ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯಲ್ಲಿ ‘ಫಾರಂ-7’ ಮೂಲಕ ಸಲ್ಲಿಕೆಯಾಗಿರುವ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಈವರೆಗೆ ಕರಡು ಮತದಾರರ ಪಟ್ಟಿಯಿಂದ ಯಾರ ಹೆಸರನ್ನು ಕೈ ಬಿಟ್ಟಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ನಗರದ ಅರಮನೆ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಒಂದು ದಿನಕ್ಕೆ 10 ಫಾರಂ-7 ಕೊಡಬಹುದು. ಒಟ್ಟಾರೆ ಎಸ್‍ಐಆರ್ ಪ್ರಕ್ರಿಯೆಯಲ್ಲಿ 50 ಫಾರಂ-7 ಕೊಡಲು ಅವಕಾಶವಿದೆ. ಅದಕ್ಕೂ ಮೀರಿ ಅರ್ಜಿಗಳು ಬಂದರೆ ಮತದಾರರ ನೋಂದಣಾಧಿಕಾರಿ(ಇಆರ್‌ ಓ) ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದರು.

ಮತದಾರರ ಮಾಹಿತಿ ಮುದ್ರಿತವಾಗಿರುವ ಫಾರಂ-7 ಅನ್ನು ಸಲ್ಲಿಸಲು ಅವಕಾಶವಿದೆಯೆ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಎಫ್‍ಐಆರ್‍ಗಳು ದಾಖಲಾಗಿವೆ. ನ್ಯಾಯಾಂಗದ ಪರಿಗಣನೆಯಲ್ಲಿರುವ ವಿಚಾರದ ಬಗ್ಗೆ ಏನೂ ಹೇಳುವುದಿಲ್ಲ ಎಂದು ತಿಳಿಸಿದರು.

ಫಾರಂ-7 ಸಲ್ಲಿಕೆಯಾದಾಗ ಮತದಾರರ ನೋಂದಣಾಧಿಕಾರಿ(ಇಆರ್‌ ಓ) ಅದನ್ನು ಪರಿಶೀಲಿಸಿ, ಅರ್ಜಿದಾರ ಹಾಗೂ ಸಂಬಂಧಪಟ್ಟ ಮತದಾರರನ್ನು ಕರೆದು ವಿಚಾರಣೆ ಮಾಡಿ, ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಇಆರ್‌ ಓ ಸ್ವತಂತ್ರ ಅಧಿಕಾರಿಯಾಗಿರುವುದರಿಂದ ಅವರಿಗೆ ನಾವು ಯಾವುದೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ತಪ್ಪು ಮಾಹಿತಿ ನೀಡಿದರೆ ಅವರ ವಿರುದ್ಧವು ನಿಯಮಾವಳಿಗಳ ಪ್ರಕಾರವೇ ಕ್ರಮ ಕೈಗೊಳ್ಳಲು ಇಆರ್‌ ಓಗೆ ಅಧಿಕಾರವಿದೆ ಎಂದು ಅನ್ಬುಕುಮಾರ್ ತಿಳಿಸಿದರು.

22,05171 ಅರ್ಜಿಗಳು ಸಲ್ಲಿಕೆ: ಅ.4ರವರೆಗೆ ಫಾರಂ-6(ಹೊಸ ಮತದಾರರ ಸೇರ್ಪಡೆ) 9,10,732, ಫಾರಂ-6ಎ(ಸಾಗರೋತ್ತರ ಭಾರತೀಯ ಮತದಾರ)4,677, ಫಾರಂ-7(ಆಕ್ಷೇಪಣೆ, ಹೆಸರು ಸೇರ್ಪಡೆ/ತೆಗೆದು ಹಾಕಲು ಆಕ್ಷೇಪಣೆ ಸಲ್ಲಿಕೆ ಮಾಡುವುದು) 91,278, ಫಾರಂ-8(ಮತದಾರರ ಮಾಹಿತಿ ಸೇರ್ಪಡೆ, ತಿದ್ದುಪಡಿ) 11,98,484 ಸೇರಿದಂತೆ ಒಟ್ಟು 22,05,171 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.

43,82,313 ಮತದಾರರಿಗೆ ನೋಟಿಸ್ ನೀಡಲು ನಿರ್ಧರಿಸಿದ್ದು, ಈ ಪೈಕಿ 43,55,818 ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಇನ್ನೂ 26,495 ಮತದಾರರಿಗೆ ನೋಟಿಸ್ ನೀಡಬೇಕಿದೆ. ಅದರಂತೆ, 36,89,063 ಮತದಾರರ ವಿಚಾರಣೆ ನಡೆಸಲಾಗಿದ್ದು, ಇನ್ನೂ 6,66,755 ಮತದಾರರ ವಿಚಾರಣೆ ನಡೆಸಬೇಕಿದೆ. ಅ.22ರ ವೇಳೆಗೆ ಎಲ್ಲ ನೋಟಿಸ್‍ಗಳ ವಿಚಾರಣೆ ಪೂರ್ಣಗೊಳಿಸಿ, ಅ.27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ವಿಶೇಷ ಅಭಿಯಾನ: ಎಸ್‍ಐಆರ್ ಪ್ರಕ್ರಿಯೆ ಮುಗಿದ ಬಳಿಕ ಭಾರತೀಯ ಚುನಾವಣಾ ಆಯೋಗದ ವತಿಯಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಕುರಿತು ವಿಶೇಷ ಅಭಿಯಾನ ನಡೆಸಲಾಗುವುದು. ನಮ್ಮ ರಾಜ್ಯದ ಯಾವೊಬ್ಬ ಅರ್ಹ ಮತದಾರರನು ತನ್ನ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶ. ಈ ಸಂಬಂಧ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು.

 

ಫಾರಂ-7 ಸಲ್ಲಿಕೆಯಾಗಿರುವ ಜಿಲ್ಲಾವಾರು ಮಾಹಿತಿ

ಬೆಂಗಳೂರು ನಗರ-3,365, ಬಿಬಿಎಂಪಿ(ಉತ್ತರ)-1,842, ಬೆಳಗಾವಿ-4,002, ಮೈಸೂರು-3,090, ದಕ್ಷಿಣ ಕನ್ನಡ-5,534, ಬಿಬಿಎಂಪಿ(ದಕ್ಷಿಣ)-1,707, ಬಿಬಿಎಂಪಿ(ಕೇಂದ್ರ)-1,659, ಗುಲ್ಬರ್ಗ-1,067, ತುಮಕೂರು-4,568, ಬೀದರ್-5,953, ಧಾರವಾಡ-1,673, ರಾಯಚೂರು-3,349, ಶಿವಮೊಗ್ಗ-5,936, ಬಿಜಾಪುರ-3,808, ಉಡುಪಿ-1,759, ವಿಜಯನಗರ-2,407, ದಾವಣಗೆರೆ-4,070, ಹಾಸನ-2,918, ಮಂಡ್ಯ-2,881, ಬಾಗಲಕೋಟೆ-2,401, ಕೋಲಾರ-2,673, ಚಿತ್ರದುರ್ಗ-3,161, ಉತ್ತರ ಕನ್ನಡ-1,664, ರಾಮನಗರ-2,294, ಬಳ್ಳಾರಿ-2,087, ಕೊಪ್ಪಳ-2,548, ಯಾದಗಿರಿ-622, ಚಿಕ್ಕಮಗಳೂರು-2,632, ಬೆಂಗಳೂರು(ಗ್ರಾ)-1,485, ಹಾವೇರಿ-2,024, ಚಿಕ್ಕಬಳ್ಳಾಪುರ-1,820, ಗದಗ-1,228, ಕೊಡಗು-1,178, ಚಾಮರಾಜನಗರ-1,873 ಸೇರಿದಂತೆ ಒಟ್ಟು 91,278 ಫಾರಂ-7 ಸಲ್ಲಿಕೆಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor