‘ಸುರಂಗ ರಸ್ತೆ’ ಟೀಕೆ ಬಿಟ್ಟು ಬಿಜೆಪಿಯವರು ಸೂಕ್ತ ಸಲಹೆ ನೀಡಲಿ : ಡಿ.ಕೆ.ಶಿವಕುಮಾರ್
"ತೇಜಸ್ವಿ ಸೂರ್ಯ ದೊಡ್ಡ ನಾಯಕ, ಅನುಮತಿ ಇಲ್ಲದೆ ಟ್ರಂಪ್ ಭೇಟಿ ಮಾಡಲು ಹೋಗಿ ಉಗಿಸಿಕೊಂಡು ಬಂದವನು"
ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಸುರಂಗ ರಸ್ತೆ ನಿರ್ಮಾಣ ಯೋಜನೆ ಬಗ್ಗೆ ಬಿಜೆಪಿ ನಾಯಕರು ಅನಗತ್ಯ ಟೀಕೆಯನ್ನು ಬಿಟ್ಟು ಸಲಹೆಗಳನ್ನು ನೀಡಲಿ. ಈ ಯೋಜನೆ ನನ್ನ ಆಸ್ತಿಯಲ್ಲ. ಸಾರ್ವಜನಿಕರಿಗಾಗಿ ಮಾಡುತ್ತಿರುವ ರೂಪಿಸಿರುವ ಯೋಜನೆ. ನನಗೆ ಬಿಜೆಪಿಯವರು ಪರಿಹಾರವನ್ನು ಮಾತ್ರ ತಿಳಿಸಲಿ’ ಎಂದು ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸವಾಲು ಹಾಕಿದ್ದಾರೆ.
ರವಿವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮಾತ್ರವೇ ಸಹಿ ಸಂಗ್ರಹ ಅಭಿಯಾನ ನಡೆಸುವುದಲ್ಲ, ನನಗೂ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ಕೊಡಲು ಗೊತ್ತಿದೆ. ಅವರಿಗಿಂತ ಹೆಚ್ಚು ಸಂಘಟನೆ ಮಾಡುವವನು ನಾನು. ಅವರು ಒಂದು ಸಂಸ್ಥೆ ಇಟ್ಟುಕೊಂಡು ಸಂಘಟನೆ ಮಾಡುತ್ತಿದ್ದಾರೆ. ನಾವು ಪಕ್ಷದ ಮೂಲಕವೇ ಸಂಘಟನೆ ಮಾಡುತ್ತಿದ್ದೇವೆ. ಯಾವುದೇ ಪರಿಹಾರ ಹೇಳದೆ ಟೀಕೆ ಮಾಡಿದರೆ ಏನು ಪ್ರಯೋಜನ?’ ಎಂದು ಪ್ರಶ್ನಿಸಿದರು.
‘ಮೆಟ್ರೋ’ಗೆ ಸುರಂಗ ಕೊರೆದಿಲ್ಲವೇ?: ನಮ್ಮ ಮೆಟ್ರೋ ಮಾರ್ಗ ಹೋಗುವುದು ಸುರಂಗದ ಮೂಲಕವೇ ಅಲ್ಲವೇ?. ಈ ಯೋಜನೆ ತಂದವರು ಯಾರು?. ಎಸ್.ಎಂ.ಕೃಷ್ಣರ ಕಾಲದಲ್ಲಿ ಹತ್ತು ದೇಶಗಳನ್ನು ತಿರುಗಿ ಅಧ್ಯಯನ ನಡೆಸಿ ವರದಿ ನಡೆಸಿದ್ದೆ. ಎಸ್.ಎಂ.ಕೃಷ್ಣ, ಅನಂತಕುಮಾರ್ ಹಾಗೂ ನಾನು ದಿಲ್ಲಿಗೆ ತೆರಳಿ ಅಂದಿನ ಪ್ರಧಾನಿ ವಾಜಪೇಯಿಯವರಿಗೆ ವರದಿ ನೀಡಿದ್ದೆವು. ಹೀಗೆ ಯೋಜನೆ ಪ್ರಾರಂಭವಾಯಿತು’ ಎಂದು ಶಿವಕುಮಾರ್ ಸ್ಮರಿಸಿದರು.
ಅಮೆರಿಕಾದಲ್ಲಿ ಉಗಿಸಿಕೊಂಡು ಬಂದಿದ್ದ: ‘ಬಿಜೆಪಿ ಶಾಸಕ ರಾಮಮೂರ್ತಿಗೆ ನಾನೇಕೆ ಬೆದರಿಕೆ ಹಾಕಲಿ. ರಾಮಮೂರ್ತಿ ನಮ್ಮ ಹುಡುಗ. ಸಂಸದ ತೇಜಸ್ವಿ ಸೂರ್ಯ ದೊಡ್ಡ ನಾಯಕ, ಅತೀ ಬುದ್ದಿವಂತ. ಹೀಗಾಗಿಯೇ ವಿಮಾನದ ತುರ್ತು ನಿರ್ಗಮನ ದ್ವಾರವನ್ನೆ ತೆರೆಯಲು ಹೋಗಿದ್ದ. ಅನುಮತಿ ಇಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಮಾಡಲು ಹೋಗಿ ಉಗಿಸಿಕೊಂಡು ಬಂದವನು’ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
ತೇಜಸ್ವಿ ಸೂರ್ಯ ಇದೀಗ ಯಾರೂ ಕಾರಲ್ಲಿ ಓಡಾಡಬೇಡಿ ಎನ್ನುತ್ತಾನೆ. ಮದುವೆಯಾಗುವ ವೇಳೆಯಲ್ಲಿ ಹೊಸ ಕಾರು ಬೇಕು ಎಂದು ಅರ್ಜಿ ನೀಡಿದ್ದ. ದಾಖಲೆ ಬಿಡುಗಡೆ ಮಾಡಿ ಎಂದರೆ ಬಿಡುಗಡೆ ಮಾಡುತ್ತೇವೆ ಎಂದು ಲೇವಡಿ ಮಾಡಿದ ಶಿವಕುಮಾರ್, ಬಿಜೆಪಿ ನಾಯಕರು ಕಾರಲ್ಲಿ ಓಡಾಡುವುದು ಬಿಟ್ಟು ಮೆಟ್ರೋ, ಸಾರ್ವಜನಿಕ ಸಾರಿಗೆ ಬಳಸಲಿ. ಇವರ ನಾಟಕಗಳನ್ನು ಕೇಳುವವರು ಯಾರು? ಎಂದು ಕೇಳಿದರು.
ತೇಜಸ್ವಿ ಸೂರ್ಯ ರೈಲ್ವೆ ಯೋಜನೆ ಮಾಡಿ ಎಂದು ಹೇಳುತ್ತಾನೆ. ಆ ಯೋಜನೆ ಮಾಡಲು ಬೆಂಗಳೂರಿನಲ್ಲಿ ಜಾಗ ಎಲ್ಲಿದೆ?. ಕೇಂದ್ರ ಸರಕಾರವೇ ಈ ಯೋಜನೆ ಮಾಡಲಿ. ಬಿಆರ್‌ಟಿಎಸ್ ಯೋಜನೆ ಮಾಡಲು ಬೆಂಗಳೂರಿನಲ್ಲಿ ಎಲ್ಲಾದರೂ ಜಾಗ ಇದೆಯೇ?. ಅವರಿಗೆ ತಲೆ ಇದೆಯೇ? ಇದರಿಂದ ದಿನಕ್ಕೆ ನೂರಾರು ಜನ ಸಾಯಬೇಕಾಗುತ್ತದೆ ಎಂದರು.
ಲಾಲ್‍ಬಾಗ್ ಹಾಳು ಮಾಡಲು ನಾನು ಮೂರ್ಖನಲ್ಲ: ನಾನು ಎಲ್ಲ ರೀತಿಯ ಅಧ್ಯಯನ ನಡೆಸಿದ್ದೇನೆ. ಲಾಲ್‍ಬಾಗ್ ಹಾಳು ಮಾಡಲು ನಾನೇನು ಮೂರ್ಖನಲ್ಲ. ಇದರ ಇತಿಹಾಸವೂ ನನಗೆ ಗೊತ್ತಿದೆ. ಉದ್ಯಾನವನದಲ್ಲಿ ಎಷ್ಟು ಭಾಗ ಉಪಯೋಗವಾಗುತ್ತಿದೆ, ಉಪಯೋಗವಾಗುತ್ತಿಲ್ಲ ಎಂಬುದು ನನಗೆ ಗೊತ್ತಿದೆ ಎಂದು ಅವರು ನುಡಿದರು.
ಯಾವುದೇ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡರೂ ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಸ್ಟೀಲ್ ಬ್ರಿಡ್ಜ್ ಗೆ ವಿರೋಧ ಮಾಡಿದರು. ಒಂದೂ ಪರಿಹಾರ ಹೇಳುವುದಿಲ್ಲ. ಆರ್.ಅಶೋಕ್ ನೇತೃತ್ವದಲ್ಲಿಯೇ ಸಮಿತಿ ಮಾಡುತ್ತೇವೆ. ಯಾರನ್ನು ಬೇಕಾದರೂ ಅದಕ್ಕೆ ಸೇರಿಸಿಕೊಳ್ಳಲಿ. ಅವರು ಸೂಚಿಸಿದ ತಾಂತ್ರಿಕ ಪರಿಣಿತರನ್ನೇ ಸಮಿತಿಗೆ ಸೇರಿಸೋಣ ಎಂದು ಅವರು ತಿರುಗೇಟು ನೀಡಿದರು.