×
Ad

ಕೆಆರ್‌ಎಸ್‌ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್, ಈಗ ಅದನ್ನು ಹೇಳಲು ಯಾರಿಗೂ ಧೈರ್ಯ ಇಲ್ಲ : ಎಚ್.ಸಿ.ಮಹದೇವಪ್ಪ

Update: 2025-08-03 18:19 IST

ಡಾ.ಎಚ್.ಸಿ.ಮಹದೇವಪ್ಪ

ಮಂಡ್ಯ : ʼಕೆಆರ್‌ಎಸ್‌ ಅಣೆಕಟ್ಟು ಕಟ್ಟುವುದಕ್ಕೆ ಮೊದಲು ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್. ಆದರೆ ಈಗ ಅದನ್ನು ಹೇಳಲು ಯಾರಿಗೂ ಧೈರ್ಯ ಇಲ್ಲʼ ಎಂದು ಸಮಾಜ‌ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ರವಿವಾರ ನೂತನ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಆರ್‌ಎಸ್‌, ಕನ್ನಂಬಾಡಿ ಕಟ್ಟುವುದಕ್ಕೆ ಟಿಪ್ಪು ಸುಲ್ತಾನ್ ಮೊದಲು ಅಡಿಗಲ್ಲು ಹಾಕಿದರು. ಕೆಆರ್‌ಎಸ್‌ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಅದನ್ನು ಕಾಣಬಹುದು. ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾದ್ಯವಿಲ್ಲ. ಒಂದು ಕಡೆ ಟಿಪ್ಪು ಮಸೀದಿ ಇದೆ. ಪಕ್ಕದಲ್ಲೇ ಶ್ರೀರಂಗನಾಥಸ್ವಾಮಿ ದೇವಸ್ಥಾನ ಇದೆ ಎಂದು ನುಡಿದರು.

ಟಿಪ್ಪು ಸುಲ್ತಾನ್ ಆ ಕಾಲದಲ್ಲೇ ದೇವದಾಸಿ ಪದ್ಧತಿ ರದ್ದು ಮಾಡಿದರು. ಆರ್ಥಿಕವಾಗಿ ಹಿಂದುಳಿದವರು ಮತ್ತು ಶೋಷಣೆಗೆ ಒಳಗಾದ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ದೂಡುತ್ತಿದ್ದರು. ಆದರೆ ಇದು ಸರಿಯಿಲ್ಲ ಎಂದು ಆ ಕಾಲದಲ್ಲೇ ದೇವದಾಸಿ ಪದ್ಧತಿಯನ್ನು ಅವರು ರದ್ದು ಮಾಡಿದ್ದರು ಎಂದು ತಿಳಿಸಿದರು.

ಟಿಪ್ಪು ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ. ಭಾರತಕ್ಕೆ ರೇಷ್ಮೆ ತಂದಿದ್ದೇ ಟಿಪ್ಪು ಸುಲ್ತಾನ್. ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೊಡ್ಡ ಸ್ವಾತಂತ್ರ್ಯ ಸೇನಾನಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮೈಸೂರಿನ ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News