×
Ad

ಜಾತಿಗಣತಿಯಲ್ಲ, ಸಾಮಾಜಿಕ ನ್ಯಾಯ ಒದಗಿಸುವ ಸಮೀಕ್ಷೆ: ಡಿ.ಕೆ.ಶಿವಕುಮಾರ್

‘ರಂಭಾಪುರಿ ಶ್ರೀಗಳು ಆತಂಕಪಡುವ ಅಗತ್ಯವಿಲ್ಲ; ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ’

Update: 2025-09-21 21:02 IST

ಹೊಸದಿಲ್ಲಿ, ಸೆ. 21: ರಾಜ್ಯ ಸರಕಾರದ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’ ಮೇಲೆ ಯಾರಿಗೂ ಸಂಶಯ ಬೇಡ. ಇದು ಕೇವಲ ಜಾತಿಗಳ ಗಣತಿಯಲ್ಲ. ಬದಲಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಮೀಕ್ಷೆ. ಇದರ ಬಗ್ಗೆ ಎಲ್ಲ ಸಮುದಾಯದವರು ಎಚ್ಚೆತ್ತುಕೊಂಡು, ಇದರ ಉಪಯೋಗ ಪಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ರವಿವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಾತಿಗಣತಿ ವಿಚಾರವಾಗಿ ಕ್ರೈಸ್ತ ಜಾತಿಗಳನ್ನು ಹಿಂದುಳಿದ ವರ್ಗಗಳ ಆಯೋಗವು ಕೈಬಿಡಲು ನಿರ್ಧರಿಸಿದೆ. ಈ ಮಧ್ಯೆ ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸುವ ಸಾಧ್ಯತೆ ಇದೆ ಎಂಬುದು ಸರಿಯಲ್ಲ. ಕಳೆದ ಸಮೀಕ್ಷೆ ನಡೆಸಿ 10 ವರ್ಷ ಕಳೆದಿರುವ ಕಾರಣ, ಮರುಸಮೀಕ್ಷೆ ಮಾಡಲಾಗುತ್ತಿದೆ. ಈ ಬಾರಿ ಮಾಹಿತಿ ನೀಡಲು ಎಲ್ಲ ಸಮಾಜದವರಿಗೂ ಸಂಪೂರ್ಣ ಅವಕಾಶ ನೀಡಿದ್ದೇವೆ. ಎಲ್ಲರೂ ಈ ಸಮೀಕ್ಷೆ ವಿಚಾರದಲ್ಲಿ ಜಾಗೃತರಾಗಿ, ತಪ್ಪದೇ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯದ 7 ಕೋಟಿ ಕನ್ನಡಿಗರು, ಪ್ರಪಂಚದ ಯಾವುದೇ ದೇಶದಲ್ಲಿರುವ ಕನ್ನಡಿಗರು ಆನ್‍ಲೈನ್ ಮೂಲಕ ತಮ್ಮ ಮಾಹಿತಿ ಸಲ್ಲಿಸಬಹುದು. ಜೊತೆಗೆ ನೀವು ಆಕ್ಷೇಪ ಸಲ್ಲಿಸಲು ಅವಕಾಶ ಕಲ್ಪಿಸಿದ್ದೇವೆ. ನಿಮ್ಮ ಮಾಹಿತಿಯನ್ನು ನಿಮ್ಮ ಮೊಬೈಲ್‍ನಲ್ಲೇ ಪಡೆಯುವ ಅವಕಾಶವಿದೆ. ನೀವು ನಿಮ್ಮ ಕುಟುಂಬದವರ ವಿವರ ಬರೆಸಿ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಎಲ್ಲ ಸಮಾಜದವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಿವಕುಮಾರ್ ಕೋರಿದರು.

ಸಮಾಜದಲ್ಲಿನ ಎಲ್ಲರಿಗೂ ನ್ಯಾಯ ಒದಗಿಸಿ ಕೊಡಬೇಕು ಎಂದು ನಮ್ಮ ಸರಕಾರ ಈ ತೀರ್ಮಾನ ಮಾಡಿದೆ. ವೀರಶೈವ ಸಮಾಜಕ್ಕೆ ತೊಂದರೆಯಾಗಲಿದೆ ಎಂದು ರಂಭಾಪುರಿ ಶ್ರೀಗಳು ಆತಂಕಪಡುವ ಅಗತ್ಯವಿಲ್ಲ. ನೀವು ನಿಮ್ಮ ಸಮುದಾಯದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ. ಅದೇ ರೀತಿ ಎಲ್ಲರೂ ತಮ್ಮ-ತಮ್ಮ ಸಮುದಾಯಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.

ಹಿಂದೂ ಜಾತಿಗಳ ಜತೆ ಕ್ರೈಸ್ತ ಸಮುದಾಯದ ಹೆಸರು ಸೇರ್ಪಡೆ ಹಿಂಪಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳೇ ಸಭೆಯಲ್ಲಿ ಈ ವಿಚಾರ ಪ್ರಸ್ತಾವನೆ ಮಾಡಿದರು. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಜೊತೆ ಚರ್ಚೆ ಮಾಡಿ ಗೊಂದಲ ಸರಿಪಡಿಸುವುದಾಗಿ ಅವರು ತಿಳಿಸಿದ್ದಾರೆ. ಈ ಜಾತಿಗಳನ್ನು ಸೇರಿಸಿರುವ ಬಗ್ಗೆ ನೋಡಿದಾಗ ನನಗೂ ಸ್ವಲ್ಪ ಗಾಬರಿಯಾಗಿತ್ತು. ನಾವು ಆಯೋಗದವರನ್ನು ಕರೆಸಿ ಇರುವ ಗೊಂದಲಗಳ ಬಗ್ಗೆ ಗಮನಕ್ಕೆ ತಂದಿದ್ದೇವೆ ಎಂದು ಅವರು ತಿಳಿಸಿದರು.

‘ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ’ ಎಂಬ ಬಿಜೆಪಿ ಮುಖಂಡ ಅಶ್ವಥ್ ನಾರಾಯಣಗೆ ಕೇವಲ ರಾಜಕಾರಣ ಬೇಕು. ನಮಗೆ ರಾಜಕಾರಣ ಬೇಡ. ನಮಗೆ ಜನರ ಬದುಕು ಮುಖ್ಯ. ಅದಕ್ಕಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ಅಶ್ವಥ್ ನಾರಾಯಣಗೂ ನಾವು ಅವಕಾಶ ಕೊಟ್ಟಿದ್ದೇವೆ. ಅವರು ಈ ಬಗ್ಗೆ ಚೆನ್ನಾಗಿ ಪ್ರಚಾರ ಮಾಡಲಿ, ಜನರಲ್ಲಿ ಜಾಗೃತಿ ಮೂಡಿಸಲಿ ಎಂದು ಅವರು ತಿರುಗೇಟು ನೀಡಿದರು.

ಈ ಸಮೀಕ್ಷೆ ಮಾಡುವವರು ಶಿಕ್ಷಕರು. ಯಾವುದೇ ಶಿಕ್ಷಕರು ಮೋಸ ಮಾಡುವುದಿಲ್ಲ. ಸರಕಾರ ದಾಖಲು ಮಾಡಿಕೊಂಡ ಮಾಹಿತಿ ಎಲ್ಲರ ಮೊಬೈಲ್‍ಗೆ ರವಾನೆಯಾಗಲಿದೆ. ಮಾಹಿತಿ ಹೆಚ್ಚು-ಕಮ್ಮಿಯಾಗಿದ್ದಾರೆ, ಸರಿಪಡಿಸಿಕೊಳ್ಳಬಹುದು. ಬೇಕಾದರೆ ಜಯಪ್ರಕಾಶ್ ಹೆಗಡೆ, ಕಾಂತರಾಜ ಆಯೋಗದ ದಾಖಲೆಗಳ ಮಾಹಿತಿಯನ್ನು ನೀಡುತ್ತೇವೆ. ಅದನ್ನೂ ಪರಿಶೀಲಿಸಬಹುದು ಎಂದು ಅವರು ಮಾಹಿತಿ ನೀಡಿದರು.

ವಿಪಕ್ಷ ನಾಯಕ ಆರ್.ಅಶೋಕ್ ತಮ್ಮ ನಾಯಕರನ್ನು ಮೆಚ್ಚಿಸಲು ಮಾತನಾಡುತ್ತಿದ್ದಾರೆ. ಯಾರು ಎಲ್ಲಿ ಏನು ಮಾತನಾಡಿದರೋ ಗೊತ್ತಿಲ್ಲ. ಯಾರೂ ನನ್ನ ಬಳಿ ಮಾತನಾಡಿಲ್ಲ. ಕೇವಲ ಒಕ್ಕಲಿಗ ಸಮುದಾಯದ ಬಗ್ಗೆ ಮಾತ್ರ ಆಲೋಚನೆ ಮಾಡಬೇಡಿ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ. ಹಿಂದುಳಿದ ವರ್ಗಗಳ ರಕ್ಷಣೆಗೆ ನಾವುಗಳು ನಿಲ್ಲಬೇಕು ಎಂದು ನಮ್ಮ ಸಮುದಾಯದ ಸಭೆಯಲ್ಲಿ ಹೇಳಿದ್ದೇನೆ ಎಂದು ಅವರು ವಿವರಣೆ ನೀಡಿದರು.

‘ಶಾಲೆಗಳಿಗೆ ದಸರಾ ರಜೆಯಿದೆ. ಇದರ ಬಗ್ಗೆ ಹಿಂದುಳಿದ ವರ್ಗಗಳ ಆಯೋಗ ತೀರ್ಮಾನ ಮಾಡುತ್ತದೆ. ಶಿಕ್ಷಕರು ಮಾಧ್ಯಮಗಳ ಬಳಿ ಬಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆಯೇ?. ಇದುವರೆಗೂ ನಮ್ಮ ಮುಂದೆ ಯಾರೂ ಬಂದಿಲ್ಲ. ಯಾರಾದರೂ ಬರೆದು ಕೊಟ್ಟಿದ್ದಾರೆಯೇ? ಇದು ನಿಮ್ಮ ಅಭಿಪ್ರಾಯ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ರಾಜ್ಯಕ್ಕೆ ಉಂಟಾಗುವ ನಷ್ಟ ನೀಡಲಿ :

ನೂತನ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ )ಜಾರಿಯಿಂದ ರಾಜ್ಯಕ್ಕೆ ಆಗುವ ನಷ್ಟವನ್ನು ಕೇಂದ್ರ ಸರಕಾರ ತುಂಬಿಕೊಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ರಾಜ್ಯಕ್ಕೆ ಸೂಕ್ತ ಅನುದಾನ ಬರುತ್ತದೆ ಎಂದು ಸುಮಾರು 1.5ಲಕ್ಷ ಕೋಟಿ ರೂ.ಮೊತ್ತದ ಕಾಮಾಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯಾವುದಕ್ಕೂ ಅನ್ಯಾಯವಾಗದಂತೆ ಕೇಂದ್ರ ಸರಕಾರ ನಿಲ್ಲಬೇಕು ಎಂದು ಕೋರಿದರು.

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಕಳೆದ 25 ವರ್ಷಗಳಿಂದ ಈ ಸಮಸ್ಯೆ ಇದೆ. ಈಗ ನಾವು ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇವೆ. ಸಿಎಂ 750ಕೋಟಿ ರೂ.ವಿಶೇಷ ಅನುದಾನ ನೀಡಿದ್ದೇವೆ ಎಂದಿದ್ದಾರೆ. ಅಂತಿಮ ಗಡುವು ನೀಡಿ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ದಿಲ್ಲಿಯಲ್ಲಿ ಕೇವಲ 100 ಮೀ. ಐವತ್ತು ಗುಂಡಿಗಳಿವೆ. ದಿಲ್ಲಿ ಸೇರಿದಂತೆ ಎಲ್ಲ ಕಡೆಯೂ ರಸ್ತೆಗುಂಡಿಗಳಿವೆ. ಆದರೆ ಬೆಂಗಳೂರಿನ ಬಗ್ಗೆ ಮಾತ್ರ ಸುದ್ದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ ಹಿತಕ್ಕಾಗಿ ದಿಲ್ಲಿ ಭೇಟಿ : ಡಿ.ಕೆ.ಶಿವಕುಮಾರ್

ನ್ಯಾಯಾಲಯದಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರಣೆಗೆ ದಿನಾಂಕ ನಿಗದಿಯಾಗಿದ್ದು, ಅಡ್ವೋಕೇಟ್ ಜನರಲ್ ಹಾಗೂ ವಕೀಲರ ಜೊತೆ ಚರ್ಚೆ ಮಾಡಲು ಹೊಸದಿಲ್ಲಿಗೆ ಆಗಮಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಸೆ.23ಕ್ಕೆ ಕೋರ್ಟ್ ವಿಚಾರಣೆ ಮುಂದಕ್ಕೆ ಹೋಗಬಹುದು ಎನ್ನುವ ಮಾಹಿತಿ ನನಗಿದೆ. ಆದರೆ, ಈ ಸಂದರ್ಭದಲ್ಲಿ ರಾಜ್ಯದ ಪ್ರಾತಿನಿಧ್ಯ ಮುಖ್ಯ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News