×
Ad

ರಾಜ್ಯ ಸರಕಾರ ಕೇಂದ್ರೀಯ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಎಸ್‍ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಆರೋಪ

"ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ"

Update: 2026-07-03 19:34 IST

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ರಾಜ್ಯ ಸರಕಾರ ಕೇಂದ್ರೀಯ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.

ಶುಕ್ರವಾರ ನಗರದಲ್ಲಿರುವ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ತುರ್ತು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯುಕ್ತರಿಗೆ ಖುದ್ದು ನಾನೇ ಹೋಗಿ ದೂರು ನೀಡುತ್ತೇನೆ. ಇಡೀ ಎಸ್‍ಐಆರ್ ಅಕ್ರಮದ ಮೂಲ ಸೂತ್ರದಾರಿ ಈ ರಾಜ್ಯದ ಮುಖ್ಯಮಂತ್ರಿಯೆ ಆಗಿದ್ದಾರೆ ಎಂದು ದೂರಿದರು.

ಈ ಸರಕಾರವು ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತದೆ. ಅವರನ್ನು ಹೆದರಿಸಿ ಬೆದರಿಸಿ ತನಗೆ ಬೇಕಾದ ಹಾಗೆ ಎಸ್‍ಐಆರ್ ಮಾಡಿಸಿಕೊಳ್ಳುತ್ತಿದೆ. ಆದುದರಿಂದ, ಈ ಕೂಡಲೇ ರಾಜ್ಯದ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕು ಹಾಗೂ ಈವರೆಗೂ ಆಗಿರುವ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ರಾಮನಗರ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನೇರವಾಗಿ ಕ್ಷೇತ್ರದ ಶಾಸಕರ ಸೂಚನೆಯ ಮೇರೆಗೆ ಅಕ್ರಮವಾಗಿ ಎಸ್‍ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪರಿಷ್ಕರಣೆ ಸಿಬ್ಬಂದಿ ಪರಸ್ಪರ ಶಾಮೀಲಾಗಿ ಪರಿಷ್ಕರಣೆಯನ್ನು ಸಂಪೂರ್ಣವಾಗಿ ತಿರುಚುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ರಾಜ್ಯದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಹಾಗೂ ಸಿಬ್ಬಂದಿ ಮನೆಮನೆಗೂ ತೆರಳಿ ಮಾಹಿತಿ ಪಡೆಯುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಪರಿಷ್ಕರಣೆ ಸಿಬ್ಬಂದಿಯ ಮೇಲೆ ಒತ್ತಡ ತಂದು ತನಗೆ ಬೇಕಾದ ಹಾಗೆ ಮನಸೋ ಇಚ್ಛೆಯಂತೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿಸಿಕೊಳ್ಳುತ್ತಿದೆ. ಇದು ಕೇಂದ್ರೀಯ ಚುನಾವಣಾ ಆಯೋಗದ ಮಾರ್ಗಸೂಚಿಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ ಎಂದು ಅವರು ದೂರಿದರು.

ಒಂದು ಕಡೆ ಸಂವಿಧಾನ ಪುಸ್ತಕ ತೆಗೆದುಕೊಂಡು ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಇನ್ನೊಂದು ಕಡೆ ಎಸ್‍ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸುತ್ತಾರೆ. ಸಂವಿಧಾನವನ್ನೇ ಬುಡಮೇಲು ಮಾಡುವ ಜನ ಇವರು. ಅಂತಹ ಕೆಲಸಗಳಲ್ಲಿ ಇವರದು ಎತ್ತಿದ ಕೈ. ಕುಣಿಗಲ್, ಪಾವಗಡ, ಅರಕಲಗೂಡು, ಇಂಡಿ ಮುಂತಾದ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಆಕ್ರಮಗಳನ್ನು ನಡೆಸುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟೆಲ್ಲಾ ಅಕ್ರಮಗಳು ನಡೆಸುತ್ತಿರುವುದು ಕಣ್ಣಿಗೆ ಕಾಣುತ್ತಿದ್ದರೂ ಪ್ರಜಾಸೇವಾ ಇಲಾಖೆ ಅಂತ ಮಾಡಿದ್ದಾರೆ. ಪ್ರಜಾಸೇವೆ ಎಂದರೆ ಮತದಾರರ ಪಟ್ಟಿಯನ್ನು ತಿರುಚುವುದಾ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಈವರೆಗೆ ಅಕ್ರಮಗಳನ್ನು ನಡೆಸಿರುವ ರಾಜ್ಯದ ಅಧಿಕಾರಿಗಳನ್ನೆ ಮುಂದುವರೆಸಿದರೆ ಆಗುವುದಿಲ್ಲ. ಇವರಿಂದ ಪರಿಷ್ಕರಣೆ ಪ್ರಕ್ರಿಯೆ ನಡೆದರೆ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬರುತ್ತದೆ ಎಂದು ಹೇಳಿದರು.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗಾಗಿ ಸ್ಥಳೀಯ ಅಧಿಕಾರಿಗಳನ್ನು ಹೊರಗಿಟ್ಟು, ಹೊರಗಿನಿಂದ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಸರಕಾರ ಮನಸ್ಸು ಇಚ್ಛೆ ಈ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂದು ಕುಮಾರಸ್ವಾಮಿ ದೂರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News