×
Ad

ಭೂಸ್ವಾಧೀನ ಹಿಂಪಡೆದ ರಾಜ್ಯ ಸರಕಾರ : ದೇವನಹಳ್ಳಿ ರೈತರ ವಿಜಯೋತ್ಸವ, ಹರ್ಷೋದ್ಘಾರ

Update: 2025-07-15 19:40 IST

ಬೆಂಗಳೂರು : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಸರಕಾರ ಘೋಷಿಸುತ್ತಿದ್ದಂತೆ ಗಾಂಧಿಭವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ, ಸಮಾನ ಮನಸ್ಕರ ವೇದಿಕೆ ಹಾಗೂ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ನಡೆದ ರೈತ ಸಮಾವೇಶದಲ್ಲಿ ದೇವನಹಳ್ಳಿ ರೈತರು ಕುಣಿದು ಕುಪ್ಪಳ್ಳಿ ವಿಜಯೋತ್ಸವದ ನಡುವೆ ಹರ್ಷೋದ್ಘಾರ ವ್ಯಕ್ತಪಡಿಸಿದರು.

ಸತತ 1,198 ದಿನಗಳಿಂದಲೂ ತಮ್ಮ ಪೂರ್ವಜರ ಮಣ್ಣಿಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಈಗ ಐತಿಹಾಸಿಕ ಜಯ ಸಿಕ್ಕಿದೆ. ‘ಇಂದು ಕರ್ನಾಟಕ ಗೆದ್ದಿದೆ! ನಮ್ಮ ಹಿರಿಯರ ಮಣ್ಣನ್ನು ನಾವು ಮಾರಾಟ ಮಾಡುವುದಿಲ್ಲ ಎಂಬ ನಮ್ಮ ಅಚಲ ಸಂಕಲ್ಪಕ್ಕೆ ಕೊನೆಗೂ ಫಲ ಸಿಕ್ಕಿದೆ’ ಎಂದು ದೇವನಹಳ್ಳಿ ರೈತರು ತಿಳಿಸಿದರು.

ಇದೇ ವೇಳೆಯಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಕಾರಳ್ಳಿ ಶ್ರೀನಿವಾಸ್ ಮಾತನಾಡಿ, ‘ನಾನು ದಲಿತರ ಹುಡುಗ. ದಲಿತ ಸಂಘರ್ಷ ಸಮಿತಿ ನನ್ನ ಸಂಘಟನೆ. ನನ್ನ ನಾಯಕತ್ವವನ್ನು ಯಾರು ಒಪ್ಪುತ್ತಿದ್ದರೋ ಗೊತ್ತಿಲ್ಲ. ಆದರೆ, ಈ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಎಲ್ಲ ಸಮುದಾಯದ ಜನಾಂಗದವರು ಒಪ್ಪಿಕೊಂಡರು. ನಾನು ಆ ಎಲ್ಲ ಜನಾಂಗದ ಜನವರ್ಗಗಳ ರೈತಾಪಿ ಕುಟುಂಬಗಳನ್ನು ಇಲ್ಲಿ ಸ್ಮರಿಸುತ್ತೇನೆ ಎಂದು ಭಾವುಕರಾಗಿ ನುಡಿದರು.

ಈ ಗೆಲುವು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ನಾನು ಈ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಚಳುವಳಿಯ ಗೆಲುವು ಈ ನಾಡಿನ ಜನಚಳವಳಿಯ ಗೆಲುವು ಎಂದು ಹೇಳಿದ್ದೆ. ಈಗ ಈ ವಿಜಯೋತ್ಸವದ ಸಂದರ್ಭದಲ್ಲಿ, ಈ ನಾಡಿನ ಜನಚಳವಳಿ ನಿಜವಾಗಿಯೂ ಗೆದ್ದಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಕಾರಳ್ಳಿ ಶ್ರೀನಿವಾಸ್ ಹೇಳಿದರು.

ಈ ಹೋರಾಟ ಗೆದ್ದಿದೆ. ಈ ಗೆಲುವನ್ನು ಮತ್ತಷ್ಟು ದಿನ ಕಾಪಿಟ್ಟುಕೊಳ್ಳೋಣ. ಜನ ಚಳವಳಿಗಳಿಗೆ ಗೆಲುವಾಗಲಿ. ನನ್ನೊಳಗಡೆ ನೀಲಿ ಮಾತ್ರ ಇತ್ತು, ಈಗ ಕೆಂಪು ನನ್ನ ರಕ್ತವಾಗಿದೆ, ಹಸಿರು ಉಸಿರಾಗಿದೆ. ಈ ಗೆಲುವು ಮತ್ತಷ್ಟು ಕಾವನ್ನು ಪಡೆಯಲಿ, ಜನ ಚಳವಳಿಗಳು ರಾಜ್ಯ, ದೇಶದಲ್ಲಿ ಮತ್ತೆ ಉಚ್ರ್ಛಾಯ ಸ್ಥಿತಿಗೆ ತಲುಪಲಿ, ಅದಕ್ಕೆ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರು ನಿಮ್ಮ ಜೊತೆ ಇರುತ್ತಾರೆ ಎಂದು ಕಾರಳ್ಳಿ ಶ್ರೀನಿವಾಸ್ ತಿಳಿಸಿದರು.

ಚನ್ನರಾಯಪಟ್ಟಣದ ರೈತ ಮಹಿಳೆ ನಾರಾಯಣಮ್ಮ ಮಾತನಾಡಿ, ಅನ್ನರಾಮಯ್ಯ ಎನ್ನಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಮಾತನ್ನು ಉಳಿಸಿಕೊಂಡರು. ನಾವು ಕೃಷಿಯನ್ನು ಬಿಡುವುದಿಲ್ಲ. ಇಡೀ ಕರ್ನಾಟಕದ ಜನ ಸಂಘಟನೆಗಳು ಹಾಗೂ ನಾಗರಿಕರೆಲ್ಲಾ ಒಗ್ಗೂಡಿ ನಮಗೆ ಬೆಂಬಲ ಕೊಟ್ಟರು. ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇವೆ. ಈಗ ನಮ್ಮ ಭೂಮಿ ನಮ್ಮ ಕೈಲಿದೆ, ಅದರಲ್ಲಿ ಬೆಳೆಯನ್ನು ಬೆಳೆದು ಜೀವನ ನಡೆಸುತ್ತೇವೆ ಎಂದು ಹೇಳಿದರು.

ಮತ್ತೋರ್ವ ಯುವ ರೈತ ಮುಟ್ಟಬಾರ್ಲು ರವಿ ಮಾತನಾಡಿ, ಇದು ಜನ ಚಳುವಳಿಗಳ ಒಗ್ಗಟ್ಟಿನ ಹೋರಾಟಕ್ಕೆ ಸಂದ ಸಮಷ್ಟಿ ಜಯವಾಗಿದೆ. ಈ ಐಕ್ಯತೆಯನ್ನು ಹೀಗೇ ಮುಂದುವರೆಸುತ್ತೇವೆ. ಜನರ ನೋವಿಗೆ ದನಿಯಾಗಿ ಮತ್ತು ಆಳುವವರನ್ನು ಪ್ರಶ್ನಿಸುವ ಜನದನಿಯಾಗಿ ಕೆಲಸ ಮಾಡುತ್ತೇವೆ. ಜನ ಚಳವಳಿಗಳ ಐಕ್ಯತೆ ಚಿರಾಯುವಾಗಬೇಕು. ಬಲವಂತದ ಭೂಸ್ವಾಧೀನಗಳು ಕೊನೆಯಾಗಬೇಕು ಎಂದು ತಿಳಿಸಿದರು. ಸಮಾವೇಶದಲ್ಲಿ ಎಲ್ಲರೂ ರೈತ ಗೀತೆಗಳನ್ನು ಹಾಡುವ ಮೂಲಕ ಕುಣಿದು ಸಂಭ್ರಮಿಸಿದರು.

ಏನಿದು ದೇವನಹಳ್ಳಿ ರೈತರ ಹೋರಾಟ?: ಅತ್ಯಾಧುನಿಕ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 2021ರಲ್ಲಿ ಪ್ರಾಥಮಿಕ ಅಧಿಸೂಚನೆ, 2022ರಲ್ಲಿ ಅಂತಿಮ ಆದೇಶ ಹೊರಡಿಸಲಾಗಿತ್ತು. ಭೂಸ್ವಾಧೀನ ವಿರೋಧಿಸಿ ಅಂದಿನಿಂದಲೂ ರೈತರು ಹೋರಾಟ ಮಾಡುತ್ತಾ ಬಂದಿದ್ದಾರೆ.

ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಗಳಲ್ಲಿನ ನೀರಾವರಿ, ಕೃಷಿ ಮತ್ತು ಜನವಸತಿಗಳನ್ನು ಪರಿಗಣಿಸಿ, 231.23 ಎಕರೆ, 185.18 ಎಕರೆ ಮತ್ತು 78.21 ಎಕರೆ ಸೇರಿ 495 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರು ಜೂನ್ 24ರಂದು ಘೋಷಿಸಿದ್ದರು. ಆದರೆ, ರೈತರು ಸರಕಾರದ ನಿರ್ಧಾರವನ್ನು ಒಪ್ಪದೇ ಎಲ್ಲ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತರು ಹೋರಾಟ ಮುಂದುವರಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 5ರಂದು ರೈತ ಸಂಘದ ಮುಖಂಡರು, ಹೋರಾಟಗಾರರು, ಸ್ಥಳೀಯ ರೈತರ ಸಭೆ ಕರೆದಿದ್ದರು. ಕಾನೂನು ತೊಡಕುಗಳಿದ್ದು, ತಜ್ಞರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲು 10 ದಿನಗಳ ಸಮಯ ಕೇಳಿದ್ದರು. ಅದರಂತೆ ರೈತರು, ರೈತ ಸಂಘದ ಮುಖಂಡರು, ಹೋರಾಟಗಾರರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸಭೆ ನಡೆಸಿ ಐತಿಹಾಸಿಕ ನಿರ್ಣಯ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News