‘ಸಂವಿಧಾನಾತ್ಮಕ ಸಂಸ್ಥೆಗಳ ನಿರ್ದೇಶಕರ ನೇಮಕದಲ್ಲಿ ಮುಖ್ಯ ನ್ಯಾಯಮೂರ್ತಿಗಳಿರಬಾರದು’ ಎಂಬ ಜಗದೀಪ್ ಧನ್ಕರ್ ಹೇಳಿಕೆ ಸಂವಿಧಾನ ವಿರೋಧಿ : ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು : ಸಂವಿಧಾನಾತ್ಮಕ ಸಂಸ್ಥೆಗಳಾದ ಚುನಾವಣಾ ಆಯೋಗ ಹಾಗೂ ಸಿಬಿಐಗಳ ನಿರ್ದೇಶಕರ ನೇಮಕಾತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪಾತ್ರವಿರಬಾರದು ಎಂಬ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಪ್ರತಿಪಾದನೆಯೇ ಸಂವಿಧಾನ ವಿರೋಧಿ ನಡೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಯಾವುದೇ ಕಾರ್ಯನಿರ್ವಾಹಕ ನೇಮಕಾತಿಯಲ್ಲಿ ಮುಖ್ಯ ನ್ಯಾಯಮೂರ್ತಿ ಭಾಗವಹಿಸಬಾರದು ಎಂಬ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿಕೆ ಸರ್ವಾಧಿಕಾರಿ ಧೋರಣೆಯ ಸಂಕೇತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಧನ್ಕರ್ ಪ್ರಕಾರ ಸಂವಿಧಾನತ್ಮಕ ಸಂಸ್ಥೆಗಳ ಮುಖ್ಯಸ್ಥರನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮಾತ್ರ ಆಯ್ಕೆ ಮಾಡಬೇಕು ಎಂಬಂತಿದೆ. ಹಾಗಾದರೆ ಆ ಸಂಸ್ಥೆಗಳ ಪಾವಿತ್ರ್ಯತೆ ಉಳಿಯುವುದೇ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಸಂವಿಧಾನತ್ಮಾಕ ಸಂಸ್ಥೆಗಳಾದ, ಸಿಬಿಐ, ಐಟಿ, ಈಡಿ, ಹಾಗೂ ಸಿಇಸಿಗಳು ಕೇಂದ್ರ ಸರಕಾರದ ತಾಳಕ್ಕೆ ಕುಣಿಯುವ ಸಂಸ್ಥೆಗಳಾಗಿವೆ. ಈಗ ಆ ಸಂಸ್ಥೆಗಳ ಮುಖ್ಯಸ್ಥರ ನೇಮಕಾತಿಯಲ್ಲೂ ಮುಖ್ಯ ನ್ಯಾಯಮೂರ್ತಿಗಳು ಭಾಗವಹಿಸಬಾರದು ಎಂದರೆ ಆ ಸಂಸ್ಥೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸಾಧ್ಯವೇ.? ಬಿಜೆಪಿಯವರಿಗೇ ಯಾಕೆ ಇಂತಹ ಎಡಬಿಡಂಗಿ ಚಿಂತನೆಗಳು ಹುಟ್ಟಿಕೊಳ್ಳುತ್ತವೆ ಎಂದು ಟೀಕಿಸಿದ್ದಾರೆ.