ಸಂಸದ ಸಸಿಕಾಂತ್ ಸೆಂಥಿಲ್ ದೂರು : ಶಾಸಕ ಜನಾರ್ದನ ರೆಡ್ಡಿಗೆ ಸಮನ್ಸ್ ಜಾರಿ

Update: 2026-07-28 23:45 IST

 ಜನಾರ್ದನ ರೆಡ್ಡಿ/ಸಸಿಕಾಂತ್ ಸೆಂಥಿಲ್

ಬೆಂಗಳೂರು : ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತಮಿಳುನಾಡಿನ ತಿರುವಳ್ಳೂರು ಸಂಸದ ಸಸಿಕಾಂತ್ ಸೆಂಥಿಲ್ ದಾಖಲಿಸಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಜನಾರ್ದನ ರೆಡ್ಡಿ ಅವರಿಗೆ ಸಮನ್ಸ್ ಜಾರಿಗೊಳಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಮಂಗಳವಾರ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶ ಸಂದೀಪ್ ಪಾಟೀಲ್ ಅವರು ಈ ಕುರಿತ ಖಾಸಗಿ ದೂರನ್ನು ವಿಚಾರಣೆ ನಡೆಸಿದರು.

ಶಾಸಕ ಜನಾರ್ದನ ರೆಡ್ಡಿ ವಿರುದ್ಧದ ಆಪಾದನೆಗಳ ತನಿಖೆಗೆ ಪರಿಗಣಿಸಿ ಆರೋಪಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿದರು. ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಲಾಗಿದೆ.

 ಸೆಂಥಿಲ್ ಪರ ಹೈಕೋರ್ಟ್‌ ವಕೀಲ ಸೂರ್ಯ ಮುಕುಂದರಾಜ್‌ ಮತ್ತು ಸಂಜಯ ಯಾದವ್‌ ಹಾಜರಿದ್ದರು.

ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರದ ಹಿಂದಿನ ಮಾಸ್ಟರ್​ ಮೈಂಡ್​​ ಸಸಿಕಾಂತ್ ಸೆಂಥಿಲ್ ಅವರಾಗಿದ್ದಾರೆ ಎಂದು ಕಳೆದ ವರ್ಷ ಆಗಸ್ಟ್​ನಲ್ಲಿ ಜನಾರ್ದನ ರೆಡ್ಡಿ ಅವರು ಆರೋಪಿಸಿ, ತನಿಖೆ ಎದುರಿಸುವಂತೆ ಸವಾಲೆಸೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸೆಂಥಿಲ್, ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಮಾಡಿದ್ದಾರೆ. ನಾನು ಈ ಹಿಂದೆ ಬಳ್ಳಾರಿಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾಗ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳ ಕುರಿತು ಸಿಬಿಐಗೆ ದಾಖಲೆಗಳನ್ನು ಒದಗಿಸಿದ್ದೆ. ಅದಕ್ಕಾಗಿ ಈಗ ರೆಡ್ಡಿ ಅವರು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News