ಅ.30ಕ್ಕೆ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ನಗರಾಭಿವೃದ್ಧಿ ಸಚಿವರ ಸಭೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ನಗರಾಭಿವೃದ್ಧಿ ಜವಾಬ್ದಾರಿ ಹೊಂದಿರುವ ಸಚಿವರುಗಳ ಸಮ್ಮೇಳನವನ್ನು ಅ.30ರಂದು ಬೆಂಗಳೂರಿನಲ್ಲಿ ನಡೆಸಲು ಕೇಂದ್ರ ಇಂಧನ, ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಖಟ್ಟರ್ ಸಮ್ಮತಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಅನುದಾನಕ್ಕೆ ಒತ್ತಡ ಹಾಕಲಾಗುವುದು. ಕೇಂದ್ರದ ನಗರಾಭಿವೃದ್ಧಿ ಸಚಿವರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ನಾವು ನಮ್ಮ ಬೇಡಿಕೆಗಳನ್ನು ಅವರ ಮುಂದಿಡುತ್ತೇವೆ. ಈಗಾಗಲೇ ಹಲವು ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಿ ಮೋದಿ ಭೇಟಿ ಮಾಡಿ ಅನುದಾನ ಕೇಳಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು ಹೊರವಲಯದಲ್ಲಿನ ಪ್ರದೇಶಗಳನ್ನು ಮುಂದೆ ಜಿಬಿಎ ವ್ಯಾಪ್ತಿಗೆ ಸೇರಲು ಅರ್ಹತೆ ಇರುವ ಜಿಬಿಎ ಗಡಿಭಾಗದ, ಬೆಂಗಳೂರು ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರದೇಶಗಳನ್ನು ವೀಕ್ಷಣೆ ಮಾಡಿದ್ದೇನೆ. ಕೆಲವು ನಗರಸಭೆಗಳು, ಪಟ್ಟಣ ಪಂಚಾಯಿತಿಗಳು ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳ ಗಡಿಪ್ರದೇಶಗಳು ನನ್ನ ಇಲಾಖೆ ವ್ಯಾಪ್ತಿಗೆ ಸೇರಿದ್ದು, ನಾಳೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದರು.
ಈ ಪ್ರದೇಶದ ಕೆಲವು ಭಾಗಗಳನ್ನು ಮುಂದಿನ ದಿನಗಳಲ್ಲಿ ಜಿಬಿಎ ಅಡಿಯಲ್ಲಿ ಬರುವ ಬೆಂಗಳೂರು ಪಾಲಿಕೆಗಳ ವ್ಯಾಪ್ತಿಗೆ ಸೇರಿಸುವ ಸಂದರ್ಭವಿದೆ. ಬಿ.ಎಸ್.ಪಾಟೀಲ್ ಸಮಿತಿ ಮೂಲಕ ಜಿಬಿಎ ವ್ಯಾಪ್ತಿಗೆ ಸೇರಿಸಬಹುದಾದ ಪ್ರದೇಶಗಳ ಬಗ್ಗೆ ವರದಿ ತಯಾರಾಗುತ್ತಿದೆ. ಈ ವಿಚಾರವಾಗಿ ಶಾಸಕರು, ಸಂಸದರು, ಸಾರ್ವಜನಿಕರು ಸಂಘ ಸಂಸ್ಥೆಗಳ ಜೊತೆ ಚರ್ಚಿಸಲು ಸೂಚಿಸಿದ್ದೇವೆ ಎಂದರು.
ಈ ವಾರಾಂತ್ಯದಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ಮೂಲಕ ಸಾರ್ವಜನಿಕರನ್ನು ಭೇಟಿ ಮಾಡಲಾಗುವುದು. ಅದಾದ ಬಳಿಕ ಐಟಿ-ಬಿಟಿ ಸಂಸ್ಥೆಗಳೊಂದಿಗೆ ಸಭೆ ನಡೆಸುತ್ತೇವೆ. ಅದರಲ್ಲೂ ಮಹದೇವಪುರ ಹಾಗೂ ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುವುದು ಎಂದು ಅವರು, ಈಗಿರುವ ಬೆಂಗಳೂರು ಪಾಲಿಕೆಗಳ ವ್ಯಾಪ್ತಿಯಿಂದಾಚೆಗೆ ಸುಮಾರು 25ಲಕ್ಷ ಜನಸಂಖ್ಯೆ ಇದೆ. ಇವರನ್ನು ಮುಂದೆ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕಾಗುತ್ತದೆ. ಬೆಂಗಳೂರನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಿದೆ ಎಂದರು.
ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಏರ್ ಪೋರ್ಟ್ ರಸ್ತೆ, ಯಲಹಂಕದ ಕೆಲವು ಪ್ರದೇಶ ಇನ್ನು ಪಂಚಾಯ್ತಿಯಾಗಿಯೇ ಉಳಿದುಕೊಂಡಿವೆ. ಎಲ್ಲೆಲ್ಲಿ ನಗರೀಕರಣ ಹೆಚ್ಚಾಗಿದೆ, ಆ ಪ್ರದೇಶಗಳಲ್ಲಿ ಅಚ್ಚುಕಟ್ಟಾಗಿ ಯೋಜನೆ ರೂಪಿಸಬೇಕಿದೆ. ಕೆಲವು ಪ್ರದೇಶಗಳಲ್ಲಿ ಕಸ ಎತ್ತುತ್ತಾರೆ, ಮತ್ತೆ ಕೆಲವು ಪ್ರದೇಶಗಳಲ್ಲಿ ಕಸ ಎತ್ತದೇ ಅವು ಪಂಚಾಯ್ತಿ ವ್ಯಾಪ್ತಿ ಎಂದು ಕಾರಣ ಹೇಳುತ್ತಾರೆ. ಹೀಗಾಗಿ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿ ಪಡಿಸಬೇಕಾಗಿದೆ. ನಾನು ನಕ್ಷೆಯಲ್ಲಿ ಆ ಪ್ರದೇಶಗಳನ್ನು ನೋಡುವುದಕ್ಕಿಂತ ಅಲ್ಲಿಗೆ ಹೋಗಿ ಕಣ್ಣಾರೆ ನೋಡಬೇಕು ಎಂದು ಈ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ ಎಂದರು.
ರಸ್ತೆಗುಂಡಿ ಮುಚ್ಚುವ ಗಡುವು ಸಮೀಪಿಸುತ್ತಿದೆ. ಅಧಿಕಾರಿಗಳು ರಸ್ತೆಗುಂಡಿ ಮುಚ್ಚುತ್ತಿದ್ದಾರೆ. ಅವರಿಗೆ ಜವಾಬ್ದಾರಿ ವಹಿಸಿದ್ದೇವೆ. ಕೆಲವು ಪ್ರದೇಶಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಬದಲು ಒಂದು ಪದರ ರಸ್ತೆಯನ್ನೇ ಹಾಕುತ್ತಿದ್ದೇವೆ. ಈ ಕಾಮಗಾರಿಗಳು ನಿರಂತರವಾಗಿ ಮುಂದುವರಿಯುತ್ತವೆ. ಪ್ರಮುಖ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲಾಗುತ್ತಿದೆ. ಈಗ ಮಳೆ ಕೂಡ ಬರುತ್ತಿದೆ. ಮಳೆ ನಿಲ್ಲಲಿ ಎಂದು ನಾವು ಕಾಯುತ್ತಿದ್ದೇವೆ. ಮಳೆ ನಿಂತ ಬಳಿಕ ನಾವು ಮತ್ತೆ ಈ ಕಾಮಗಾರಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಪ್ರತಿಕ್ರಿಯೆಗೆ ನಿರಾಕರಿಣೆ: ‘ಈ ಸಂದರ್ಭದಲ್ಲಿ ನಾನು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸೂಕ್ತ ಸಮಯದಲ್ಲಿ ನಾನು ಪ್ರತಿಕ್ರಿಯೆ ನೀಡುತ್ತೇನೆʼ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಉತ್ತರಿಸಲು ಶಿವಕುಮಾರ್ ನಿರಾಕರಿಸಿದರು.