×
Ad

ಮಾದಾಪಟ್ಟಣ | ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಕಾರ್ಮಿಕರು ಮೃತಪಟ್ಟ ಪ್ರಕರಣ: ಕ್ರಷರ್ ಅನ್ನು ಗುತ್ತಿಗೆಗೆ ಪಡೆದಿದ್ದ ಮಾಲಕ ಸೇರಿ ಮೂವರ ಬಂಧನ

Update: 2026-07-03 20:13 IST

Screengrab: X/@PTI_News

ಬೆಂಗಳೂರು: ನಗರದ ಹೊರವಲಯದಲ್ಲಿರುವ ಮಾದಾಪಟ್ಟಣ ಕಲ್ಲು ಕ್ವಾರಿಯಲ್ಲಿ ಬಂಡೆ ಬಿದ್ದು ಏಳು ಮಂದಿ ಕಾರ್ಮಿಕರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಸವೇಶ್ವರ ಕ್ರಷರ್ ಅನ್ನು ಗುತ್ತಿಗೆಗೆ ಪಡೆದಿದ್ದ ಸಾಯಿ ರಾಮ್ ಕ್ರಷರ್ ನ ಮಾಲಕ ಪಾಂಡುರಂಗ, ಕ್ವಾರಿ ಉಸ್ತುವಾರಿ ಲೋಕೇಶ್ ಹಾಗೂ ಸ್ಥಳೀಯ ಉಸ್ತುವಾರಿ ರಾಜು ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳು ಎನ್ನಲಾದ ಕಾವೇರಿ ಕ್ರಷರ್ ಮಾಲಕ ಉದಯ್ ಶಂಕರ್ ಮತ್ತು ಬಸವೇಶ್ವರ ಕ್ರಷರ್ ಮಾಲಕ ಡಿ.ಆನಂದಸ್ವಾಮಿ ಪರಾರಿಯಾಗಿದ್ದಾರೆ. ಅವರ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುರಂತ ನಡೆದಾಗ ಕೂದಲೆಳೆ ಅಂತರದಿಂದ ಪಾರಾಗಿದ್ದ ಕಾರ್ಮಿಕ ಗೋಪಿಕೃಷ್ಣನ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ತಾವರೆಕೆರೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ ನಿರ್ಲಕ್ಷ್ಯ ಹಾಗೂ ಪ್ರಾಣಹಾನಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಮಾದಾಪಟ್ಟಣದ ಕಾವೇರಿ ಕ್ರಷರ್ ನಲ್ಲಿ ಎಂದಿನಂತೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗ, ಮೇಲ್ಭಾಗದಲ್ಲಿದ್ದ ಬಸವೇಶ್ವರ ಕ್ರಷರ್ ನಿಂದ ಬೃಹತ್ ಕಲ್ಲುಬಂಡೆ ಉರುಳಿ ಬಿದ್ದಿದೆ. ಸುರಕ್ಷತಾ ಕ್ರಮಗಳ ಲೋಪದಿಂದಾದ ಈ ದುರಂತದಲ್ಲಿ ಬಿಹಾರದ ವಲಸೆ ಕಾರ್ಮಿಕರು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಸ್ಥಳಕ್ಕೆ ಬಂದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಪ್ರಾಥಮಿಕ ವರದಿಯನ್ನು ತಾವರೆಕೆರೆ ಪೊಲೀಸರಿಗೆ ಸಲ್ಲಿಸಿದ್ದಾರೆ. ಪೊಲೀಸರು ಈಗಾಗಲೇ ಬಂಧಿಸಿರುವ ಆರೋಪಿಗಳನ್ನು ಹೊರತುಪಡಿಸಿ, ಕ್ವಾರಿಯ ವ್ಯವಸ್ಥಾಪಕ, ಮೇಸ್ತ್ರಿಗಳು ಮತ್ತು ಹಿಟಾಚಿ ಡ್ರೈವರ್ ಸೇರಿ ನಾಲ್ವರನ್ನು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕ್ವಾರಿಯಲ್ಲಿ ಕೆಲಸ ಮಾಡುವಾಗ ದುರಂತ ಸಂಭವಿಸುವ ಸಾಧ್ಯತೆ ಇದೆ ಎಂದು ಗೊತ್ತಿದ್ದರೂ ಕಾರ್ಮಿಕರಿಂದ ಕೆಲಸ ಮಾಡಿಸಲಾಗಿದೆ. ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಕೆಲಸ ಮಾಡಿಸಿದ್ದಾರೆ. ಹೀಗಾಗಿ ದುರಂತ ಸಂಭವಿಸಲು ನಿರ್ಲಕ್ಷ್ಯವೇ ಕಾರಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕ್ವಾರಿಯ ಪರವಾನಗಿ ಅಮಾನತು ಮಾಡುವ ಸಾಧ್ಯತೆ:

ಪ್ರಾಥಮಿಕ ವರದಿಯನ್ನು ಆಧರಿಸಿ ಬಸವೇಶ್ವರ ಸ್ಟೋನ್ ಕ್ವಾರಿ ಮತ್ತು ಕಾವೇರಿ ಕ್ವಾರಿ ಪರವಾನಗಿಯನ್ನು ಅಮಾನತು ಮಾಡಲು ಕ್ರಮ ವಹಿಸಲಾಗುತ್ತಿದೆ. ಅಮಾನತಾದರೆ ಮುಂದಿನ ಆದೇಶದವರೆಗೆ ಕ್ವಾರಿಗೆ ಸಂಬಂಧಿಸಿದ ಯಾವುದೇ ಕೆಲಸ ನಡೆಸುವಂತಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಮೃತದೇಹ ಕುಟುಂಬಕ್ಕೆ ಹಸ್ತಾಂತರ:

ತಡರಾತ್ರಿ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಬ್ಬರು ಮೃತರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ಮಧ್ಯಪ್ರದೇಶ ಮೂಲದ ಸತ್ಯನಾರಾಯಣ ಹಾಗೂ ಯಾದಗಿರಿ ಮೂಲದ ರಾಮ ನಾಯ್ಕ್ ಮೃತದೇಹಗಳನ್ನು ಪೊಲೀಸರು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇನ್ನುಳಿದ ಐದು ಮಂದಿ ಕಾರ್ಮಿಕರ ಮೃತದೇಹಗಳು ಸದ್ಯ ಆಸ್ಪತ್ರೆಯ ಶವಾಗಾರದಲ್ಲೇ ಇವೆ. ಸಂಬಂಧಿಕರು ಆಗಮಿಸಿದ ನಂತರ ಕಾನೂನು ಪ್ರಕ್ರಿಯೆ ಪೂರೈಸಿ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News