×
Ad

‘ಕಾಂಗ್ರೆಸ್‌ ಭ್ರಷ್ಟಾಚಾರದ ಹೊಸ ರೆಕಾರ್ಡ್’: ಸಿದ್ದರಾಮಯ್ಯ ಸರಕಾರದ ವಿರುದ್ಧ ಆರ್. ಅಶೋಕ್ ಆರೋಪ

Update: 2025-12-05 11:18 IST

ಬೆಂಗಳೂರು: ಮತಿಗೇಡಿಗಳಾದರೂ ಪರವಾಗಿಲ್ಲ ಸಿದ್ದರಾಮಯ್ಯನವರೇ, ಜೀವನದಲ್ಲಿ, ಅದರಲ್ಲೂ ಸಾರ್ವಜನಿಕ ಜೀವನದಲ್ಲಿರುವವರು ಅಧಿಕಾರಕ್ಕಾಗಿ, ಕುರ್ಚಿಗಾಗಿ ಲಜ್ಜೆಗೇಡಿಗಳಾಗಬಾರದು ಎಂದು ವಿಪಕ್ಷ ನಾಯಕ ಆರ್.ಅಶೋಕ್‌ ಅವರು ಅಣಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬುದನ್ನು ಸ್ವತಃ ಅಂದಿನ ಸಚಿವರೇ ಒಪ್ಪಿಕೊಂಡರೂ, ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ಸದನದಲ್ಲಿ ತಾವೇ ಘಂಟಾಘೋಷವಾಗಿ ಒಪ್ಪಿಕೊಂಡ ಮೇಲೂ ನಿರ್ಲಜ್ಜವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಿರುವ ಲಜ್ಜೆಗೇಡಿತನಕ್ಕೆ ಏನನ್ನಬೇಕು?

ಸ್ವತಃ ತಮ್ಮ ಆರ್ಥಿಕ ಸಲಹೆಗಾರರು, ಹಿರಿಯ ಕಾಂಗ್ರೆಸ್ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಎಂದು ಸರ್ಟಿಫಿಕೇಟ್ ಕೊಟ್ಟ ಮೇಲೂ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕೂತುಕೊಳ್ಳುವ ಲಜ್ಜೆಗೇಡಿತನಕ್ಕೆ ಏನನ್ನಬೇಕು?

ಅದು ಹೋಗಲಿ ಬಿಡಿ. ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ನಡೆಯುತ್ತಿರುವ "ಮನಿ ಫಾರ್ ಮನೆ" ಭ್ರಷ್ಟಾಚಾರವನ್ನು ಬಯಲಿಗೆಳೆದು ತಮ್ಮಲ್ಲಿರುವ ಭ್ರಷ್ಟಾಚಾರದ ಮಾಹಿತಿಯನ್ನು ಬಹಿರಂಗ ಪಡಿಸಿದರೆ ಸರ್ಕಾರವೇ ಅಲ್ಲಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟಾದರೂ ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಸ್ವಪಕ್ಷದ ಹಿರಿಯ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡಿದರೂ, ವಸತಿ ಸಚಿವರ ಮೇಲೆ ಕ್ರಮವೂ ಕೈಗೊಳ್ಳದೆ, ತನಿಖೆಯೂ ನಡೆಸದೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಿರುವ ಲಜ್ಜೆಗೇಡಿತನಕ್ಕೆ ಏನನ್ನಬೇಕು?

ತಾವೇ ನೇಮಕ ಮಾಡಿದ್ದ ತನಿಖಾ ಆಯೋಗ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ತಾವು ಮಾಡಿದ್ದ 40% ಕಮಿಷನ್ ಆರೋಪ ಹಸಿ ಸುಳ್ಳು ಎಂದು ವರದಿ ನೀಡಿದ ಮೇಲೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತಿರುವ ಲಜ್ಜೆಗೇಡಿತನಕ್ಕೆ ಏನನ್ನಬೇಕು?  40% ಕಮಿಷನ್ ಎಂದು ಹಸಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿ, ಮತದಾರರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬರುವ ಲಜ್ಜೆಗೇಡಿತನಕ್ಕೆ ಏನನ್ನಬೇಕು? ಎಂದು ಪ್ರಶ್ನಿಸಿದ್ದಾರೆ.

ಕಳೆದ 2.5 ವರ್ಷಗಳಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕಮಿಷನ್ ದಾಹಕ್ಕೆ ಬಲಿಯಾದ ಅಧಿಕಾರಿಗಳು, ಗುತ್ತಿಗೆದಾರರ ಪ್ರಕರಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಜಾಗವೇ ಸಾಕಾಗುವುದಿಲ್ಲ. ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಲಂಚಕೋರತನಕ್ಕೆ ಬೇಸತ್ತು ದಾವಣಗೆರೆಯ ಗುತ್ತಿಗೆದಾರ ಪಿ.ಸಿ.ಗೌಡರ್ ಆತ್ಮಹತ್ಯೆ. ವರ್ಗಾವಣೆ ದಂಧೆಯ ಒತ್ತಡ, ಕಿರುಕುಳ ತಾಳಲಾರದೆ ಯಾದಗಿರಿ ಪಿಎಸ್ ಐ ಪರಶುರಾಮ್ ಹೃದಯಾಘಾತದಿಂದ ಸಾವು. ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್‌ ಗ್ರಾಮದ ನಿವಾಸಿ ಸಿವಿಲ್‌ ಎಂಜಿನಿಯರ್‌ ಸಚಿನ್‌ ಮಾನಪ್ಪ ಪಾಂಚಾಳ್‌ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ. ಕಳೆದ 30 ತಿಂಗಳುಗಳಲ್ಲಿ ನಿಮ್ಮ ಸರ್ಕಾರ ಭ್ರಷ್ಟಾಚಾರದ ಎಲ್ಲ ದಾಖಲೆಗಳನ್ನೂ ಮುರಿದಿದೆ. ನಿಮ್ಮ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳುತ್ತಾ ಹೋದರೆ ಅದಕ್ಕೆ ಅಂತ್ಯವೇ ಇಲ್ಲ, ದಿನದ 24 ಗಂಟೆಗಳು ಸಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News