Nelamangala | ಮೀಸಲಾತಿ ಕುರಿತು ಅವಹೇಳನ ಆರೋಪ; ನಿರೂಪಕ ಅರುಣ್ ಬಡಿಗೇರ್ ವಿರುದ್ಧ ದೂರು ದಾಖಲು
Update: 2026-07-28 21:17 IST
ಅರುಣ್ ಬಡಿಗೇರ್
ಬೆಂಗಳೂರು : ಮೀಸಲಾತಿ ಕುರಿತು ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ ಖಾಸಗಿ ವಾಹಿನಿಯ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಇಲ್ಲಿನ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೆಲಮಂಗಲದ ನಿವಾಸಿ ಅನಂತಕುಮಾರ್ ಡಿ.ಆರ್. ಅವರು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ನಾನ್-ಕಾಗ್ನಿಜಬಲ್ ವರದಿ(ಎನ್‍ಸಿಆರ್) ದಾಖಲಿಸಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಮೀಸಲಾತಿ ಹಾಗೂ ಮೀಸಲಾತಿ ಫಲಾನುಭವಿಗಳ ಕುರಿತು ಅವಹೇಳನಕಾರಿ, ಪೂರ್ವಾಗ್ರಹಪೀಡಿತ ಮತ್ತು ಸಮಾಜದಲ್ಲಿ ದ್ವೇಷ, ವಿಭಜನೆ ಹಾಗೂ ತಪ್ಪು ಅಭಿಪ್ರಾಯಗಳನ್ನು ಉಂಟುಮಾಡುವ ಹೇಳಿಕೆಗಳನ್ನು ಪ್ರಸಾರ ಮಾಡಿರುವ ಸಂಬಂಧ ನಿರೂಪಕ ಅರುಣ್ ಬಡಿಗೇರ್ ಹಾಗೂ ಖಾಸಗಿ ವಾಹಿನಿಯ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.