ಕೃಷಿ ಸಾಲಮನ್ನಾ ಮಾಡಿ, ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ನೀಡಿ: ಬಿ.ವೈ.ವಿಜಯೇಂದ್ರ
"ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ"
ವಿಜಯಪುರ : ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕರ್ನಾಟಕದಲ್ಲಿ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸದ ಸರ್ಕಾರ, ತಕ್ಷಣವೇ ಮಹಾರಾಷ್ಟ್ರ ಮಾದರಿಯಲ್ಲಿ ಕೃಷಿ ಸಾಲಮನ್ನಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳು, ತೆಲಂಗಾಣಕ್ಕೆ ಕೃಷ್ಣಾ ನದಿ ನೀರು ಹರಿಸಿದ ವಿವಾದ ಹಾಗೂ ರಾಜ್ಯದ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರದ ಕ್ರಮಗಳನ್ನು ಖಂಡಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸರ್ಕಾರದ ನೆರವು ಸಿಗದೆ ಅನ್ನದಾತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ಕುಟುಂಬಗಳಿಗೆ ಕೇವಲ 2,500 ರೂ. ನೀಡುತ್ತಿರುವುದು ಭಿಕ್ಷೆ ನೀಡಿದಂತಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ. ಮುಖ್ಯಮಂತ್ರಿಗಳಿಗೆ ರಿಯಲ್ ಎಸ್ಟೇಟ್ ಯೋಜನೆಗಳು ಹಾಗೂ ಟೌನ್‌ಶಿಪ್‌ಗಳ ಬಗ್ಗೆ ಇರುವ ಆಸಕ್ತಿ ರೈತರ ಬಗ್ಗೆ ಇಲ್ಲ ಎಂದು ಟೀಕಿಸಿದರು.
ಬಲವಂತದ ಸಾಲ ವಸೂಲಾತಿ ಮಾಡುವುದಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ಕವಡೆ ಕಾಸಿನ ಬೆಲೆಯಿಲ್ಲ. ಬ್ಯಾಂಕುಗಳು ರೈತರಿಗೆ ನಿರಂತರವಾಗಿ ನೋಟಿಸ್ ನೀಡುತ್ತಿವೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು 5 ಲಕ್ಷ ರೂ. ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಮ್ಮ ಸ್ನೇಹಿತ ಹಾಗೂ ತೆಲಂಗಾಣದ ಮುಖ್ಯಮಂತ್ರಿಯನ್ನು ಖುಷಿಪಡಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾರಾಯಣಪುರ ಜಲಾಶಯದಿಂದ ಪರೋಕ್ಷವಾಗಿ ನೀರು ಹರಿಸಲು ಮೌಖಿಕ ಆದೇಶ ನೀಡಿದ್ದಾರೆ ಎಂಬುದು ಅಕ್ಷಮ್ಯ ಅಪರಾಧ. ತಮ್ಮ ವೈಯಕ್ತಿಕ ವ್ಯಾಪಾರ ಹಿತಾಸಕ್ತಿಗಳಿಗಾಗಿ ರಾಜ್ಯದ ರೈತರಿಗೆ ನೀರಿಲ್ಲದಿದ್ದರೂ ಪಕ್ಕದ ರಾಜ್ಯಕ್ಕೆ ನೀರು ಹರಿಸುತ್ತಿರುವುದು ಬೇಜವಾಬ್ದಾರಿತನದ ಲಕ್ಷಣವಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕೇರಳಕ್ಕೆ ನೆರವು ನೀಡಲಾಗಿತ್ತು ಎಂದೂ ಅವರು ಟೀಕಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಸಾರಿಗೆ ಬಸ್‌ಗಳಿಗೆ ಡೀಸೆಲ್ ಪೂರೈಸಿದ ತೈಲ ಕಂಪನಿಗಳಿಗೆ ಸರ್ಕಾರ ಹಣ ಪಾವತಿಸದ ಕಾರಣ ಡಿಪೋಗಳಲ್ಲೇ ಬಸ್‌ಗಳು ನಿಲ್ಲುವಂತಾಗಿದೆ ಎಂದು ಆರೋಪಿಸಿದರು. ಆರ್ಥಿಕ ದಿವಾಳಿತನವನ್ನು ಮುಚ್ಚಿಹಾಕಲು ಅಬಕಾರಿ ಇಲಾಖೆಗೆ ಗುರಿ ನಿಗದಿಪಡಿಸಲಾಗಿದೆ. ಮತ್ತೊಂದೆಡೆ ಮಾದಕ ದ್ರವ್ಯಗಳ ಹಾವಳಿ ಅವ್ಯಾಹತವಾಗಿ ನಡೆಯುತ್ತಿದ್ದು, ಕರ್ನಾಟಕವು ‘ಉಡ್ತಾ ಪಂಜಾಬ್’ ಆಗುವ ಭೀತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ವಿಜುಗೌಡ ಪಾಟೀಲ, ಅರುಣ ಶಹಾಪೂರ, ಪರಶುರಾಮಸಿಂಗ್ ರಜಪೂತ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.