ಧರ್ಮಸ್ಥಳ ಅಸಹಜ ಸಾವು ಪ್ರಕರಣ; ಕೈಗೊಳ್ಳುವ ಕ್ರಮಗಳ ಕುರಿತು ಸರಕಾರದ ವಿವರಣೆ ಕೇಳಿದ ಹೈಕೋರ್ಟ್
ಬೆಂಗಳೂರು : ಧರ್ಮಸ್ಥಳದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ನಿರ್ದೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಇದೇ ವೇಳೆ, ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಿನ ವಸ್ತುಸ್ಥಿತಿ, ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಲಾಗುವ ಕ್ರಮಗಳ ಕುರಿತು 2 ವಾರಗಳಲ್ಲಿ ವಿವರಣೆ ನೀಡುವಂತೆ ಸರಕಾರಕ್ಕೆ ನಿರ್ದೇಶಿಸಿದೆ.
ಸೌಜನ್ಯಾ ತಾಯಿ ಕುಸುಮವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಇದು 74 ಅಸಹಜ ಸಾವು ಪ್ರಕರಣಗಳ ವಿಚಾರವಾಗಿದೆ. ಯಾವ ಪ್ರಕರಣ ಯಾವ ಹಂತದಲ್ಲಿದೆ, ಈವರೆಗೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದು 1 ವಾರದಲ್ಲಿ ನ್ಯಾಯಾಲಯಕ್ಕೆ ಸಂಪೂರ್ಣ ವಿವರ ಒದಗಿಸಲಾಗುವುದು ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲ ಎಸ್.ಬಾಲನ್ ಅವರು, ಎಲ್ಲ 74 ಪ್ರಕರಣಗಳೂ ತನಿಖೆ ಮತ್ತು ವಿಚಾರಣೆಗೊಳಪಡಿಸಬೇಕಾದ ಪ್ರಕರಣಗಳಾಗಿವೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೊದಲು ಸರಕಾರದಿಂದ ಮಾಹಿತಿ ಬರಲಿ ಎಂದು ಹೇಳಿತಲ್ಲದೆ, ಅರ್ಜಿಯಲ್ಲಿ ಪ್ರಸ್ತಾಪಿಸಲಾದ ಪ್ರಕರಣಗಳ ಈಗಿನ ವಸ್ತುಸ್ಥಿತಿ, ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕೆಂದಿರುವ ಕ್ರಮಗಳ ಕುರಿತು 2 ವಾರಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿತು.
ಇದೇ ವೇಳೆ, ಅರ್ಜಿಯಲ್ಲಿ ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ ಎಂಬ ವಿಚಾರವನ್ನು ಸರಕಾರದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.