ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರ ರಚಿಸಿರುವ ನೂತನ ಪ್ರಜಾಸೇವಾ ಇಲಾಖೆಯ ಮೊದಲ ಅಭಿಯಾನ ಸೆ.5ರಿಂದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಪ್ರಾರಂಭವಾಗಲಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ.

ಪ್ರಜಾಸೇವಾ ಅಭಿಯಾನ ಸಭೆಯ ದಿನದಂದು ಅಹವಾಲುಗಳನ್ನು ಎರಡು ಪ್ರತ್ಯೇಕ ಸರತಿಗಳಲ್ಲಿ ನಿರ್ವಹಿಸಲಾಗುತ್ತದೆ. ಮೊದಲನೆಯದು ಹೊಸ ಅಹವಾಲುಗಳ ಸರತಿ ಇರಲಿದ್ದು, ಇಲ್ಲಿ ಸಾರ್ವಜನಿಕರು ಮೊದಲ ಬಾರಿಗೆ ನೋಂದಾಯಿಸುವ ಅಹವಾಲುಗಳನ್ನು ದಾಖಲಿಸಲಾಗುತ್ತದೆ. ಪರಿಹಾರವಾಗದ ಅಥವಾ ಅಸಮಾಧಾನಕರವಾಗಿ ಪರಿಹರಿಸಲಾದ ಅಹವಾಲುಗಳ ಕುರಿತು ಮತ್ತೊಂದು ಸರತಿ ಇರಲಿದೆ. ಈಗಾಗಲೇ ಸಕಾಲ ಅಥವಾ ಏಕೀಕೃತ ದೂರು ನಿವಾರಣೆ ತಂತ್ರಾಂಶದಲ್ಲಿ ನೋಂದಾಯಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಅಥವಾ 21 ದಿನಗಳ ನಂತರವೂ ಸಮರ್ಪಕ ಪರಿಹಾರ ದೊರೆಯದ ಅಹವಾಲುಗಳನ್ನು ಈ ಸರತಿಯಲ್ಲಿ ಪರಿಗಣಿಸಲಾಗುತ್ತದೆ.

ಈ ಸರತಿಯನ್ನು ಬಳಸಲು ಸಾರ್ವಜನಿಕರು ತಮ್ಮ ಸಕಾಲ, ಸಿಎಸ್‍ಸಿ ಅಥವಾ ಐಪಿಜಿಆರ್‌ ಎಸ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಸಮಯದ ಅಭಾವವಿದ್ದಲ್ಲಿ ಇಂತಹ ಅಹವಾಲುದಾರರಿಗೆ ಸಭೆಯ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಯೊಂದಿಗೆ ನೇರವಾಗಿ ಸಂವಹನ ನಡೆಸಲು ಆದ್ಯತೆ ನೀಡಲಾಗುತ್ತದೆ. ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ನಂತರ ಸಭೆಯ ಸಂಪೂರ್ಣ ವಿವರಗಳನ್ನು ಪೋರ್ಟಲ್‍ನಲ್ಲಿ ದಾಖಲಿಸಲಾಗುತ್ತದೆ. ಸಭೆಯ ಪ್ರಮುಖ ಅಂಶಗಳು, ಛಾಯಾಚಿತ್ರಗಳು, ವಿಡಿಯೋಗಳು ಹಾಗೂ ಫಲಾನುಭವಿಗಳ ಅಭಿಪ್ರಾಯಗಳನ್ನು ipgrs.karnataka.gov.in  ಪೋರ್ಟಲ್‍ನಲ್ಲಿ ಹಾಗೂ ಅಪ್‍ಲೋಡ್ ಮಾಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ಅವರು ತಿಳಿಸಿದ್ದಾರೆ.

 

1902ಕ್ಕೆ ದೂರು ಸಲ್ಲಿಕೆ

ರಾಜ್ಯದ ವಿವಿಧ ಇಲಾಖೆಗಳ ಸೇವೆ ಹಾಗೂ ಯೋಜನೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ರೂಪಿಸಲಾಗಿದೆ. ಸಾರ್ವಜನಿಕರು 1902 ಸಹಾಯವಾಣಿ ಅಥವಾ ಸರಕಾರದ ದೂರು ನಿವಾರಣಾ ಪೋರ್ಟಲ್ ಮೂಲಕ ತಮ್ಮ ಸಮಸ್ಯೆಗಳನ್ನು ದಾಖಲಿಸಬಹುದು.

ಸಭೆಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಸರಕಾರದ ಯೋಜನೆಗಳ ಅರ್ಹತೆ, ಸೌಲಭ್ಯ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಕುರಿತು ಜನರಿಗೆ ಮಾಹಿತಿ ನೀಡಲಿದ್ದಾರೆ. ಉತ್ತಮ ಕಾರ್ಯಪದ್ಧತಿಗಳ ಪ್ರದರ್ಶನದ ಜತೆಗೆ ಕುಡಿಯುವ ನೀರು ಹಾಗೂ ಮೂಲಭೂತ ವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ಪ್ರತಿ ಸಭೆಯ ಬಳಿಕ ಸ್ವೀಕರಿಸಿದ ಅಹವಾಲುಗಳು, ಕೈಗೊಂಡ ಕ್ರಮ, ಪರಿಹಾರದ ವಿವರ, ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಪೋರ್ಟಲ್‍ನಲ್ಲಿ ದಾಖಲಿಸಲಾಗುತ್ತದೆ. ಬಾಕಿ ಉಳಿದ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.

 

ಗ್ರಾಮ ಒನ್‍ನಲ್ಲಿಯೇ ಅರ್ಜಿ

ಸಾರ್ವಜನಿಕರು ತಮ್ಮ ಅರ್ಜಿ ಹಾಗೂ ಅಹವಾಲುಗಳನ್ನು ಮುಂಚಿತವಾಗಿಯೇ ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ಸಭೆ ನಡೆಯುವ ಸ್ಥಳದಲ್ಲಿಯೂ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ ಕಂಪ್ಯೂಟರ್, ಮುದ್ರಕ ಹಾಗೂ ಅಂತರ್ಜಾಲ ಸೌಲಭ್ಯ ಒದಗಿಸಲಾಗುತ್ತದೆ. ಇದರಿಂದ ಸ್ಥಳದಲ್ಲಿಯೇ ಆನ್‍ಲೈನ್ ಮೂಲಕ ಅರ್ಜಿ ಹಾಗೂ ದೂರು ಸಲ್ಲಿಸಲು ಅವಕಾಶ ದೊರೆಯಲಿದೆ.

 

ಸ್ಥಳದಲ್ಲಿಯೇ ಸೇವೆ ಪರಿಹಾರ!

ಪ್ರಜಾಸೇವಾ ಅಭಿಯಾನ ಸಭೆಯ ಸಂದರ್ಭದಲ್ಲಿ ಅರ್ಹತೆ ಹೊಂದಿರುವ ಯೋಜನಾ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಸ್ಥಳದಲ್ಲಿಯೇ ವಿತರಿಸಬಹುದಾಗಿದೆ. ಅದೇ ರೀತಿ ಈಗಾಗಲೇ ಪರಿಹರಿಸಲಾದ ಅಹವಾಲುಗಳಿಗೆ ಸಂಬಂಧಿಸಿದಂತೆ ಪರಿಹಾರದ ಸೂಕ್ತ ಅನುಮೋದನೆ, ದೃಢೀಕರಣ ಪತ್ರವನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor