×
Ad

‘ರಾಜ್ಯದಲ್ಲಿ ಕೈಗಾರಿಕಾ ತಂತ್ರಜ್ಞಾನ ನಾವೀನ್ಯತೆ ಪಾರ್ಕ್ ಸ್ಥಾಪನೆ’; ತೈವಾನ್‍ನ ಅಲಿಜನ್ಸ್ ಗ್ರೂಪ್‍ನಿಂದ 1 ಸಾವಿರ ಕೋಟಿ ರೂ.ಹೂಡಿಕೆ

Update: 2025-12-05 17:48 IST

ಬೆಂಗಳೂರು : ರಾಜ್ಯದಲ್ಲಿ ಕೈಗಾರಿಕಾ ತಂತ್ರಜ್ಞಾನ ನಾವೀನ್ಯತಾ ಪಾರ್ಕ್(ಐಟಿಐಪಿ) ಸ್ಥಾಪಿಸಲು ತೈವಾನ್‍ನ ಅಲಿಜನ್ಸ್ ಇಂಟರ್‌ನ್ಯಾಷನಲ್ ಕಂಪನಿ ಲಿಮಿಟೆಡ್, ರಾಜ್ಯ ಸರಕಾರದ ಜೊತೆಗೆ ಮಹತ್ವದ ತಿಳುವಳಿಕೆ ಒಪ್ಪಂದಕ್ಕೆ(ಎಂಒಯು) ಶುಕ್ರವಾರ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಯ ಸರಕಾರಿ ನಿವಾಸ ಕಾವೇರಿಯಲ್ಲಿ ಸಹಿ ಹಾಕಿದೆ.

ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್‍ಆಂಡ್‍ಟಿ ಇಲಾಖೆಯ ನಿರ್ದೇಶಕ ರಾಹುಲ್ ಎಸ್.ಸಂಕನೂರ ಹಾಗೂ ಅಲಿಜನ್ಸ್ ಗ್ರೂಪ್‍ನ ಉಪಾಧ್ಯಕ್ಷ ಲಾರೆನ್ಸ್ ಚೆನ್ ಅವರು ತಿಳುವಳಿಕೆ ಒಪ್ಪಂದ ಪತ್ರಕ್ಕೆ (ಎಂಒಯು)ಸಹಿ ಹಾಕಿದರು.

ಈ ಯೋಜನೆಯನ್ನು ಅಲಿಜನ್ಸ್ ಗ್ರೂಪ್ ಸುಮಾರು 1ಸಾವಿರ ಕೋಟಿ ರೂ.ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ ಕಾರ್ಯಗತಗೊಳಿಸಲಿದೆ. 5 ವರ್ಷಗಳ ಅವಧಿಯಲ್ಲಿ ‘ಐಟಿಐಪಿ’ಯಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳ ಮೂಲಕ ಸುಮಾರು 800 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ಎಸ್‍ಆಂಡ್‍ಟಿ ಇಲಾಖೆಯು ತಿಳಿಸಿದೆ.

‘ಐಟಿಐಪಿ’ಯು ತೈವಾನಿನ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕಂಪನಿಗಳಿಗೆ ಮೀಸಲಾದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಅತ್ಯಾಧುನಿಕ ತಯಾರಿಕೆ, ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜನ ನೀಡಲಿದೆ. ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ತಯಾರಿಕಾ (ಇಎಸ್‍ಡಿಎಂ) ವಲಯದಲ್ಲಿ ಭಾರತದ ಪ್ರಮುಖ ತಾಣವಾಗಿ ಕರ್ನಾಟಕದ ಸ್ಥಾನವನ್ನು ಈ ಒಪ್ಪಂದವು ಬಲಪಡಿಸಲಿದೆ. ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೂ ವೇಗ ದೊರೆಯಲಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ನಾವೀನ್ಯತೆಗಾಗಿ ಜಾಗತಿಕ ಕೇಂದ್ರವಾಗುವ ಕರ್ನಾಟಕದ ದೂರದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆ ಮಹತ್ವದ ಹೆಜ್ಜೆಯಾಗಿದೆ. ಐಟಿಐಪಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೂಡಿಕೆಗಳನ್ನು ಆಕರ್ಷಿಸಲಿದೆ. ಯುವ ಜನರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ. ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕವು ಭಾರತದ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದ್ದು, ನಾವೀನ್ಯತೆ, ಡೀಪ್-ಟೆಕ್ ಪ್ರತಿಭೆ ಮತ್ತು ಸೆಮಿಕಂಡಕ್ಟರ್ ಡಿಸೈನ್ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಈ ಪಾಲುದಾರಿಕೆಯು ಸದೃಢವಾದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವ್ಯವಸ್ಥೆ ಅಭಿವೃದ್ಧಿಪಡಿಸುವ ನಮ್ಮ ಪ್ರಯತ್ನಗಳಿಗೆ ವೇಗ ನೀಡಲಿದೆ ಎಂದು ಎಲೆಕ್ಟ್ರಾನಿಕ್ಸ್, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವು ಆದ್ಯತೆಯ ತಾಣವಾಗಿರುವಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ಎಸ್ ಅಂಡ್ ಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್, ಅವರು ಪ್ರತಿಕ್ರಿಯಿಸಿ, ಈ ಒಪ್ಪಂದವು ಜಾಗತಿಕ ಪಾಲುದಾರಿಕೆಗಳನ್ನು ಬೆಳೆಸುವ ಮತ್ತು ಭವಿಷ್ಯಕ್ಕೆ ಸನ್ನದ್ಧ ಸ್ಥಿತಿಯಲ್ಲಿರುವ ಕೈಗಾರಿಕಾ ಕ್ಲಸ್ಟರ್‍ಗಳನ್ನು ಅಭಿವೃದ್ಧಿಪಡಿಸುವ ಕರ್ನಾಟಕದ ಪೂರ್ವಭಾವಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ತೈವಾನ್‍ನ ಅಲಿಜನ್ಸ್ ಗ್ರೂಪ್‍ನ ಉಪಾಧ್ಯಕ್ಷ ಲಾರೆನ್ಸ್ ಚೆನ್ ಅವರು ಪ್ರತಿಕ್ರಿಯಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವುದಕ್ಕೆ ವಿಶ್ವದಾದ್ಯಂತ ಮನ್ನಣೆಗೆ ಪಾತ್ರವಾಗಿರುವ ಕರ್ನಾಟಕದ ಜೊತೆಗೆ ಪಾಲುದಾರಿಕೆ ಹೊಂದಲು ನಾವು ಉತ್ಸುಕರಾಗಿದ್ದೇವೆ. ತೈವಾನ್ ಕಂಪನಿಗಳು ಭಾರತದಲ್ಲಿ ತಮ್ಮ ವಹಿವಾಟು ವಿಸ್ತರಿಸಲು ಮತ್ತು ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡಲು ‘ಐಟಿಐಪಿ’ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.

ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತದಲ್ಲಿಯೇ ತಯಾರಿಸಿ, ಸ್ವಾವಲಂಬನೆಯ ಭಾರತ ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್‍ಗೆ ಕರ್ನಾಟಕದ ಬದ್ಧತೆಗೆ ನಿದರ್ಶನವಾಗಿದೆ. ಇದು ಸುಸ್ಥಿರ ಬೆಳವಣಿಗೆ ಮತ್ತು ಜಾಗತಿಕ ಪಾಲುದಾರಿಕೆಗೂ ಹಾದಿ ಮಾಡಿಕೊಡಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ಒಪ್ಪಂದದ ಮುಖ್ಯಾಂಶಗಳು’: ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯಗಳಲ್ಲಿ ತೈವಾನ್ ಕಂಪನಿಗಳಿಗೆ ನೆಲೆಯಾಗಲು ವಿಶ್ವ ದರ್ಜೆಯ ಕೈಗಾರಿಕಾ ಪಾರ್ಕ್ ಸ್ಥಾಪನೆ. ಬಿಡಿಭಾಗ, ಪಿಸಿಬಿ ಮತ್ತು ಚಿಪ್ ಡಿಸೈನ್‍ಗೆ ಸದೃಢ ಪೂರೈಕೆ ಸರಪಳಿ ವ್ಯವಸ್ಥೆಯ ಅಭಿವೃದ್ಧಿ. ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ ಗರಿಷ್ಠ ಮೌಲ್ಯದ ಉದ್ಯೋಗಗಳ ಸೃಷ್ಟಿ ಮತ್ತು ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳು. ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಭಾರತದ ಸ್ಪರ್ಧಾತ್ಮಕತೆ ಹೆಚ್ಚಿಸಲು ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಅತ್ಯುತ್ತಮ ಕಾರ್ಯನಿರ್ವಹಣೆಗೆ ಉತ್ತೇಜನ ನೀಡುವುದಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News