‘ಹೆಬ್ಬಾಳ ಜಂಕ್ಷನ್‍ನಿಂದ ಮೇಖ್ರಿ ವೃತ್ತ’ 2215 ಕೋಟಿ ರೂ.ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ : ಸಚಿವ ಸಂಪುಟ ನಿರ್ಣಯ
ಬೆಂಗಳೂರು : ಹೆಬ್ಬಾಳ ಜಂಕ್ಷನ್‍ನಿಂದ ಮೇಖ್ರಿ ವೃತ್ತದವರೆಗೂ ಸ್ಥಳೀಯ ವಾಹನ ದಟ್ಟಣೆಯನ್ನು ನಿರ್ವಹಿಸಲು ನಿರ್ಮಾಣ ಮಾಡಲು ಉದ್ದೇಶಿಸಿರುವ ಮೂರು ಪಥದ ಅವಳಿ ಸುರಂಗ ಮಾರ್ಗವನ್ನು ಕಟ್ ಅಂಡ್ ಕವರ್ ಮಾದರಿಯಲ್ಲಿ ಹಾಗೂ ಇದಕ್ಕೆ ಪೂರಕವಾಗಿ ಎಲಿವೇಟೆಡ್ ಕಾರಿಡಾರ್ ಜೊತೆಗೆ ಅಪ್ ಅಂಡ್ ಡೌನ್ ರ್ಯಾಂಪ್ ಅನ್ನು 2215 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ‘ಬಂಡವಾಳ ಹೂಡಿಕೆದಾರರ ಸಮಾವೇಶ-ಇನ್ವೆಸ್ಟ್ ಕರ್ನಾಟಕ 2025’ರ ಪರಿಷ್ಕೃತ ವೆಚ್ಚ 100.70 ಕೋಟಿ ರೂ.ಗಳಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಪುರಷ್ಕೃತ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯಲ್ಲಿ 5491 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ(ಪ್ಯಾಕ್ಸ್) ಗಣಕೀಕರಣವನ್ನು ಪೂರ್ಣಗೊಳಿಸಲು ಸತ್ರಾ ಸರ್ವೀಸ್ ಅಂಡ್ ಸಲ್ಯೂಷನ್ಸ್ ಪ್ರೈ.ಲಿ.ಗೆ 4453 ಪ್ಯಾಕ್ಸ್ ಗಳನ್ನು 57.88 ಕೋಟಿ ರೂ.ಮೊತ್ತದಲ್ಲಿ ಹಾಗೂ ಚಾಯ್ಸ್ ಕನ್ಸಲ್ಟೆನ್ಸಿ ಸರ್ವೀಸೆಸ್ ಪ್ರೈ.ಸಂಸ್ಥೆಗೆ 1038 ಪ್ಯಾಕ್ಸ್ ಗಳನ್ನು 13.49 ಕೋಟಿ ರೂ.ಮೊತ್ತದಲ್ಲಿ ಹಂಚಿಕೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಇತರ ನಿರ್ಣಯಗಳು: ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಕಲಬುರಗಿ, ಗದಗ, ದಾವಣಗೆರೆ, ಮಂಗಳೂರು, ಭೀಮನಕುಪ್ಪೆ (ಬೆಂಗಳೂರಿನ ಕೆಂಗೇರಿ ಹತ್ತಿರ) ಮತ್ತು ಮೈಸೂರಿನಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳನ್ನು 452.89 ಕೋಟಿ ರೂ.ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ಜಿಲ್ಲಾಸ್ಪತ್ರೆ ಆವರಣದಲ್ಲಿ 50 ಹಾಸಿಗೆ ಸಾಮರ್ಥ್ಯ ದ ಕ್ರಿಟಿಕಲ್ ಕೇರ್ ಬ್ಲಾಕ್ ನಿರ್ಮಿಸುವ ಕಾಮಗಾರಿಯನ್ನು 28.69 ಕೋಟಿ ರೂ., ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 19 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣವನ್ನು 304 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಅತ್ಯಾಧುನಿಕ ಲಸಿಕಾ ತಯಾರಿಕಾ ಪ್ರಯೋಗಾಲಯವನ್ನು 27 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಿ, ಕುರಿ ಮತ್ತು ಮೇಕೆಗಳ ನೀಲಿ ನಾಲಿಗೆ ರೋಗ ಹಾಗೂ ಇನ್ನಿತರ ರೋಗಗಳಿಗೆ ಲಸಿಕೆಯನ್ನು ತಯಾರಿಸಲು ಆಡಳಿತಾತ್ಮಕ ಅನುಮೋದನೆ.
ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದ ಸಜ್ಜೆಪಾಳ್ಯ ಗ್ರಾಮದ 3 ಎಕರೆ ಜಮೀನನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ “ನೆಫ್ರೋ-ಯುರಾಲಜಿ ಸಂಸ್ಥೆಗೆ” ಪ್ರತಿ ಎಕರೆಗೆ ಪ್ರತಿ ವರ್ಷ 1 ಲಕ್ಷ ರೂ.ಗಳ ಗುತ್ತಿಗೆ ದರದಂತೆ ಆಸ್ಪತ್ರೆ ನಿರ್ಮಾಣಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಹಾಗೂ ಆ ಆಸ್ಪತ್ರೆಯಲ್ಲಿ ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದ ನಿರಾಶ್ರಿತರಿಗೆ ಉಚಿತ ಚಿಕಿತ್ಸೆ ನೀಡಲು ಕನಿಷ್ಟ ಹಾಸಿಗೆಗಳನ್ನು ಕಾಯ್ದಿರಿಸುವ ಷರತ್ತಿಗೊಳಪಟ್ಟು ಮಂಜೂರು ಮಾಡಲು ನಿರ್ಧರಿಸಲಾಗಿದೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಯಡೋಣಿಯಲ್ಲಿನ ವಾಲ್ಮೀಕಿ ಆಶ್ರಮ ಶಾಲೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯ ಮಾದರಿಯಲ್ಲಿ ಶಾಲಾ ಸಂಕೀರ್ಣವನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಹಾಗೂ 2024-2026ನೆ ಸಾಲಿಗೆ ಪಿಎಂ-ಅಭಿಮ್ ಯೋಜನೆಯಡಿ ರಾಜ್ಯದಾದ್ಯಂತ 334 ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಅಂದಾಜು ಮೊತ್ತ 217.10 ಕೋಟಿ ರೂ.ಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
2024-25ನೆ ಸಾಲಿನಲ್ಲಿ 15ನೆ ಹಣಕಾಸು ಆಯೋಗದ ಅನುದಾನದಡಿ ರಾಜ್ಯದಾದ್ಯಂತ ಪ್ರತಿ ಘಟಕಕ್ಕೆ ಅಂದಾಜು ಒಂದು ಕೋಟಿ ರೂ.ಗಳಂತೆ ಒಟ್ಟು 22 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 22 ಕೋಟಿ ರೂ.ಗಳಲ್ಲಿ ಹಾಗೂ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಗಳನ್ನು 80 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಗುತ್ತಿಗೆ ಆಧಾರದ ಮೇಲೆ 400 ಫಾರ್ಮಸಿಸ್ಟ್ ಬದಲಾಗಿ ಕಳೆದ ಎರಡು ವರ್ಷಗಳಲ್ಲಿ ಫಾರ್ಮಸಿ ಡಿಪ್ಲೋಮಾ ಪದವಿ ಪಡೆದ ಡಿಪ್ಲೋಮಾ ವಿದ್ಯಾರ್ಥಿಗಳನ್ನು ಮಂಜೂರಾದ ಖಾಲಿಯಿರುವ ಹುದ್ದೆಗಳ ಎದುರಾಗಿ ಪಾರದರ್ಶಕ ಆಯ್ಕೆ ವಿಧಾನದ ಮೂಲಕ 11 ತಿಂಗಳ ಅವಧಿಗೆ ನಿಗದಿತ ಮೊತ್ತದ ಸ್ಟೈಫೆಂಡ್ ಪಾವತಿಯ ಮೇಲೆ ಅಪ್ರೆಂಟಿಸ್‍ಗಳಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಗೂಡೇಹೊಸಹಳ್ಳಿ ಬಳಿ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮತ್ತು ನಾಗಮಂಗಲ ತಾಲೂಕು ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕುಗಳ ಕೆರೆ ತುಂಬಿಸುವ ಯೋಜನೆ (ಹಂತ-2)ಯ 67 ಕೋಟಿ ರೂ.ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ.
ಭಕ್ತರಹಳ್ಳಿ ಮತ್ತು ಕುಣಿಗಲ್ ತಾಲೂಕಿನ ಇತರ 21 ಕೆರೆಗಳನ್ನು ತುಂಬಿಸಲು ಕೊತ್ತಗೆರೆ ಗ್ರಾಮದ ಸಮೀಪವಿರುವ ಕೊತ್ತಗೆರೆ ಕೆರೆಯಿಂದ ನೀರು ಎತ್ತುವ ಯೋಜನೆಯನ್ನು 34 ಕೋಟಿ ರೂ.ಗಳ ಮೊತ್ತದಲ್ಲಿ ಹಾಗೂ ಚಳ್ಳಕೆರೆ ನಗರಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ 198 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ 9.215 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರೂಪಿಸಲಾದ ಚಡಚಣ ಏತ ನೀರಾವರಿ ಯೋಜನೆಯ 485 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.