ಸದ್ಯದಲ್ಲೇ ಧರ್ಮಸ್ಥಳಕ್ಕೆ ಎಸ್‍ಐಟಿ ಭೇಟಿ : ಗೃಹ ಸಚಿವ ಜಿ.ಪರಮೇಶ್ವರ್
ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ಧರ್ಮಸ್ಥಳ ಪ್ರಕರಣ ಸಂಬಂಧ ಸದ್ಯದಲ್ಲೇ ಎಸ್‍ಐಟಿ ಧರ್ಮಸ್ಥಳಕ್ಕೆ ತೆರಳಿ ಸಮಗ್ರವಾದ ತನಿಖೆಯನ್ನು ಆರಂಭಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ತಂಡಕ್ಕೆ ಧರ್ಮಸ್ಥಳಕ್ಕೆ ಹೋಗಿ ತನಿಖಾ ಪ್ರಕ್ರಿಯೆ ಶುರು ಮಾಡುವಂತೆ ಸೂಚಿಸಿದ್ದೇವೆ. ಸದ್ಯದಲ್ಲೇ ಎಸ್‍ಐಟಿ ತಂಡ ಅಲ್ಲಿಗೆ ಹೋಗಲಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸರಿಗೂ ಸೂಚನೆ ನೀಡಿದ್ದೇವೆ ಎಂದರು.
ಎಸ್‍ಐಟಿ ತಂಡದಿಂದ ಯಾವ ಅಧಿಕಾರಿಯೂ ಹೊರಗುಳಿಯುವುದಿಲ್ಲ. ಹೊರಗೆ ಉಳಿಯುವುದಾದರೆ ಅಧಿಕಾರಿಗಳು ನಮಗೆ ತಿಳಿಸಲಿ. ಆ ನಂತರ ಅದರ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.
ಯಾಕೆ ಆಕ್ಷೇಪ? :
ರಾಜಕೀಯ ಉದ್ದೇಶವಿದೆ ಎಂದು ಯಾಕೆ ಹೇಳುತ್ತಾರೆ. ಎಸ್‍ಐಟಿ ತನಿಖೆಗೆ ಬಿಜೆಪಿಯವರಿಂದ ಯಾಕೆ ಆಕ್ಷೇಪ?. ಈಗಿನಿಂದಲೇ ಏನೇನೋ ಫ್ರೇಮ್ ಮಾಡುತ್ತಿದ್ದಾರೆ. ಎಸ್‍ಐಟಿ ತನಿಖೆಗೆ ಯಾಕೆ ಅವರ ವಿರೋಧ. ಇದನ್ನು ನೋಡಿದರೆ ಅವರ ಮನಸ್ಸಲ್ಲಿ ಏನೋ ಇರಬಹುದು" ಎಂದು ಹೇಳಿದರು.
ಮುಂದಿನ ತೀರ್ಮಾನ ಸಿಎಂ, ಡಿಸಿಎಂಗೆ ಬಿಟ್ಟಿದ್ದು :
ನಿಗಮ ಮಂಡಳಿ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ನಾನು ನಿಗಮ ಮಂಡಳಿ ನೇಮಕಕ್ಕೆ ಸದಸ್ಯರ ಪಟ್ಟಿ ಕೊಟ್ಟು 6 ತಿಂಗಳಾಗಿದೆ. ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಪಟ್ಟಿ ಪ್ರಕಟ ಮಾಡಲಾಗುತ್ತದೆ. ಪಟ್ಟಿ ಕೊಡಲು 11 ಜನರ ಸಮಿತಿ ಮಾಡಿದ್ದರು. ನಾವು ಪಟ್ಟಿ ತಯಾರಿಸಿ ಕೊಟ್ಟಿದ್ದೇವೆ. ನಮ್ಮ ಪಟ್ಟಿಗೆ ಸಿಎಂ, ಡಿಸಿಎಂ ಒಪ್ಪಿದ್ದಾರೆಯೇ ಅನ್ನುವುದು ಗೊತ್ತಿಲ್ಲ. ಮುಂದಿನ ತೀರ್ಮಾನ ಸಿಎಂ, ಡಿಸಿಎಂಗೆ ಬಿಟ್ಟಿದ್ದು. ನಾವು ಅದನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.