ಚಿಕ್ಕಮಗಳೂರು : ರಾಜ್ಯದಲ್ಲಿ ಎಸ್‍ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಫಾರಂ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ತೀವ್ರಗೊಂಡಿವೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ 243 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಬಿಜೆಪಿ ಮುಖಂಡರು ಅರ್ಜಿ ಸಲ್ಲಿಸಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಮಧ್ಯೆ ಜಿಲ್ಲೆಯ ಕಡೂರು ಪಟ್ಟಣದಲ್ಲೂ 30ಕ್ಕೂ ಹೆಚ್ಚು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ಮುಖಂಡರು ಫಾರಂ-7 ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಈ ಪ್ರಕರಣ ಸಂಬಂಧ ನಾಗರಿಕ ಮತ ಕಾವಲು ಸಮಿತಿ ಮುಖಂಡ ಕಡೂರು ಮುನ್ನಾ ಅವರು ʼವಾರ್ತಾಭಾರತಿʼಗೆ ಮಾಹಿತಿ ನೀಡಿದ್ದು, ʼಅ.3ರಂದು ಈ ಅಕ್ರಮದ ವಿಚಾರ ನಮ್ಮ ಗಮನಕ್ಕೆ ಬಂತು. ತಕ್ಷಣವೇ ಖಾತ್ರಿಯಾಗಿದೆ. ಕಡೂರು ಪಟ್ಟಣದ ಮುದಿಯಪ್ಪ ಬಡಾವಣೆಯ ವಾರ್ಡ್ ಸಂಖ್ಯೆ 23ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಅಲ್ಲಿನ ಜನರನ್ನು ಮಾತಾಡಿಸಿದಾಗ, ಅವರು ಕಳೆದ 30ರಿಂದ 35 ವರ್ಷಗಳಿಂದ ಅದೇ ಪ್ರದೇಶದಲ್ಲೇ ನಿರಂತರವಾಗಿ ವಾಸವಾಗಿದ್ದಾರೆ ಮತ್ತು ಎಲ್ಲಿಗೂ ಸ್ಥಳಾಂತರಗೊಂಡಿಲ್ಲ ಎಂಬುದು ಸ್ಪಷ್ಟವಾಯಿತು. ಬಿಎಲ್‍ಓ ನೋಟಿಸ್ ನೀಡಿದ ಮೇಲೆಯೇ ತಮ್ಮ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲು ಯತ್ನಿಸಿರುವುದು ಅವರಿಗೆ ತಿಳಿದುಬಂದಿದೆ. ಉದ್ದೇಶಪೂರ್ವಕವಾಗಿ ಒಂದೇ ಸಮುದಾಯದವರನ್ನು ಟಾರ್ಗೆಟ್ ಮಾಡಿ ಹೆಸರು ಡಿಲೀಟ್ ಮಾಡಲು ಫಾರಂ-7 ದುರ್ಬಳಕೆ ಮಾಡಲಾಗಿದೆʼ ಎಂದು ಆರೋಪಿಸಿದರು.

ʼಒಮ್ಮೆ ಮತದಾರರ ಹೆಸರು ಡಿಲೀಟ್ ಆದರೆ, ಅದನ್ನು ಸರಿಪಡಿಸುವುದು ಅತ್ಯಂತ ಕಷ್ಟಕರ. ಆದ್ದರಿಂದ ನಾವು ತಕ್ಷಣವೇ ಜಿಲ್ಲಾಧಿಕಾರಿ ಗಮನಕ್ಕೆ ತಂದು ಮನವಿ ಸಲ್ಲಿಸಿದೆವು. ಜಿಲ್ಲಾಧಿಕಾರಿಗಳು ನಮ್ಮ ಎದುರಲ್ಲೇ ತಾಲೂಕಿನ ತಹಶೀಲ್ದಾರರಿಗೆ ಫೋನ್ ಮಾಡಿ, ತಕ್ಷಣವೇ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ಹಾಗೂ ಸರ್ವೇ ನಡೆಸುವಂತೆ ಸೂಚಿಸಿದರುʼ ಎಂದು ತಿಳಿಸಿದರು.

ʼಈ ವಿಚಾರವನ್ನು ಕಡೂರು ತಾಲೂಕು ಕಚೇರಿಯ ಚುನಾವಣಾಧಿಕಾರಿಗಳ ಗಮನ ಸೆಳೆದಿದ್ದು, ಸಾರ್ವಜನಿಕರು ಫಾರಂ-7 ಸಲ್ಲಿಸಿದರೂ ಅದನ್ನು ಪರಿಶೀಲಿಸುವುದು ನಮ್ಮ ಕರ್ತವ್ಯ. ಸ್ಥಳ ಪರಿಶೀಲನೆ ನಡೆಸಿ ಅವರು ಇಲ್ಲೇ ವಾಸವಿದ್ದರೆ ಯಾವುದೇ ಕಾರಣಕ್ಕೂ ಹೆಸರು ಡಿಲೀಟ್ ಮಾಡುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆʼ ಎಂದು ಮುನ್ನಾ ಹೇಳಿದರು.

ʼತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ನಾವು ಪೊಲೀಸ್ ಸಬ್ ಇನ್ಸ್‌ ಪೆಕ್ಟರ್ ಹಾಗೂ ಎಸ್ಪಿಯವರನ್ನು ಭೇಟಿ ಮಾಡಿ ಒತ್ತಾಯಿಸಿದೆವು. ಈ ನಡುವೆ ಸಬ್ ಇನ್ಸ್‌ ಪೆಕ್ಟರ್ ಅವರು ಆರೋಪ ಎದುರಿಸುತ್ತಿರುವ ಮಾಜಿ ಬಿಜೆಪಿ ಕೌನ್ಸಿಲರ್ ಮೋಹನ್ ಕುಮಾರ್ ಅವರಿಗೆ ಫೋನ್ ಮಾಡಿ ವಿಚಾರಿಸಿದಾಗ, ನನಗೆ ಪಕ್ಷದಿಂದ ಫಾರಂಗಳನ್ನು ತಂದುಕೊಟ್ಟಿದ್ದರು. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲದೆ ನಾನು ಕೇವಲ ಸಹಿ ಮಾಡಿಕೊಟ್ಟಿದ್ದೆ ಎಂದು ಸಬೂಬು ನೀಡಿದ್ದಾರೆ. ಮೋಹನ್ ಕುಮಾರ್ ಜೊತೆಗೆ ರಾಜೇಶ್ವರಿ ಎಂಬುವವರ ಹೆಸರಿನಲ್ಲೂ ಫಾರಂ-7 ಸಲ್ಲಿಕೆಯಾಗಿದ್ದು, ಇಬ್ಬರೂ ಬಿಜೆಪಿ ಹಿನ್ನೆಲೆಯವರಾಗಿದ್ದಾರೆʼ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎದ್ದೇಳು ಕರ್ನಾಟಕ ಸಂಘಟನೆ ಮುಖಂಡರು ಜಿಲ್ಲಾಡಳಿತಕ್ಕೆ ಅಧಿಕೃತ ದೂರು ನೀಡಿದೆ. ಫಾರಂ7ರಲ್ಲಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಅರ್ಜಿ ಸಲ್ಲಿಸಿರುವ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮಕ್ಕೆ ಮುಖಂಡರು ಒತ್ತಾಯಿಸಿ, ಅರ್ಹ ಮತದಾರರ ಹಕ್ಕನ್ನು ಕಸಿಯುವ ಇಂತಹ ಕೃತ್ಯಗಳ ವಿರುದ್ಧ ಪಾರದರ್ಶಕ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.


"ನಮ್ಮ ವಾರ್ಡ್‍ನ 30 ಜನರಿಗೆ ಹೆಸರು ತೆಗೆಯುವ ಸಂಬಂಧ ನೋಟಿಸ್ ನೀಡಲಾಗಿದೆ. ಅಳಿಸಲು ಯತ್ನಿಸಿರುವ 30 ಮತದಾರರ ಪೈಕಿ 29 ಜನರು ಮುಸ್ಲಿಂ ಸಮುದಾಯದವರಾಗಿದ್ದರೆ, ಒಬ್ಬರು ಹಿಂದೂ ಸಮುದಾಯದವರಾಗಿದ್ದಾರೆ. ಕೇವಲ ಚುನಾವಣೆಯಲ್ಲಿ ಗೆಲ್ಲಲು ಇಂತಹ ಅಕ್ರಮಕ್ಕೆ ಮುಂದಾಗಿರುವ ಮಾಜಿ ಕೌನ್ಸಿಲರ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕು"

- ಅಣ್ಣಾನಾಯಕ್, ಕಾಂಗ್ರೆಸ್ ಮುಖಂಡ


ʼನಾವು ಕೂಲಿ ಮಾಡಿ ಬದುಕುವ ಜನ, ಕಳೆದ 25-30 ವರ್ಷಗಳಿಂದ ಇಲ್ಲೇ ಇದ್ದೇವೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಸ್ವಾರ್ಥಕ್ಕಾಗಿ ಬಿಜೆಪಿಯವರು ನಮ್ಮ ಹೆಸರುಗಳನ್ನು ತೆಗೆಯಲು ಹುನ್ನಾರ ನಡೆಸಿದ್ದಾರೆ. ನಮ್ಮ ಬಳಿ ಎಲ್ಲಾ ಅಧಿಕೃತ ದಾಖಲೆಗಳಿದ್ದು, ಕಾನೂನು ಹೋರಾಟ ನಡೆಸುತ್ತೇವೆʼ ಎಂದು ಸಂತ್ರಸ್ತ ಮತದಾರ ಹೇಳಿದ್ದಾರೆ.

ತಾಲೂಕು ಕಚೇರಿ ಎದುರು ಧರಣಿ :

ʼಕಡೂರು ಪಟ್ಟಣ ಮುದಿಯಪ್ಪ ಬಡಾವಣೆಯಲ್ಲಿ 30 ಅರ್ಹ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಬಿಜೆಪಿ ಮುಖಂಡರು ಫಾರಂ 7ರಲ್ಲಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕಡೂರು ತಾಲೂಕು ಕಚೇರಿ ಎದುರು ಧರಣಿ ನಡೆಸಿ ತಹಶೀಲ್ದಾರ್ ಅವರಿಗೆ ಕ್ರಮಕ್ಕೆ ಮನವಿ ಸಲ್ಲಿಸಲಾಗಿದೆ. ಅರ್ಜಿ ಪರಿಶೀಲಿಸಲಾಗುವುದು, ತಪ್ಪು ಮಾಹಿತಿ ನೀಡಿದ್ದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆʼ ಎಂದು ಕಡೂರು ಮುನ್ನ ʼವಾರ್ತಾಭಾರತಿʼಗೆ ಮಾಹಿತಿ ನೀಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor