ಐಟಿ-ಬಿಟಿ, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಕಾಯ್ದೆಗೆ ಒತ್ತಾಯಿಸಿ ಡಿ.12ಕ್ಕೆ ಮೆರವಣಿಗೆ: ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ
ಬೆಂಗಳೂರು: ಐಟಿ-ಬಿಟಿ ಕಂಪೆನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಒದಗಿಸುವ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಡಿ.12ರಂದು ನಗರದ ನ್ಯಾಷನಲ್ ಕಾಲೇಜು ಮೈದಾನದಿಂದ ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ಏರ್ಪಡಿಸಲಾಗಿದೆ. ನಂತರ ಸ್ವಾತಂತ್ರ್ಯ ಉದ್ಯಾನವದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
ಸೋಮವಾರ ನಾಗವಾರದಲ್ಲಿರುವ ಮಾನ್ಯತಾ ಟೆಕ್ಪಾರ್ಕ್ಗೆ ಭೇಟಿ ನೀಡಿ, ಐಟಿ-ಬಿಟಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗ ನೀಡಲಾಗಿದೆ ಎಂದು ಲೆಕ್ಕ ಕೇಳುವ ಕರವೇ ‘ಆಗ್ರಹ ಅಭಿಯಾನ’ದ 22ನೇ ದಿನವಾದ ಸುಮಾರು 45 ವಿವಿಧ ಐಟಿಬಿಟಿ, ಖಾಸಗಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ನಂತರ ಅವರು ಘೋಷಿಸಿದರು.
ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ವಿಧೇಯಕ, 2024 ಕೆಲವು ಪಟ್ಟಭದ್ರ ಶಕ್ತಿಗಳ ವಿರೋಧದಿಂದಾಗಿ ಜಾರಿಯಾಗಿಲ್ಲ. ಸರಕಾರ ಕೂಡಲೇ ಅದನ್ನು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ವೇದಿಕೆ ಬೃಹತ್ ಸ್ವರೂಪದ ಚಳವಳಿ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಜುಲೈ 2024ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ವಿಧೇಯಕಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ಕೆಲವು ಕನ್ನಡ ದ್ರೋಹಿ, ಕರ್ನಾಟಕ ದ್ರೋಹಿಗಳ ವಿರೋಧದಿಂದಾಗಿ ಸರಕಾರ ಇದನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಈ ಕರಡು ವಿಧೇಯಕದ ಪ್ರಕಾರ, ಖಾಸಗಿ ವಲಯದ ವ್ಯವಸ್ಥಾಪಕ ಹುದ್ದೆಗಳಲ್ಲಿ ಶೇ.50, ವ್ಯವಸ್ಥಾಪಕೇತರ ಹುದ್ದೆಗಳಲ್ಲಿ ಶೇ.70ರಿಂದ 75, ಹಾಗೂ ‘ಸಿ’ ಮತ್ತು 'ಡಿ' ದರ್ಜೆಯ ಹುದ್ದೆಗಳಲ್ಲಿ ಶೇ.100ರಷ್ಟು ಮೀಸಲಾತಿಯನ್ನು ಸ್ಥಳೀಯರಿಗೆ (ಕನ್ನಡಿಗರಿಗೆ) ನೀಡುವ ಪ್ರಸ್ತಾವ ಇತ್ತು. ಈ ಮಸೂದೆ ಕೂಡಲೇ ಜಾರಿಯಾಗಬೇಕು. ಇದು ಸರಕಾರದ ಬದ್ಧತೆಯ ವಿಷಯ ಎಂದು ಹೇಳಿದರು.
ಡಿ.12ರಂದು ರಾಜ್ಯದ ಮೂಲೆ ಮೂಲೆಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಸಾವಿರಾರು ಕಾರ್ಯಕರ್ತರು ಬೆಂಗಳೂರಿಗೆ ಧಾವಿಸಲಿದ್ದಾರೆ. ಸರಕಾರ ನಮ್ಮ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಮತ್ತು ಅಹೋರಾತ್ರಿ ಧರಣಿ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಮಾಡಬಾರದು. ಹಿಂದೆ ನಾಮಫಲಕ ಚಳವಳಿ ಸಂದರ್ಭದಲ್ಲಿ ಮಾಡಿದ ಹಾಗೆ ಸಂಘರ್ಷದ ವಾತಾವರಣ ನಿರ್ಮಿಸಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ದಾ.ಪಿ.ಆಂಜನಪ್ಪ, ವೀರಭದ್ರ, ಅಬ್ಬಿಗೆರೆ ವಿನೋದ್, ಪುಟ್ಟೇಗೌಡ, ಹಯಾತ್ ಕಾರ್ಗಲ್, ರಾಜ್ಯ ಕಾರ್ಯದರ್ಶಿ ಸುರೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಚ್.ರಾಘವೇಂದ್ರ, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್, ಬೆಂಗಳೂರು ನಗರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಗೌಡ ಮತ್ತಿತರರು ಹಾಜರಿದ್ದರು.