×
Ad

ಸಿಜೆಐಯತ್ತ ಶೂ ಎಸೆತ ಪ್ರಕರಣ | ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು : ಡಿಕೆಶಿ ಆಗ್ರಹ

"ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದು ಸಲ್ಲದು"

Update: 2025-10-08 13:24 IST

ಬೆಂಗಳೂರು, ಅ.08: "ಸುಪ್ರೀಂಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಘಟನೆ ತಪ್ಪು. ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದನ್ನು ನಾವೆಲ್ಲರೂ ಖಂಡಿಸಬೇಕು. ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.*

ಸುಪ್ರೀಂಕೋರ್ಟ್ ನಲ್ಲಿ ಶೂ ಎಸೆತ ಪ್ರಕರಣದ ಬಗ್ಗೆ ಕೇಳಿದಾಗ, "ಮುಖ್ಯ ನ್ಯಾಯಮೂರ್ತಿಯವರು ತಪ್ಪಿತಸ್ಥನ ವಿರುದ್ಧ ಕ್ರಮ ತೆಗದುಕೊಳ್ಳಬೇಡಿ ಎಂದಿದ್ದಾರೆ. ಆದರೂ ಸುಮೋಟೋ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು" ಎಂದರು.

ಬಿಗ್ ಬಾಸ್ ಬಂದ್; ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಚನೆ :

"ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಜಾಲಿವುಡ್ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ್ದೇ ನಾನು. ಅಲ್ಲಿ ಏನಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ. ಜೊತೆಗೆ ಉದ್ಯೋಗ ಮುಖ್ಯ ಎಂದೂ ಹೇಳಿದ್ದೇನೆ. ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದೋ ಅದಕ್ಕೆ ಅವಕಾಶ ನೀಡಿ ಎಂದೂ ತಿಳಿಸಿದ್ದೇನೆ. ಬಿಗ್ ಬಾಸ್ ಒಂದೇ ಅಲ್ಲ. ಎಲ್ಲಾ ಮನರಂಜನಾ ಕಾರ್ಯಕ್ರಮಗಳು ನಡೆಯಬೇಕು" ಎಂದರು.

"ಜಾಲಿವುಡ್ ಸ್ಟುಡಿಯೋದವರು ಮಾಲಿನ್ಯ ನಿಯಮಗಳನ್ನು ಪಾಲಿಸಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿತ್ತು. ಅದರ ಆದೇಶದಂತೆ ಈಗ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳು ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ. ಈ ವಿಚಾರಗಳನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ" ಎಂದು ಹೇಳಿದರು.

ನಟ್ಟು ಬೋಲ್ಟ್ ಟೈಟ್ ಎಂದು ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ಎಕ್ಸ್ (ಟ್ವೀಟ್) ಮಾಡಿರುವ ಬಗ್ಗೆ ಕೇಳಿದಾಗ, "ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರಾದರೂ ಮಾಡಿಕೊಳ್ಳಲಿ, ಮೇಲಿನಿಂದ ಯಾರನ್ನಾದರೂ ಕರೆದುಕೊಂಡಾದರೂ ಬಂದು ಮಾಡಿಕೊಳ್ಳಲಿ" ಎಂದು ವ್ಯಂಗ್ಯವಾಡಿದರು.

"ಈ ವಿಚಾರದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ. ಪ್ರತಿದಿನ ನನ್ನನ್ನು, ನನ್ನ ಹೆಸರನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ (ಕುಮಾರಸ್ವಾಮಿ) ನೆಮ್ಮದಿ, ನಿದ್ದೆ ಹಾಗೂ ಯಾವುದಕ್ಕೂ ಶಕ್ತಿ ಬರುವುದಿಲ್ಲ" ಎಂದು ಲೇವಡಿ ಮಾಡಿದರು.

ಲಾಲ್ ಬಾಗ್ ವಿರೂಪಗೊಳ್ಳುವುದಿಲ್ಲ :

ಟನಲ್ ರಸ್ತೆಯಿಂದ ಲಾಲ್ ಬಾಗ್ ವಿರೂಪಗೊಳ್ಳಲಿದೆ ಎನ್ನುವ ಬಗ್ಗೆ ಕೇಳಿದಾಗ, "ಬೆಂಗಳೂರಿನ ಪ್ರಗತಿಗೆ ಟನಲ್ ರಸ್ತೆ ಮಾಡಲಾಗುತ್ತಿದೆ. ನಾವು ಯಾವುದೇ ರೀತಿಯಲ್ಲೂ ಲಾಲ್ ಬಾಗ್ ಅನ್ನು ವಿರೂಪಗೊಳಿಸಲು ಹೋಗುವುದಿಲ್ಲ. ಲಾಲ್ ಬಾಗ್ ಗೆ ಐತಿಹಾಸಿಕ ಮಹತ್ವವಿದೆ, ಅದು ಎಷ್ಟು ಪವಿತ್ರವಾದುದು ಎಂಬುದು ನಮಗೆ ತಿಳಿದಿದೆ. ಮುಂದಿನ ಸೋಮವಾರ ಲಾಲ್ ಬಾಗ್ ಅನ್ನು ಅಧಿಕಾರಿಗಳ ಜೊತೆ ವೀಕ್ಷಣೆ ಮಾಡುತ್ತೇನೆ. ಈ ಕುರಿತು ಯಾರಿಗೂ ಆತಂಕ ಬೇಡ" ಎಂದರು‌.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News