ಕಾಂಗ್ರೆಸ್ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ʼಮೂರನೇ ಶಕ್ತಿʼ ರಚನೆ ಬಗ್ಗೆ ಚಿಂತನೆ: ಸಿ.ಎಂ. ಇಬ್ರಾಹೀಂ
ಸಿ.ಎಂ. ಇಬ್ರಾಹೀಂ
ಬೆಂಗಳೂರು: ಕಾಂಗ್ರೆಸ್ ಪಕ್ಷವು ತನ್ನನ್ನು ತಾನು ತಿದ್ದಿಕೊಂಡು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದರೆ, ನಾವು ಅವರನ್ನು ಬೆಂಬಲಿಸಲು ಸಿದ್ಧರಿದ್ದೇವೆ. ಇನ್ನೆರಡು ತಿಂಗಳು ಕಾದು ನೋಡುತ್ತೇವೆ, ಒಂದು ವೇಳೆ ಭರವಸೆಗಳು ಈಡೇರದಿದ್ದರೆ ‘ಮೂರನೇ ಶಕ್ತಿ' (ಥರ್ಡ್ ಫ್ರಂಟ್) ರಚಿಸುವ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹೀಂ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳ ಕೆಲಸ ಸಮುದಾಯದ ಸಮಸ್ಯೆಗಳನ್ನು ಎತ್ತಿ ಹಿಡಿಯುವುದು ಮತ್ತು ಅವರ ಹಕ್ಕುಗಳಿಗಾಗಿ ಧ್ವನಿ ಎತ್ತುವುದಾಗಿದೆ. ಆದರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರು ಹಾಗೂ ಸಚಿವರು ಸಮುದಾಯಕ್ಕಾಗಿ ಏನು ಕೆಲಸವಾಗಿದೆ ಎಂಬುದನ್ನು ತಿಳಿಸಲಿ ಎಂದು ಆಗ್ರಹಿಸಿದರು.
ತನಗೆ ಸಚಿವ ಅಥವಾ ಸಂಸದನಾಗುವ ಯಾವುದೇ ಆಸೆಯಿಲ್ಲ, ಬದಲಾಗಿ ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಹಕ್ಕನ್ನು ಕೊಡಿಸುವುದೇ ತನ್ನ ಏಕೈಕ ಉದ್ದೇಶವಾಗಿದೆ ಎಂದು ಸಿ.ಎಂ.ಇಬ್ರಾಹೀಂ ತಿಳಿಸಿದರು.
ಕರ್ನಾಟಕದಲ್ಲಿ ತೃತೀಯ ರಂಗಕ್ಕೆ ಅವಕಾಶಗಳು ಇವೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಚುನಾವಣೆ ಎದುರಿಸಲು ದೊಡ್ಡ ಮಟ್ಟದ ಹಣಕಾಸಿನ ಅಗತ್ಯವಿದೆ. ಇಂದು ನನ್ನ ಕೈಯಲ್ಲಿ 200 ಕೋಟಿ ರೂಪಾಯಿ ಇದ್ದರೆ 40 ಸ್ಥಾನಗಳನ್ನು ಗೆದ್ದು ತರಬಲ್ಲೆ" ಎಂದು ಹೇಳಿದರು.