ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣ; ಶಿವಶಂಕರಪ್ಪ ಸಾಹುಕಾರ್ಗೆ ಮಧ್ಯಂತರ ರಕ್ಷಣೆ ಒದಗಿಸಲು ಹೈಕೋರ್ಟ್ ನಕಾರ
ಬೆಂಗಳೂರು: ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ವಿಚಾರಣೆಗೆ ಕರೆದು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸಿ ಮಧ್ಯಂತರ ರಕ್ಷಣೆ ಒದಗಿಸಬೇಕೆಂದು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮಾಡಿದ್ದ ಮನವಿ ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಶಿವಶಂಕರಪ್ಪ ಎಸ್. ಸಾಹುಕಾರ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ಅರ್ಜಿದಾರರನ್ನು ಎರಡನೇ ಬಾರಿಗೆ ಅಮಾನತು ಮಾಡಲಾಗಿದೆ. ಆದ್ದರಿಂದ, ಅವರು ಮತ್ತೆ ಅಧಿಕಾರ ವಹಿಸಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ವಿಚಾರಣೆಗೆ ಅರ್ಜಿದಾರರು ಸಹಕರಿಸಿದ್ದಾರೆ. ಆದರೆ, ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಿದ್ದು, ಪ್ರತಿಭಟನೆಗಳು ನಡೆದಿವೆ. ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಇಲ್ಲ. ಅವರ ಸಂಬಂಧಿಯೊಬ್ಬರು ನೇಮಕಾತಿ ಪ್ರಕ್ರಿಯೆ ಪಾಲ್ಗೊಂಡಿದ್ದರು ಎಂಬ ಆರೋಪವಿದೆ. ಆದರೆ, ಅವರು ಅರ್ಜಿದಾರರ ಸಂಬಂಧಿ ಅಲ್ಲ ಎಂದು ಆಯೋಗದ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ. ಹೀಗಿರುವಾಗ, ಅರ್ಜಿದಾರರನ್ನು ವಿಚಾರಣೆಗೆ ಕರೆಸಿ, ಅನಗತ್ಯವಾಗಿ ಬಂಧಿಸುವ ಸಾಧ್ಯತೆಯಿದೆ. ಆದ್ದರಿಂದ, ಮಧ್ಯಂತರ ರಕ್ಷಣೆ ನೀಡಬೇಕು ಎಂದು ಕೋರಿದರು.
ಸರ್ಕಾರದ ಪರ ಎಸ್‌ಪಿಪಿ ಬಿ.ಎನ್. ಜಗದೀಶ್ ವಾದ ಮಂಡಿಸಿ, ಪ್ರಕರಣದ ತನಿಖೆ ಈಗಷ್ಟೇ ಆರಂಭವಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದೆ. ಆರೋಪಿಯೊಬ್ಬರು ವಿದೇಶಕ್ಕೆ ಹಾರಲು ಸಜ್ಜಾಗಿದ್ದರು. ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದ ಬಂಧಿಸಿ ಕರೆ ತರಲಾಗಿದೆ. ಅರ್ಜಿದಾರರ ವಿರುದ್ಧ ಇದೊಂದೇ ಅಲ್ಲ, ಇನ್ನೂ ಎರಡು ಪ್ರಕರಣಗಳು ಇವೆ. ಅರ್ಜಿದಾರರ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಈಗಷ್ಟೇ ಆರಂಭವಾಗಿರುವುದರಿಂದ ಯಾವುದೇ ರೀತಿಯ ಮಧ್ಯಂತರ ರಕ್ಷಣೆ ಸೂಕ್ತವಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈಗಾಗಲೇ ಅರ್ಜಿದಾರರ ವಿಚಾರಣೆ ನಡೆಸಲಾಗಿದೆ. ಆಗ ಅವರನ್ನು ಬಂಧಿಸಿಲ್ಲ ಎಂದು ಹೇಳಿ, ವಿಚಾರಣೆಗೆ ಕರೆದು ಬಂಧನ ಮಾಡದಂತೆ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂಬ ಅರ್ಜಿದಾರರ ಪರ ವಕೀಲರ ಮಧ್ಯಂತರ ಮನವಿಯನ್ನು ಪರಿಗಣಿಸಲು ನಿರಾಕರಿಸಿ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿತು.