×
Ad

ಸಿಎಂ ಸಿದ್ದರಾಮಯ್ಯ ಅವರ ಕನಸು, ಕಾಳಜಿಯ ʼಗ್ಯಾರಂಟಿʼ ಯೋಜನೆಗಳ ಯಶಸ್ವಿ ಜಾರಿಗೆ ಅಭಿನಂದನೆ ಸಲ್ಲಿಸಿದ ರೈತ ಪ್ರತಿನಿಧಿಗಳು

Update: 2024-02-11 13:13 IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು ಮತ್ತು ಕಾಳಜಿಯ ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿಗೆ ರೈತ ಮುಖಂಡರು ಮತ್ತು ರೈತ ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.‌

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಬಜೆಟ್ ಪೂರ್ವ ರೈತ ಮುಖಂಡರು ಮತ್ತು ರೈತ ಹೋರಾಟಗಾರರ ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿಯ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದರು.

ಬಹಳ ಕಷ್ಟಪಟ್ಟು ಐದೂ ಗ್ಯಾರಂಟಿ ಯೋಜನೆಗಳನ್ನು ಇಷ್ಟು ಶೀರ್ಘವಾಗಿ ಜಾರಿ ಮಾಡಿದ್ದೀರಿ, ವಿಪಕ್ಷಗಳ ಟೀಕೆಗಳಿಗೆ ಅಂಜುವ ಅಗತ್ಯವಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳಂತೆ ಕೃಷಿಯಲ್ಲೂ ಕರ್ನಾಟಕ ದೇಶಕ್ಕೆ ಮಾದರಿ ಆಗುವ ಕಾರ್ಯಕ್ರಮ ಘೋಷಿಸುವಂತೆ ರೈತ ಮುಖಂಡರು ಒತ್ತಾಯ ಮಾಡಿದರು.

ರೈತ ಮಹಿಳೆಯರ ಮತ್ತು ರೈತ ಕುಟುಂಬಗಳ ಆರ್ಥಿಕ ಶಕ್ತಿ-ಚೈತನ್ಯವನ್ನು ಗ್ಯಾರಂಟಿ ಯೋಜನೆಗಳು ಹೆಚ್ಚಿಸಿರುವುದನ್ನು ವಿವರಿಸಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತರ ಮತ್ತು ಜನ ಸಮುದಾಯದ ಪೌಷ್ಠಿಕತೆ ಹೆಚ್ಚಿಸುವ ದಿಕ್ಕಿನಲ್ಲಿ ಸಲಹೆ ನೀಡಿದರು. ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿ ಅಗತ್ಯ ಕ್ರಮ ವಹಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬಹಳ ಕಷ್ಟ ಪಟ್ಟು ಗ್ಯಾರಂಟಿ ಯೋಜನೆಗಳನ್ನು ಇಷ್ಟು ಶೀರ್ಘವಾಗಿ ಜಾರಿ ಮಾಡಿದ್ದೀರಿ. ಇದರ ಅನುಕೂಲ ರಾಜ್ಯದ ಜನರಿಗೆ ಆಗುತ್ತಿರುವ ಹೊತ್ತಲ್ಲಿ ಟೀಕೆಗಳಿಗೆ ಅಂಜುವ ಅಗತ್ಯವಿಲ್ಲ ಎನ್ನುವ ಅಭಿಪ್ರಾಯಗಳು ರೈತ ಪ್ರತಿನಿಧಿಗಳಿಂದ ವ್ಯಕ್ತವಾಯಿತು.

ಈ ವೇಳೆ ಪಶುಸಂಗೋಪನೆ ಸಚಿವ ವೆಂಕಟೇಶ್, ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ.ಶಾಲಿನಿ ರಜನೀಶ್, ರೈತ ಸಂಘಟನೆಗಳ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ವೀರಸಂಗಯ್ಯ, ಚುಕ್ಕಿ ನಂಜುಂಡಸ್ವಾಮಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡ ಸುನಂದಾ ಜಯರಾಂ ಸೇರಿದಂತೆ ವಿವಿಧ ರೈತ ಸಂಘಟನೆಗಳ 218 ಮಂದಿ ಮುಖಂಡರು ಉಪಸ್ಥಿತರಿದ್ದರು.

ಸಾಲಮನ್ನಾಕ್ಕೆ ಆಗ್ರಹ: ರಾಜ್ಯ ಬಜೆಟ್‍ನಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಹಾಗೂ ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ 5ಲಕ್ಷ ರೂ. ಪ್ರೋತ್ಸಾಹ ಧನ ನೀಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿರುವುದಾಗಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News