ಜಿಬಿಎ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ: 10 ದಿನದಲ್ಲಿ 490 ಕಿ.ಮೀ.ನಷ್ಟು ತೆರವು ಕಾರ್ಯಾಚರಣೆ ಪೂರ್ಣ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜುಲೈ1ರಿಂದ ಆರಂಭವಾದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯ ಜು.10ರ ಅಂತ್ಯಕ್ಕೆ 490 ಕಿಲೋ ಮೀಟರ್ ನಷ್ಟು ಪೂರ್ಣಗೊಳಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ತಿಳಿಸಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಅವರು, ಜು.11, 12ರಂದು ಸರಕಾರಿ ರಜಾ ದಿನಗಳಾದ್ದರಿಂದ ತೆರವು ಕಾರ್ಯಾಚರಣೆ ಮತ್ತೆ ಜು.13ರಿಂದ ಮುಂದುವರೆಸಲಾಗಿದೆ. ನಗರದಲ್ಲಿ ಒಟ್ಟು 1,500 ಕಿಲೋ ಮೀಟರ್ ಗುರಿ ಮುಟ್ಟುವ ತನಕ ಕಾರ್ಯಾಚರಣೆ ಮುಂದುವರೆಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿರುವ ಹಿನ್ನೆಲೆ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದಿದ್ದಾರೆ.
ಈ ಕಾರ್ಯಾಚರಣೆ ಹಿನ್ನೆಲೆ ತೊಂದರೆಗೆ ಒಳಗಾಗಿರುವ ಬೀದಿ ವ್ಯಾಪಾರಿಗಳಿಗೆ ಮುಖ್ಯರಸ್ತೆ ಹೊರತುಪಡಿಸಿ ಪರ್ಯಾಯ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸಲಾಗುವುದು ಎಂದು ಮಹೇಶ್ವರರಾವ್ ಭರವಸೆ ನೀಡಿದ್ದಾರೆ.
ಜು.10ರ ಅಂತ್ಯಕ್ಕೆ ಬೆಂಗಳೂರಿನ 5 ನಗರ ಪಾಲಿಕೆಗಳ ವ್ಯಾಪ್ತಿಯ ಪೈಕಿ ಬೆಂಗಳೂರು ಕೇಂದ್ರದಲ್ಲಿ 70.15 ಕಿ.ಮೀ., ಬೆಂಗಳೂರು ದಕ್ಷಿಣದಲ್ಲಿ 94.01 ಕಿ.ಮೀ., ಬೆಂಗಳೂರು ಪೂರ್ವದಲ್ಲಿ 88.42 ಕಿ.ಮೀ., ಬೆಂಗಳೂರು ಪಶ್ಚಿಮದಲ್ಲಿ 22.62 ಕಿ.ಮೀ., ಬೆಂಗಳೂರು ಉತ್ತರದಲ್ಲಿ 115.35 ಕಿ.ಮೀ.ನಷ್ಟು ಪಾದಚಾರಿ ಮಾರ್ಗ ಒತ್ತುವರಿ ತೆರೆವುಗೊಳಿಸಲಾಗಿದೆ ಎಂದು ಮಹೇಶ್ವರರಾವ್ ಮಾಹಿತಿ ನೀಡಿದ್ದಾರೆ.