‘ಬಿಎಲ್‍ಒಗಳಿಂದ ಕಚೇರಿಯಿಂದಲೆ ಗಣತಿ ನಮೂನೆ ವಿತರಣೆ ಆರೋಪ’: ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ
ಬೆಂಗಳೂರು: ಬೂತ್ ಮಟ್ಟದ ಅಧಿಕಾರಿ(ಬಿಎಲ್‍ಒ)ಗಳು ಮನೆ ಮನೆಗೆ ಭೇಟಿ ನೀಡಿ ಗಣತಿ(ಎನ್ಯುಮರೇಷನ್) ನಮೂನೆಗಳನ್ನು ವಿತರಣೆ ಮಾಡಬೇಕು. ಈ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸೂಚಿಸಿದ್ದಾರೆ.
ಜಿಬಿಎ ಮುಖ್ಯ ಆಯುಕ್ತ, ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ, ಎಲ್ಲ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಬಿಎ ವಿಶೇಷ ಆಯುಕ್ತರು(ಚುನಾವಣೆ), ಬಿಬಿಎಂಪಿ ಕೇಂದ್ರ, ಉತ್ತರ ಹಾಗೂ ದಕ್ಷಿಣ ಚುನಾವಣಾ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಬೆಂಗಳೂರು ನಗರ ಪಾಲಿಕೆಗಳ(ಉತ್ತರ, ದಕ್ಷಿಣ ಹಾಗೂ ಕೇಂದ್ರ) ಆಯುಕ್ತರಿಗೆ ಅವರು ಈ ಸಂಬಂಧ ಪತ್ರ ಬರೆದಿದ್ದಾರೆ.
ಭಾರತದ ಚುನಾವಣಾ ಆಯೋಗವು ಹೊರಡಿಸಿರುವ ನಿರ್ದೇಶನಗಳು, ಮಾರ್ಗಸೂಚಿಗಳು ಹಾಗೂ ವೇಳಾಪಟ್ಟಿಯಂತೆ ರಾಜ್ಯದಲ್ಲಿ ಮತದಾರರಿಗೆ ಗಣತಿ ನಮೂನೆಗಳ ವಿತರಣೆ ಜೂ.30ರಿಂದ ಆರಂಭವಾಗಿದೆ. ಆದರೆ, ಕೆಲವು ದೂರುಗಳು ಬಂದಿದ್ದು, ಬೂತ್ ಮಟ್ಟದ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡದೆ ಕಚೇರಿಗಳಿಂದಲೆ ನಮೂನೆಗಳನ್ನು ವಿತರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೇಲ್ಕಂಡ ದೂರುಗಳ ಹಿನ್ನೆಲೆಯಲ್ಲಿ, ಎಲ್ಲ ಬೂತ್ ಮಟ್ಟದ ಅಧಿಕಾರಿಗಳಿಗೆ ಮನೆಮನೆಗೆ ಭೇಟಿ ನೀಡಿ, ಭಾರತದ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಗಣತಿ ನಮೂನೆಗಳನ್ನು ವಿತರಿಸುವಂತೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು. ಜೊತೆಗೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಕಾರ್ಯಕ್ರಮದ ಎಲ್ಲ ಅಂಶಗಳಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳು ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಅನ್ಬುಕುಮಾರ್ ಹೇಳಿದ್ದಾರೆ.
ಇದಲ್ಲದೆ, ಗಣತಿ ನಮೂನೆಗಳನ್ನು ಭರ್ತಿ ಮಾಡಲು ತೊಂದರೆ ಅನುಭವಿಸುವ ಮತದಾರರು ಅಗತ್ಯ ಸಹಾಯಕ್ಕಾಗಿ ಮತದಾರರ ಸೌಲಭ್ಯ ಕೇಂದ್ರಗಳಿಗೆ (Voter Facilitation Centres) ಭೇಟಿ ನೀಡುವ ಅವಕಾಶವಿದ್ದು, ಈ ಸೌಲಭ್ಯದ ಕುರಿತು ವ್ಯಾಪಕವಾಗಿ ಜನಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದ್ದಾರೆ.