×
Ad

ರಬ್ಬರ್ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರ

Update: 2025-12-04 20:16 IST

ಬೆಂಗಳೂರು : ರಬ್ಬರ್ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದು, ಕೇಂದ್ರ ಸರಕಾರವು ರಬ್ಬರ್ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಮಾಡಲು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಪ್ರಯತ್ನಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಗುರುವಾರ ಕೇಂದ್ರ ಸಚಿವರಾದ ವಿ.ಸೋಮಣ್ಣ, ಪ್ರಹ್ಲಾದ್ ಜೋಷಿ, ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದಿರುವ ಅವರು, ರಬ್ಬರ್ ಬೆಳೆಗಾರರ ಸಂಕಷ್ಟಕಾಲದಲ್ಲಿ ತಾವು ತಕ್ಷಣವೇ ವೈಯಕ್ತಿಕವಾಗಿ ಸ್ಪಂದಿಸಿ, ದಿಲ್ಲಿಯಲ್ಲಿ ರಾಜ್ಯದ ಪಕ್ಷಾತೀತ ಪ್ರತಿನಿಧಿಗಳಾಗಿ ರಬ್ಬರ್ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಮಾಡಬೇಕು ಎಂದಿದ್ದಾರೆ.

ಕೇಂದ್ರ ಸರಕಾರವು ವಾಣಿಜ್ಯ ಬೆಳೆ ಎಂಬ ಕಾರಣ ನೀಡಿ ರಬ್ಬರನ್ನು ಕನಿಷ್ಟ ಬೆಂಬಲ ಬೆಲೆ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಹೀಗಾಗಿ ರಾಜ್ಯದ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಗಾರರ ಬವಣೆಗಳ ಬಗ್ಗೆ ಕೇಂದ್ರದ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್‌  ಗೋಯಲ್ ಅವರ ಗಮನ ಸೆಳೆಯಲು ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

1947ರ ಭಾರತೀಯ ರಬ್ಬರ್ ಕಾಯ್ದೆಯಂತೆ ರಬ್ಬರ್ ಉದ್ಯಮದ ಸಮಗ್ರ ಮತ್ತು ಏಕೀಕೃತ ನಿಯಂತ್ರಣ ಕೇಂದ್ರ ಸರಕಾರಕ್ಕೆ ಇದ್ದು, ಇದರಲ್ಲಿ ರಾಜ್ಯಗಳಿಗೆ ಹಸ್ತಕ್ಷೇಪ ಮಾಡುವ ಯಾವ ಅವಕಾಶವೂ ಇರುವುದಿಲ್ಲ. ಬೆಂಬಲ ಬೆಲೆ ಸೇರಿ ರಬ್ಬರ್ ಉದ್ಯಮದ ಬಗ್ಗೆ ಎಲ್ಲ ನಿರ್ಣಯಗಳನ್ನೂ ಕೇಂದ್ರ ಸರಕಾರವೇ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ರಬ್ಬರ್ ಬೆಳೆಗಾರರು ಎಲ್ಲ ಸಂಕಷ್ಟಗಳಿಗೂ ಕೇಂದ್ರ ಸರಕಾರವನ್ನು ಮಾತ್ರ ಆಶ್ರಯಿಸಬೇಕಿದೆ ಎಂದು ಅವರು ವಿವರಿಸಿದ್ದಾರೆ.

ಕುಗ್ಗಿದ ಬೇಡಿಕೆ, ಹೊರದೇಶಗಳಿಂದ ಆಮದಾಗುವ ಕಡಿಮೆ ಬೆಲೆಯ ನೈಸರ್ಗಿಕ ರಬ್ಬರ್, ಹೇರಳವಾಗಿ ಲಭ್ಯವಾಗುವ ಕೃತಕ ರಬ್ಬರ್, ನಾಮಮಾತ್ರಕ್ಕೆ ಇರುವ ಕೇಂದ್ರ ಸರಕಾರದ ಸಂಶೋಧನಾ ಕೇಂದ್ರ, ಇಳಿಯುತ್ತಿರುವ ಮಾರುಕಟ್ಟೆ ಖರೀದಿ ದರ ಮುಂತಾದವುಗಳ ಮಧ್ಯೆ ಹಣ್ಣಾಗುತ್ತಿರುವ ರಬ್ಬರ್ ಬೆಳೆಗಾರರಿಗೆ ಪ್ರಜಾಪ್ರತಿನಿಧಿ ಮತ್ತು ಕೇಂದ್ರದ ಸಚಿವರಾಗಿ ನಿಮ್ಮ ನೆರವಿನ ಅಗತ್ಯ ಇದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಸರಕಾರದ ಅಧೀನದ ಕೃಷಿ ವೆಚ್ಚ ಮತ್ತು ಧಾರಣೆ ಆಯೋಗ(ಸಿಎಸಿಪಿ) ತಕ್ಷಣ ನೈಸರ್ಗಿಕ ರಬ್ಬರಿಗೆ ಬೆಂಬಲ ಬೆಲೆ ಘೋಷಿಸಬೇಕು. ಜೊತೆಗೆ ಈಗಾಗಲೇ ಜಾರಿಯಲ್ಲಿರುವ ರಾಷ್ಟ್ರೀಯ ರಬ್ಬರ್ ನೀತಿಯಂತೆ ನೂತನ ತಂತ್ರಜ್ಞಾನ, ರಫ್ತು ಮಾರುಕಟ್ಟೆ, ಹೊಸ ಬಳಕೆಗಳ ಆವಿಷ್ಕಾರಗಳನ್ನು ಪೂರೈಸುವಂತೆ ಮಾಡಲು ಕೇಂದ್ರ ವಾಣಿಜ್ಯ ಇಲಾಖೆಯಲ್ಲಿ ತಮ್ಮ ಪ್ರಭಾವವನ್ನು ಬಳಸಬೇಕು ಎಂದು ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News