ), ರವಿಕುಮಾರ್ ಶೆಟ್ಟಿ ಮೂಡಂಬೈಲ್(ದೋಹಾ-ಖತರ್), ಸಂದೇಶ್ ಆನಂದ್(ಖತರ್), ರಾಜಕುಮಾರ್ ಭಾಸ್ಕರ್(ಬಹರೈನ್), ಅಶ್ರಫ್ ಶಾ ಮಾಂತೂರು(ದುಬೈ), ಮನೋಜ್ ದೇಶಪಾಂಡೆ (ಪೋಲೆಂಡ್), ಅಜಿತ್ ಬಂಗೇರ (ಬಹರೈನ್), ಅರುಣ್ ಕುಮಾರ್ ಎಂ.ಕೆ.(ದುಬೈ), ಸರ್ವೋತ್ತಮ ಶೆಟ್ಟಿ(ಅಬುಧಾಬಿ), ಶೇಖ್ ಮುಝಫರ್(ಶಾರ್ಜಾ), ಸಚಿನ್ ಪರ್ಥ(ಪೋಲೆಂಡ್), ತೌಫಿಕ್ ಖಲಂದರ್ (ಸೌದಿ ಅರೆಬಿಯಾ), ಮೊಹಮ್ಮದ್ ಫಿರೋಝ್(ಸೌದಿ ಅರೆಬಿಯಾ), ಮೊಹಮ್ಮದ್ ಮುಸ್ತಾಕ್(ದುಬೈ), ಶಶಿಧರ್ ನಾಗರಾಜಪ್ಪ(ದುಬೈ), ಕೆ.ವಿ.ಕನಕರಾಜ (ಅಜ್ಮಾನ್), ಎಂ.ಆರ್. ಕಾಟಿಪಳ್ಳ ಇಸ್ಮಾಯಿಲ್ (ಸೌದಿ ಅರೆಬಿಯಾ), ಮೊಹಮ್ಮದ್ ಮನ್ಸೂರ್(ಬಹರೈನ್), ಅಬ್ದುಲ್ಲಾ ಮೋಯಿದಿನ್(ಖತರ್), ಸತೀಶ್ ಕುಮಾರ್(ಸೌದಿ ಅರೆಬಿಯಾ), ಮೊಹಮ್ಮದ್ ಸಲೀಂ(ಶಾರ್ಜಾ), ಪ್ರಭಾಕರ ಬಸವರಾಜು(ಕುವೈತ್), ಮಧ್ವರಾಜ್ ಅರುಣ್ ಕುಮಾರ್(ಕುವೈತ್), ಮಲ್ಲೇಶ್ ತೋಟದ್(ಇಟಲಿ), ಮಂಜುನಾಥ ಭೀಮರೆಡ್ಡಿ(ಇಟಲಿ), ಹರ್ಷ ಜಗದೀಶ್(ಸ್ವೀಡನ್), ಪ್ರವೀಣ್ ಕಲಾಸದ್(ಆಸ್ಟ್ರೇಲಿಯಾ), ಗಗನ್ ಮಂಜುನಾಥ ಗೌಡ(ಜರ್ಮನಿ), ಡಾ.ಸುಬ್ರಹ್ಮಣ್ಯ ಭಟ್(ಯು.ಎಸ್.ಎ), ಡಾ.ಅನ್ನಪೂರ್ಣ ಭಟ್(ಯು.ಎಸ್.ಎ), ಡಾ.ಶಾಕೀಲ್ (ಸೌದಿ ಅರೆಬಿಯಾ), ಅರುಣ್ ಕುಮಾರ್(ಆಸ್ಟ್ರೇಲಿಯಾ), ಅಭಿನವ್ ದೇಶಪಾಂಡೆ(ಹಂಗೇರಿ), ಮಧು(ಯು.ಎಸ್.ಎ), ರಮೇಶ್ ರಾಮಕೃಷ್ಣಯ್ಯ (ಆಸ್ಟ್ರೇಲಿಯಾ), ಪ್ರವೀಣ್(ಮೆಲ್ಬೋರ್ನ್-ಆಸ್ಟ್ರೇಲಿಯಾ) ಉಪಸ್ಥಿತರಿದ್ದರು.
ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ 100% ಪ್ರತ್ಯೇಕ ಸಚಿವಾಲಯ ಸ್ಥಾಪನೆ
ಅನಿವಾಸಿ ಕನ್ನಡಿಗರ ಬಹುಮುಖ್ಯ ಬೇಡಿಕೆಯಾಗಿರುವ 'ಪ್ರತ್ಯೇಕ ಸಚಿವಾಲಯ'ವನ್ನು ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗೆ 100% ಸ್ಥಾಪಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
NRI ನಿಯೋಗವು ಭೇಟಿಯಾಗಿ ಮನವಿ ನೀಡಿದ ವೇಳೆ ಮಾತನಾಡಿದ ಅವರು, ಅನಿವಾಸಿ ಕನ್ನಡಿಗರೊಂದಿಗೆ ನಾವು ಸದಾ ಕಾಲ ಇರುತ್ತೇವೆ. ಅವರ ಕಷ್ಟ, ಸಮಸ್ಯೆಗಳನ್ನು ಈಡೇರಿಸಲು ನಮ್ಮ ಸರಕಾರ ಸಿದ್ಧವಿದೆ. ಈ ಹಿನ್ನೆಲೆಯಲ್ಲಿ 2026ರ ಮಾರ್ಚ್ ಅಂತ್ಯದೊಳಗೆ 'ಪ್ರತ್ಯೇಕ ಸಚಿವಾಲಯ' ಸ್ಥಾಪನೆಯನ್ನು 100% ನಾವು ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.
ನಿಯೋಗವು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೂ ಮನವಿ ಪತ್ರ ನೀಡಿ, ಅನಿವಾಸಿ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದೆ.
ಅನಿವಾಸಿ ಕನ್ನಡಿಗರಿಗೆ ಸಂತೋಷದ ಭರವಸೆ ಸಿಕ್ಕಿದೆ: ಡಾ.ರೋನಾಲ್ಡ್ ಕೊಲಾಸೊ
ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಮ್ಮ ಬೇಡಿಕೆಗೆ ಸ್ಪಂದಿಸಿದ್ದು, ನಮ್ಮ ಪ್ರತ್ಯೇಕ ಸಚಿವಾಲಯದ ಸ್ಥಾಪನೆಗೆ ಶೀಘ್ರವೇ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು NRI ನಿಯೋಗದ ನೇತೃತ್ವವನ್ನು ವಹಿಸಿದ್ದ ಖ್ಯಾತ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ ಹೇಳಿದ್ದಾರೆ.
ಸಿಎಂ ಹಾಗು ಡಿಸಿಎಂ ಭೇಟಿ ಬಳಿಕ ಮಾತನಾಡಿದ ಕೊಲಾಸೊ, ನಮ್ಮ ಬೇಡಿಕೆಗಳನ್ನು ಸಿಎಂ ಹಾಗು ಡಿಸಿಎಂ ಮುಂದೆ ಮನವಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಅವರು ಸಂಪೂರ್ಣವಾಗಿ ಆಲಿಸಿದ್ದು, ಸಿಎಂ ಸಿದ್ದರಾಮಯ್ಯ ಅವರು ಇದನ್ನು ಗಂಭೀರವಾಗಿ ಪರಿಗಣಸಿ, ಇದರ ಸಾಧಕ ಬಾಧಕಗಳನ್ನು ಮುಂದಿನ ದಿನಗಳಲ್ಲಿ ಸಂಬಂಧಿಸಿದವರ ಜೊತೆ ಮಾತನಾಡಿ ಶೀಘ್ರವೇ ಈಡೇರಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಜೊತೆಗೆ ಡಿಸಿಎಂ ಅವರು ನಮಗೆ ಭರವಸೆ ನೀಡಿದ್ದು, 'ಈಗಾಗಲೇ ಕೊಟ್ಟ ಮಾತಿನಂತೆ 5 ಗ್ಯಾರಂಟಿಯನ್ನು ಯಶಸ್ವಿಯಾಗಿ ಜಾರಿಗೆ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಿಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಜಾರಿಗೆ ತರುವ ಕಾರ್ಯವನ್ನು ಮಾಡುತ್ತೇವೆ. ಅನಿವಾಸಿ ಕನ್ನಡಿಗರ ಕೊಡುಗೆಗಳನ್ನು ಸ್ಮರಿಸಿ ಸಂತೋಷದ ಸುದ್ದಿಯನ್ನು ಕೊಡುತ್ತೇವೆ' ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಪ್ರಮುಖ ಬೇಡಿಕೆಗಳು
► ಅನಿವಾಸಿ ಭಾರತೀಯರ ವ್ಯವಹಾರಗಳಿಗೆ ಮೀಸಲಾದ ಪ್ರತ್ಯೇಕ ಸಚಿವಾಲಯ ಮತ್ತು ಇಲಾಖೆಯನ್ನು ಕೂಡಲೇ ರಚನೆ ಮಾಡಬೇಕು.
► ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಥವಾ ಶಾಶ್ವತವಾಗಿ ಕರ್ನಾಟಕಕ್ಕೆ ಬಂದು ನೆಲೆನಿಲ್ಲಲು ಬಯಸುವ ಅನಿವಾಸಿ ಕನ್ನಡಿಗರನ್ನು ಬೆಂಬಲಿಸಲು ರೂ. 1,000 ಕೋಟಿ ಆವರ್ತ ನಿಧಿಯನ್ನು ಕೂಡಲೇ ಆರಂಭಿಸಬೇಕು.
► NRK ಗಳು ಸಾಮಾನ್ಯವಾಗಿ ಎದುರಿಸುವ ಆಸ್ತಿ ವಂಚನೆ, ಭೂ ವಿವಾದಗಳು ಮತ್ತು ಅಧಿಕಾರಶಾಹಿ ವಿಳಂಬಗಳಿಗೆ ಸಹಾಯ ಮಾಡಲು NRI ಕುಂದುಕೊರತೆ ಪರಿಹಾರ ಕೋಶವನ್ನು ರಚಿಸಬೇಕು.
► ಸಾಂಸ್ಕೃತಿಕ, ಶೈಕ್ಷಣಿಕ ಹಾಗು ತಂತ್ರಜ್ಞಾನ ವಿನಿಮಯ ಕಾರ್ಯಕ್ರಮಗಳನ್ನು ಬಲಪಡಿಸಲು ರಾಜ್ಯ ಮಟ್ಟದಲ್ಲಿ ಏಕ-ಗವಾಕ್ಷಿ ವ್ಯವಸ್ಥೆಯಂತೆ ಕಾರ್ಯ ನಿರ್ವಹಣೆ ಆಗಬೇಕು. ಇದರಿಂದ NRK ಸಮುದಾಯವು ರಾಜ್ಯ ಆಡಳಿತದೊಂದಿಗೆ ಸುಗಮವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ.
► ವಾರ್ಷಿಕ ಜಾಗತಿಕ ಕನ್ನಡಿಗ ಸಮಾವೇಶ ಆಯೋಜಿಸುವುದು, CSR ಮತ್ತು ರಾಜ್ಯಾಭಿವೃದ್ಧಿ ಯೋಜನೆಗಳಲ್ಲಿ NRK ಪಾಲ್ಗೊಳ್ಳುವಿಕೆಯನ್ನು ಸುಗಮಗೊಳಿಸುವುದು, ಕರ್ನಾಟಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸರ್ಕಾರಿ ಸೇವೆಗಳ ಸುಲಭವಾಗಿ ದೊರೆಯಲು NRI ಗುರುತಿನ ಚೀಟಿ ಪರಿಚಯಿಸುವುದು ಮತ್ತು ವಿದೇಶದ ಕನ್ನಡ ಸಂಘಟನೆಗಳೊಂದಿಗೆ ಸ್ಪಂದಿಸುವುದು.
► ಕರ್ನಾಟಕದ ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು NRK ಗಳನ್ನು ಪ್ರೋತ್ಸಾಹಿಸಬೇಕು. ವಿದೇಶದಲ್ಲಿರುವ ಕನ್ನಡಿಗರು ಘನತೆ ಮತ್ತು ಅವಕಾಶದೊಂದಿಗೆ ತವರಿಗೆ ಮರಳಲು ಅನುವು ಮಾಡಿಕೊಡುವ ಮೂಲಕ ಹಿಮ್ಮುಖ ವಲಸೆಯನ್ನು ಉತ್ತೇಜಿಸುವುದು. ಜೊತೆಗೆ ಉದ್ಯಮಗಳು, ಸ್ಟಾರ್ಟ್-ಅಪ್‌ಗಳು ಮತ್ತು ಕೌಶಲ್ಯ ಆಧಾರಿತ ಉಪಕ್ರಮಗಳನ್ನು ಆರಂಭಿಸಲು ಅನಿವಾಸಿ ಕನ್ನಡಿಗರನ್ನು ಬೆಂಬಲಿಸಬೇಕು.