ಚುನಾವಣಾ ಆಯೋಗ | Photo Credit : PTI 

ಬೆಂಗಳೂರು: ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಿಂದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ 99 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ತೆಗೆದುಹಾಕಿದ ಕೆಲವೇ ವಾರಗಳ ಬಳಿಕ, ರಾಜ್ಯದಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ.

ಈ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರು ಹಾಗೂ ಮೊದಲ ಬಾರಿಗೆ ಮತದಾರರಾಗುವವರನ್ನು ಪಟ್ಟಿಗೆ ಸೇರ್ಪಡೆಗೊಳಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ.

ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಡಿ. 1ರಂದು ಸಂಯೋಜಿತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವುದರೊಂದಿಗೆ SSR ಪ್ರಕ್ರಿಯೆಯ ಸಾರ್ವಜನಿಕ ಹಂತ ಆರಂಭವಾಗಲಿದೆ. ಕರಡು ಪಟ್ಟಿಗೆ ಸಂಬಂಧಿಸಿದಂತೆ ಸೇರ್ಪಡೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ. 31ರವರೆಗೆ ಅವಕಾಶವಿದೆ. ಜ. 20ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಪ್ರಕ್ರಿಯೆಯಲ್ಲಿ ಸುರಕ್ಷತೆ ಖಚಿತಪಡಿಸಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ನಿಗದಿಪಡಿಸಿದೆ. ಒಂದು ಮತಗಟ್ಟೆಯ ವ್ಯಾಪ್ತಿಯಲ್ಲಿ ಶೇ. 2ಕ್ಕಿಂತ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಿದರೆ ಅಥವಾ ಒಬ್ಬ ವ್ಯಕ್ತಿ ಐದು ಪ್ರಕರಣಗಳಲ್ಲಿ ಆಕ್ಷೇಪಣೆ ಸಲ್ಲಿಸಿದರೆ, ಚುನಾವಣಾ ನೋಂದಣಾಧಿಕಾರಿಗಳು (ERO) ಆಯಾ ಪ್ರಕರಣಗಳನ್ನು ಖುದ್ದಾಗಿ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರತಿಯೊಂದು ಹೆಸರು ಅಳಿಸುವ ಪ್ರಕರಣದಲ್ಲೂ ಚುನಾವಣಾ ನೋಂದಣಾಧಿಕಾರಿಗಳು ಕಾರಣಗಳನ್ನು ವಿವರಿಸುವ ತಾರ್ಕಿಕ ಆದೇಶ ಹೊರಡಿಸಬೇಕು. ಸಂಬಂಧಪಟ್ಟ ವ್ಯಕ್ತಿಗೆ ವಿಚಾರಣೆಯಲ್ಲಿ ತನ್ನ ವಾದ ಮಂಡಿಸಲು ಅವಕಾಶ ನೀಡಬೇಕು. ಅಲ್ಲದೆ, ಹೊರಡಿಸಿದ ಆದೇಶವನ್ನು ECINETನಲ್ಲಿ ಅಪ್‌ ಲೋಡ್ ಮಾಡಬೇಕು ಎಂದು ಚುನಾವಣಾ ಆಯೋಗ ನಿರ್ದೇಶಿಸಿದೆ.

SSR ಪ್ರಕ್ರಿಯೆಗೆ ನಿಯೋಜಿಸಲಾದ ಅಧಿಕಾರಿಗಳನ್ನು ಡಿ. 1ರಿಂದ ಜ. 20, 2027ರವರೆಗೆ, ಅಂದರೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವವರೆಗೆ, ಚುನಾವಣಾ ಆಯೋಗದ ಅನುಮತಿಯಿಲ್ಲದೆ ವರ್ಗಾವಣೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು , ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.