×
Ad

ಬಿಡದಿ ಟೌನ್‍ಶಿಪ್ ಬಗ್ಗೆ ಸ್ವತಃ ಪ್ರಧಾನಿ ಮೋದಿ ಶ್ಲಾಘನೆ : ಡಿ.ಕೆ.ಶಿವಕುಮಾರ್

Update: 2026-06-13 21:36 IST

ಬೆಂಗಳೂರು : ಬಿಡದಿ ಟೌನ್‍ಶಿಪ್ ವಿಚಾರವಾಗಿ ಸ್ವತಃ ಪ್ರಧಾನಿ ಮೋದಿ ಅವರು ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಬೆಂಗಳೂರಿನ ಒತ್ತಡ ಕಡಿಮೆ ಮಾಡುತ್ತಿದ್ದೀರಿ ಎಂದು ಶ್ಲಾಘಿಸಿ, ಕಿವಿಮಾತು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ಜಿಲ್ಲಾಧಿಕಾರಿಗಳು, ಸಿಇಓಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದು ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ನಿನ್ನೆಯಷ್ಟೇ ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿದಾಗ ಅವರು, ನಾನು ಏಳೆಂಟು ಟೌನ್‍ಶಿಪ್ ಮಾಡಿದ್ದೆ. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಬೆಂಗಳೂರಿನ ಒತ್ತಡ ಕಡಿಮೆ ಮಾಡುತ್ತಿದ್ದೀರಿ ಎಂದು ನನಗೆ ಕಿವಿಮಾತು ಹೇಳಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ, ಬಿಡದಿ ಟೌನ್‍ಶಿಪ್ ವಿಚಾರವಾಗಿ ಕಾನೂನು ಹೋರಾಟ ಮಾಡವ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ ಎಂದು ಕೇಳಿದಾಗ, ಅವರಿಗೆ ಶುಭ ಕೋರುತ್ತೇನೆ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲೇ ಈ ಟೌನ್ ಶಿಪ್ ಆಗುತ್ತಿದೆ ಎಂದು ಹೇಳಿದರು.

ನೀತಿ ಆಯೋಗ ಸಭೆಯಲ್ಲಿ ಭಾಗಿಯಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿ, ನಿಮ್ಮೆಲ್ಲರ ಭಾವನೆಯಂತೆ ಸಭೆಯಲ್ಲಿ ಭಾಗವಹಿಸಿದ್ದೇನೆ. ನಮ್ಮ ವಿಚಾರ ತಿಳಿಸಿದ್ದು, ನಮ್ಮ ವಿಚಾರಗಳಿಗೆ ಸ್ಪಂದಿಸಿದ್ದಾರೆ. ನಮ್ಮ ಆಚಾರ ವಿಚಾರವನ್ನು ಪ್ರಧಾನಮಂತ್ರಿಗಳು ಯಾವ ರೀತಿ ಒಪ್ಪಿಕೊಂಡಿದ್ದಾರೆ, ನಮ್ಮ ಮಾತನ್ನು ಹೇಗೆ ಉದಾಹರಣೆ ತೆಗೆದುಕೊಂಡಿದ್ದಾರೆ ಎಂದು ಅಲ್ಲಿದ್ದ ನಮ್ಮ ರಾಜ್ಯದ ಬೇರೆ ನಾಯಕರನ್ನು ಕೇಳಿ. ನಮ್ಮ ವಿರುದ್ಧ ಟೀಕೆ ಮಾಡುವ ನಾಯಕರು ಅಲ್ಲಿದ್ದರು ಅವರನ್ನು ಕೇಳಿ ಅವರೇ ಹೇಳುತ್ತಾರೆ ಎಂದು ತಿಳಿಸಿದರು.

 

‘ಸಂಚಾರ ಯೋಜನೆ ಸುಲಭಗೊಳಿಸಲು ಈಗಿನಿಂದಲೇ ಎಲ್ಲ ತಾಲೂಕುಗಳಲ್ಲಿ ವರ್ತುಲ ರಸ್ತೆ ನಿರ್ಮಿಸಲು ಯೋಜನೆ ರೂಪಿಸಬೇಕು. ನಾವು ಕೂಡಲೇ ರಸ್ತೆ ಮಾಡದಿದ್ದರೂ ಇದಕ್ಕಾಗಿ ಗ್ರಿಡ್ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕು ಹಾಗೂ ಜಿಲ್ಲಾ ಕೇಂದ್ರ ಪ್ರದೇಶಗಳಲ್ಲಿ ಇದಕ್ಕೆ ಯೋಜನೆ ರೂಪಿಸಲು ನಿರ್ದೇಶನ ನೀಡಲಾಗಿದೆ’ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News