×
Ad

ಪ್ರತಿಷ್ಠೆಯ ಕಣವಾಗಿರುವ ವಿಧಾನ ಪರಿಷತ್ ಚುನಾವಣೆ | ಜೂ.16ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಶಾಸಕರಿಗೆ ಮತದಾನದ ತರಬೇತಿ

Update: 2026-06-13 21:09 IST

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು : ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಯಾವುದೇ ರೀತಿಯ ಅಡ್ಡ ಮತದಾನಕ್ಕೆ ಅವಕಾಶವಿಲ್ಲದಂತೆ ಶಾಸಕರಿಗೆ ಸೂಕ್ತ ತರಬೇತಿ ನೀಡಲು ಜೂ.16ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜೂ.16ರಂದು ಸಂಜೆ 6 ಗಂಟೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಬಳಿಯ ರೆಸಾರ್ಟ್‍ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಜೂ.18ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ಮತದಾನಕ್ಕೆ ಸಂಬಂಧಪಟ್ಟಂತೆ ಪಕ್ಷದ ಶಾಸಕರಿಗೆ ವಿಶೇಷ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ತನ್ನ ಐದನೇ ಅಭ್ಯರ್ಥಿಯನ್ನು ಗೆಲ್ಲಿಸುವುದು ಪ್ರತಿಷ್ಟೆಯ ವಿಷಯವಾಗಿದೆ. ಅಲ್ಲದೆ, ಈ ಚುನಾವಣೆಯಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಅಡ್ಡ ಮತದಾನ ನಡೆಯದಂತೆ ತಡೆಯಲು ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‍ಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಮತ್ತು ಪರಿಷತ್ ಸದಸ್ಯರು ಕಡ್ಡಾಯವಾಗಿ ಪಾಲ್ಗೊಳ್ಳಲು ನಿರ್ದೇಶನ ನೀಡಲಾಗಿದೆ. ದೇಶದ ಬೇರೆ ರಾಜ್ಯಗಳಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಚ್ಚರಿಕೆ ವಹಿಸಲು ಪಕ್ಷವು ತೀರ್ಮಾನಿಸಿದೆ.

ಪ್ರಸ್ತುತ ವಿಧಾನ ಪರಿಷತ್‍ನ ಏಳು ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದ ಐದು ಮಂದಿ, ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್ ಪಕ್ಷದ ಓರ್ವ ಅಭ್ಯರ್ಥಿ ಸೇರಿದಂತೆ 8 ಮಂದಿ ಕಣದಲ್ಲಿದ್ದಾರೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ ಕನಿಷ್ಠ 28 ಮತಗಳ ಅಗತ್ಯವಿದೆ. ವಿಧಾನಸಭೆಯ(ಶಾಸಕರ) ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್‍ನ 4 ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಅನಾಯಾಸವಾಗಿ ಗೆಲ್ಲಬಹುದು. ಉಳಿದ ಒಂದು ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಶಾಸಕರನ್ನು ಸೆಳೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ.

 

‘ನಮ್ಮ ಪಕ್ಷದ ಐದನೆ ಅಭ್ಯರ್ಥಿಯ ಗೆಲುವು ನಿಶ್ಚಿತ. ಆದರೆ, ಶಾಸಕರು ಮತ ಚಲಾಯಿಸುವ ವೇಳೆ ಯಾವುದೇ ರೀತಿಯ ತಪ್ಪುಗಳು ಆಗದಂತೆ ಎಚ್ಚರ ವಹಿಸುವ ದೃಷ್ಟಿಯಿಂದ ಶಾಸಕರಿಗೆ ತರಬೇತಿ ನೀಡಲು ಜೂ.16ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಎರಡು-ಮೂರು ಮತಗಳು ತಪ್ಪಾಗಿ ಚಲಾವಣೆಯಾದರೂ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಲಾಗುತ್ತಿದೆ’

-ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News