ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ, ಬಾಳೆಹಣ್ಣು ವಿತರಣೆ : ಆದೇಶ
ಸಾಂದರ್ಭಿಕ ಚಿತ್ರ
ಬೆಂಗಳೂರು : ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪ್ರಸ್ತುತ 53 ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿತರಿಸಲಾಗುತ್ತಿರುವ ಮೊಟ್ಟೆ ಅಥವಾ ಬಾಳೆಹಣ್ಣನ್ನು ವಾರದಲ್ಲಿ ಆರು ದಿನ ನೀಡುವುದಾಗಿ ರಾಜ್ಯ ಸರಕಾರ ತಿಳಿಸಿದೆ.
ಗುರುವಾರ ಈ ಸಂಬಂಧ ಆದೇಶ ಹೊರಡಿಸಿದ್ದು, ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ 1,500 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲಾಗುತ್ತದೆ ಎಂದು ತಿಳಿಸಿದೆ.
ಪೂರಕ ಪೌಷ್ಠಿಕಾಂಶದ ರೂಪದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಮೊಟ್ಟೆಯು ಉತ್ತಮಗುಣಮಟ್ಟವುಳ್ಳದಾಗಿದ್ದು, ಕನಿಷ್ಠ 50ಗ್ರಾಂ ತೂಕವನ್ನು ಹೊಂದಿರಬೇಕು. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಪ್ರತಿ ದಿನ 2 ಉತ್ತಮವಾದ ಬಾಳೆಹಣ್ಣನ್ನು ನೀಡಬೇಕು ಎಂದು ಹೇಳಿದೆ.
ಹಾಗೆಯೇ ಶಾಲಾ ಮುಖ್ಯಸ್ಥರು ಪ್ರತಿ ವಾರ ಕನಿಷ್ಠ ಹತ್ತು ಪೋಷಕರನ್ನು ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಲು ಆಹ್ವಾನಿಸಬೇಕು. ಶಾಲಾ ಶಿಕ್ಷಣ ಆಯುಕ್ತರು ಇದನ್ನು ತಕ್ಷಣವೇ ಜಾರಿಗೆ ತರುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಆದೇಶ ದಲ್ಲಿ ಉಲ್ಲೇಖಸಿದೆ.
ಮಕ್ಕಳ ದಿನಾಚರಣೆ ದಿನದಂದು ಶಾಲೆಯಲ್ಲಿನ ಎಲ್ಲ ಮಕ್ಕಳ ಪೋಷಕರನ್ನು ಮಧ್ಯಾಹ್ನದ ಊಟಕ್ಕೆ ಆಹ್ವಾನಿಸಿ ಬೇಕು ಹಾಗೂ ಮಕ್ಕಳ ಪೋಷಕರ ಸಮ್ಮುಖದಲ್ಲಿ ಶಾಲಾ ಲೆಕ್ಕಪತ್ರಗಳ ವಿವರಗಳನ್ನು ಶಾಲಾ ಮುಖ್ಯಸ್ಥರು ಶಿಕ್ಷಕರು ಓದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.