×
Ad

ಖಾಸಗಿ ಸುದ್ದಿವಾಹಿನಿಯಲ್ಲಿ ಧರ್ಮಸ್ಥಳ ಪ್ರಕರಣದ ಚರ್ಚೆ ವೇಳೆ ಹಲ್ಲೆಗೆ ಯತ್ನ: ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ, ಕಿರಿಕ್ ಕೀರ್ತಿ ವಿರುದ್ಧ ಎಫ್‍ಐಆರ್ ದಾಖಲು

Update: 2026-02-03 21:19 IST

ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ, ಕಿರಿಕ್ ಕೀರ್ತಿ

ಬೆಂಗಳೂರು : ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಧರ್ಮಸ್ಥಳ ಪ್ರಕರಣ ಸಂಬಂಧ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

2025ರ ಅಕ್ಟೋಬರ್ 9ರಂದು ಈ ಘಟನೆ ನಡೆದಿದೆ. ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಎಂಬುವರು ನೀಡಿದ ದೂರಿನನ್ವಯ ಎಸ್.ಜೆ ಪಾರ್ಕ್ ಠಾಣೆಯಲ್ಲಿ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ಯಾನೆ ಕೀರ್ತಿ ಶಂಕರಘಟ್ಟ ವಿರುದ್ಧ ಬಿಎನ್‍ಎಸ್ ಸೆಕ್ಷನ್ 352, 251(2), 351(3), 3(5)ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ವಿವರ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು 13 ವರ್ಷಗಳಾಗಿದ್ದ ಹಿನ್ನೆಲೆ 2025ರ ಅಕ್ಟೋಬರ್ 9ರಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಮತ್ತು ವಸಂತ್ ಗಿಳಿಯಾರ್ ಭಾಗವಹಿಸಿದ್ದರು. ಈ ಚರ್ಚೆ ವೇಳೆ ವಾಗ್ವಾದ ನಡೆದಿತ್ತು. ಕಾರ್ಯಕ್ರಮ ಮುಗಿದು ಮನೆಗೆ ತೆರಳುವ ವೇಳೆ, ವಸಂತ್ ಗಿಳಿಯಾರ್ ತಮ್ಮ ಸಹಚರರನ್ನು ಸುದ್ದಿ ವಾಹಿನಿಯ ಕಚೇರಿಗೆ ಕರೆಸಿಕೊಂಡು ಹರೀಶ್ ಮತ್ತು ಇತರರೊಂದಿಗೆ ದಾಂಧಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ವಸಂತ್ ಗಿಳಿಯಾರ್ ಅವರ ಸಹವರ್ತಿ ಪುನೀತ್ ಕೆರೆಹಳ್ಳಿಯ ಹಿಂಬಾಲಕರು ಮತ್ತು ಇನ್ನಿತರರು ಸುದ್ದಿ ವಾಹಿನಿಯ ಕಚೇರಿಗೆ ಬಂದು ಹರೀಶ್ ಭೈರಪ್ಪ ಅವರೊಂದಿಗೆ ಗಲಾಟೆ ನಡೆಸಿ ಅಶ್ಲೀಲವಾಗಿ ಬೈದು, ಹಲ್ಲೆಗೆ ಮುಂದಾಗಿ ಪ್ರಾಣ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಂದು ಈ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಧಾವಿಸಿ, ಆರೋಪಿಗಳನ್ನು ಪೊಲೀಸ್ ಠಾಣೆಗೆ ಒಯ್ದಿದ್ದರು.

ಇನ್ನು, ಈ ಸಂಬಂಧ ಮೂವರ ವಿರುದ್ಧವೂ ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಅವರು ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್‍ನಲ್ಲೇ ದೂರು ನೀಡಿದ್ದರು. ಆದರೆ, ಇದೀಗ ಎಫ್‍ಐಆರ್ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News