×
Ad

ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವುದು ಆರೆಸ್ಸೆಸ್‌ vs ಆರೆಸ್ಸೆಸ್‌ ಕಿತ್ತಾಟ : ಪ್ರಿಯಾಂಕ್ ಖರ್ಗೆ

"ಸಿಬಿಐ ಮುಂದೆ ರಾಜ್ಯದ 74 ಪ್ರಕರಣಗಳ ತನಿಖೆ ಬಾಕಿ ಇದೆ"

Update: 2025-09-01 12:55 IST

ಪ್ರಿಯಾಂಕ್ ಖರ್ಗೆ 

ಬೆಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವುದು ಆರೆಸ್ಸೆಸ್‌ vs ಆರೆಸ್ಸೆಸ್‌ ಕಿತ್ತಾಟ. ಹಿಂದೆ ಬಿಜೆಪಿಯವರೇ ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕು ಎಂದಿದ್ದರು, ಎಸ್‌ಐಟಿ ರಚನೆಯಾದಾಗಲೂ ಸುಮ್ಮನಿದ್ದರು. ಈಗ ಏಕಾಏಕಿ ʼಧರ್ಮಸ್ಥಳ ಚಲೋʼ ಅಂತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ ಈ ಹಿಂದೆ ಸಿಬಿಐ ಮಾನವ ಸಂಪನ್ಮೂಲದ ಕೊರತೆಯ ಬಗ್ಗೆ ಪತ್ರ ಬರೆದಿತ್ತು, ಹಾಗೂ ಸಿಬಿಐ ಮುಂದೆ ರಾಜ್ಯದ 74 ಪ್ರಕರಣಗಳ ತನಿಖೆ ಬಾಕಿ ಇದೆ. ಈ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ.

2/7/2024ರಲ್ಲಿ ಸಿಬಿಐ ಡೆಪ್ಯುಟಿ ಐಜಿ ಮಾನವ ಸಂಪನ್ಮೂಲದ ಕೊರತೆಯ ಬಗ್ಗೆ ಪತ್ರ ಬರೆದ್ದರು. ಅದರಿಂದ ದಯವಿಟ್ಟು ಕೇಸ್ ಗಳನ್ನು ಕೋಡೋಕೆ ಹೋಗಬೇಡಿ. ಕೊಟ್ಟರೆ ಮಾನವ ಸಂಪನ್ಮೂಲ ನೀವೇ ನೀಡಿ ಎಂದು ಲೇಟರ್‌ನಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಮಗೆ ಕೇಸ್ ಗಳನ್ನು ಕೊಟ್ಟರೆ ಕರ್ನಾಟಕ ಪೊಲೀಸರಿಂದಲೇ ಸಿಬ್ಬಂದಿ ಬೇಕಾಗ್ತಾರೆ. ಸಿಬ್ಬಂದಿ, ಕಚೇರಿ, ವಾಹನ ವ್ಯವಸ್ಥೆ ಎಲ್ಲ ನೀವೇ ಕೂಡಿ ಎಂದು ಕೇಳಿದ್ದಾರೆ. ನಮ್ಮ ಅಧಿಕಾರಿಗಳನ್ನು ತೆಗೆದುಕೊಂಡು ತನಿಖೆ ಮಾಡೋಕೆ ಸಿಬಿಐಯೇ ಬೇಕಾ? ಎಂದು ಪ್ರಶ್ನಿಸಿದ್ದಾರೆ.

ಇದರಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿದ ಯಾವ ವಿಷಯ ಇದೆ. ಈಗಾಗಲೇ ಗೃಹ ಸಚಿವರು, ಸಿಎಂ ತಿರಸ್ಕರಿಸಿದ್ದಾರೆ. ಬೇಕಿದ್ದರೆ ಎನ್ಐಎ ಅವರೇ ಸ್ವಯಂಪ್ರೇರಿತ ಕೇಸ್ ತೆಗೆದುಕೊಳ್ಳಲಿ. ಇದು ಆರೆಸ್ಸೆಸ್‌ vs ಆರೆಸ್ಸೆಸ್‌ ಜಗಳ. ಅದನ್ನು ರಾಜ್ಯ ಸರಕಾರಕ್ಕೆ ಹಚ್ಚುವ ಉನ್ನಾರ ನಡೆದಿದೆ. ಹೀಗಾಗಿ ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಎಂದು ಕುರ್ಚಿ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕುರ್ಚಿ ಉಳಿಸಿಕೊಳ್ಳೋಕೆ ಮಾಡ್ತಾ ಇರೋದು. ಇದರಲ್ಲಿ ಬೇರೆ ಏನು ಇಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯವರು ಎಸ್ಐಟಿ ಆಗಬೇಕು, ತನಿಖೆ ನಡೆಯಬೇಕು ಎಂದು ಹೇಳುತ್ತಿದ್ದರು. ಆದರೆ, ಎಸ್ಐಟಿ ರಚನೆಯಾದ ಮೇಲೆ ಅವರು ಮಾತಾಡಿಲ್ಲ. ಈಗ ತನಿಖೆ ನಡೆಯುತ್ತಿರುವಾಗ ಇವರಿಗೆ ಜ್ಞಾನೋದಯ ಆಗಿದೆ. ಇದರಲ್ಲಿ ಆರೆಸ್ಸೆಸ್‌ vs ಆರೆಸ್ಸೆಸ್‌ ನಡೆಯುತ್ತಿದೆ. ಬಿಜೆಪಿಯವರು ಮಹೇಶ್‌ ಶೆಟ್ಟಿ, ಗಿರೀಶ್ ಮಟ್ಟಣ್ಣನವರ್ ಬಗ್ಗೆ ಮಾತನಾಡುತ್ತಿದ್ದಾರೆ. ಇವರೆಲ್ಲ ಯಾರು? ಯಾರ ಗರಡಿಯಲ್ಲಿ ಬೆಳದಿರುವುದು?, ಎಲ್ಲರೂ ಬಿಜೆಪಿ- ಆರೆಸ್ಸೆಸ್ ವ್ಯಕ್ತಿಗಳೇ ಅಲ್ಲವೇ?. ಗಿರೀಶ್ ಮಟ್ಟಣ್ಣ ಅವರು ಬಿಜೆಪಿ ಯುವ ಮೋರ್ಚಾದಲ್ಲಿ ಇದ್ದವರು ಎಂದು ಹೇಳಿದರು.

ಈಗ ಎಸ್‌ಐಟಿ ತನಿಖೆ ನಡೆಯುತ್ತಿದೆ, ತನಿಖೆ ಮುಗಿದ ಮೇಲೆ ಸತ್ಯಾಂಶವನ್ನು ಹೊರಗಡೆ ಬರುತ್ತೆ ಎಂದು ಗೃಹ ಸಚಿವರು, ಸಿಎಂ ಸದನದಲ್ಲಿ ಹೇಳಿದ್ದಾರೆ. ಅದನ್ನು ಬಿಟ್ಟು ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಮಾಡುತ್ತಾರೆ. ಬಿಜೆಪಿಗರು ಯಾವತ್ತಾದರೂ ಒಂದು ದಿನ ದಿಲ್ಲಿ ಚಲೋ ಮಾಡಲಿ. ಬಿಜೆಪಿಯವರು ರೈತರ ಬಗ್ಗೆ, ತೆರಿಗೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಮೋಸದ ಬಗ್ಗೆ ಯಾವಾಗ ಧ್ವನಿ ಎತ್ತುತ್ತೀರಾ. ಬರೇ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮಾತ್ರ ಇವರು ಚಲೋ ಮಾಡುತ್ತಿದ್ದಾರೆ, ಇದರಲ್ಲಿ ಬೇರೇನು ಇಲ್ಲ ಎಂದು ಆಕ್ರೋಶ ಹೊರಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News