×
Ad

ನಾನು, ಸತೀಶ್ ಜಾರಕಿಹೊಳಿ ಸಹೋದ್ಯೋಗಿಗಳು; ನಮ್ಮನ್ನು ವೈರಿಗಳಂತೆ ನೋಡಬೇಡಿ : ಡಿ.ಕೆ.ಶಿವಕುಮಾರ್

Update: 2025-12-05 17:09 IST

ಬೆಂಗಳೂರು :  “ನಿನ್ನೆ ರಾತ್ರಿ ಮದುವೆಯೊಂದರಲ್ಲಿ ನಾನು ಹಾಗೂ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ. ರಾಜ್ಯ ಹಾಗೂ ಪಕ್ಷದ ವಿಚಾರ ಮಾತನಾಡಿದ್ದೇವೆ. ನಾನು ಹಾಗೂ ಸತೀಶ್ ಜಾರಕಿಹೊಳಿ ಸಹೋದ್ಯೋಗಿಗಳು. ನಮ್ಮನ್ನು ವೈರಿಗಳಂತೆ ಯಾಕೆ ನೋಡುತ್ತೀರಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಕೆಐಎಡಿಬಿಎ ನೂತನ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಸತೀಶ್ ಜಾರಕಿಹೋಳಿ ಅವರ ಭೇಟಿ ಬಗ್ಗೆ ಕೇಳಿದಾಗ, “ನಾವು ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ಇರುತ್ತೇವೆ, ರಾತ್ರಿ ಊಟಕ್ಕೆ ಸೇರುತ್ತೇವೆ, ಬೆಳಗ್ಗೆ ತಿಂಡಿಗೆ ಸೇರುತ್ತೇವೆ. ಇವೆಲ್ಲ ಇದ್ದೇ ಇರುತ್ತವೆ. ರಾಜಕೀಯದಲ್ಲಿ ಸ್ನೇಹ, ಬಾಂಧವ್ಯ, ನೆಂಟಸ್ಥನ ಇದ್ದೇ ಇರುತ್ತದೆ” ಎಂದರು.

“ಈಗ ನಾನು ಹಾಗೂ ಎಂ.ಬಿ. ಪಾಟೀಲ್ ಅವರು ಸುಮಾರು ಒಂದು ಗಂಟೆ ಕಾಲ ಮಾತಾಡಿದ್ದೇವೆ. ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಹೇಗೆ ಆಕರ್ಷಿಸಬೇಕು. ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಹೇಗೆ ನಮಗೆ ಸ್ಪರ್ಧೆ ನೀಡುತ್ತಿದೆ. ತೆಲಂಗಾಣದಲ್ಲಿ ಸದ್ಯದಲ್ಲೇ ಜಾಗತಿಕ ಸಮಾವೇಶ ನಡೆಯಲಿದ್ದು, ಜಾಗತಿಕ ಮಟ್ಟದಲ್ಲಿ ನಾವು ಹೇಗೆ ಸ್ಪರ್ಧೆ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಈ ರೀತಿ ರಾಜ್ಯದ ಪ್ರಗತಿ ಬಗ್ಗೆ ಚರ್ಚೆ ಮಾಡುವುದು ಸಹಜ.” ಎಂದರು.

ಕೆಕೆಆರ್ ಡಿಬಿ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಮಾತನಾಡಿ, “ಕರ್ನಾಟಕದಲ್ಲಿ ಉದ್ಯಮ ಮಾಡುವವರನ್ನು ಗೌರವಿಸಬೇಕು, ಅವರ ವ್ಯವಹಾರ, ಅಧಿಕಾರಿಗಳ ಭೇಟಿಗೆ ಅನುಕೂಲ, ಅವರ ಕಡತಗಳ ತ್ವರಿತ ವಿಲೇವಾರಿ ಉದ್ದೇಶಕ್ಕೆ ರಾಜ್ಯ ಸರಕಾರವು ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ಕೆಕೆಆರ್ ಡಿಬಿ ನೂತನ ಕಚೇರಿ ನಿರ್ಮಿಸಿದೆ. ಇಷ್ಟು ದಿನ ಬಾಡಿಗೆ ಕಟ್ಟಡದಲ್ಲಿ ಇದ್ದರು, ಈಗ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಈ ಕಚೇರಿಯಿಂದ ವಿಧಾನಸೌಧಕ್ಕೆ, ಬಸ್ ಹಾಗೂ ರೈಲ್ವೇ ನಿಲ್ದಾಣಕ್ಕೆ ಸಮೀಪವಾಗಿದ್ದು, ಇಲ್ಲಿ ಕಚೇರಿ ನಿರ್ಮಿಸಲಾಗಿದೆ” ಎಂದು ತಿಳಿಸಿದರು.

ಭ್ರಷ್ಟಾಚಾರ ವರದಿ ಅಧ್ಯಯನ ಮಾಡಿ ಅಶೋಕ್ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಲಿ :

63% ಭ್ರಷ್ಟಾಚಾರ ರಾಜ್ಯದಲ್ಲಿದೆ ಎಂಬ ಉಪಲೋಕಾಯುಕ್ತ ಅವರ ವರದಿ ಬಗ್ಗೆ ಆರ್.ಅಶೋಕ್ ಅವರು ಮಾತನಾಡಿರುವ ಬಗ್ಗೆ ಕೇಳಿದಾಗ, “ಪಾಪ, ಆರ್.ಅಶೋಕ್ ಅವರಿಗೆ ಅದು ಯಾರ ಕಾಲದ ವರದಿ ಎಂದು ಗೊತ್ತಿಲ್ಲ. ಅವರು ಮೊದಲು ಈ ವರದಿ ಯಾರ ಕಾಲದ್ದು ಎಂದು ಓದಿಕೊಳ್ಳಲಿ. ಅವರು ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಿ, ಅಲ್ಲಿಯೇ ಉತ್ತರ ನೀಡುತ್ತೇವೆ” ಎಂದು ತಿರುಗೇಟು ನೀಡಿದರು.

ದೆಹಲಿಗೆ ಸರ್ವಪಕ್ಷ ನಿಯೋಗ ಹೋಗುವ ದಿನಾಂಕ ನಿಗದಿಯಾಯಿತೇ ಎಂದು ಕೇಳಿದಾಗ, “ಈ ಬಗ್ಗೆ ಇನ್ನು ಚರ್ಚೆ ಮಾಡಬೇಕಿದೆ. ಕೇಂದ್ರ ಸಚಿವರು ಸಂಸತ್ ಅಧಿವೇಶನದಲ್ಲಿ ಕಾರ್ಯನಿರತರಾಗಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಡಿ. 8ರಂದು ನಡೆಸಲು ತೀರ್ಮಾನಿಸಲಾಗಿದ್ದ ಸಭೆ ಮುಂದೂಡಿದ್ದೇವೆ. ಅವರು ಈ ಬಗ್ಗೆ ಪತ್ರವನ್ನು ಬರೆದಿದ್ದರು. ಪ್ರಧಾನಮಂತ್ರಿಗಳು ಪ್ರಹ್ಲಾದ್ ಜೋಷಿ ಅವರೊಂದಿಗೆ ಸಭೆ ಇಟ್ಟುಕೊಂಡಿದ್ದಾರೆ. ಅಂದು ನಿರ್ಮಲಾ ಸೀತಾರಾಮನ್ ಅವರು ಮಸೂದೆ ಮಂಡನೆ ಮಾಡಬೇಕಿದೆ. ಸೋಮಣ್ಣ ಅವರು ಕೂಡ ಅಂದು ಸಭೆಯಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರಿಗೆ ಹಾಗೂ ನಮಗೆ ಅನುಕೂಲವಾಗುವ ದಿನಾಂಕವನ್ನು ನಿಗದಿ ಮಾಡಲಾಗುವುದು” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News