ದೇಶದಲ್ಲಿ ಮೋದಿ ಎದುರು ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ : ಎಚ್.ಡಿ.ದೇವೇಗೌಡ
ಬೆಂಗಳೂರು : ‘ಬಿಜೆಪಿ, ಕಾಂಗ್ರೆಸ್ ಬಿಟ್ಟರೆ ಉಳಿದ ಎಲ್ಲ ಪಕ್ಷಗಳು ಪ್ರಾದೇಶಿಕ ಪಕ್ಷಗಳು. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿವೆ. ಮೋದಿ ದೊಡ್ಡ ನಾಯಕರು, ಪ್ರಧಾನಿಯಾಗಿ, ವಿಶ್ವನಾಯಕರಾಗಿ ಅವರು ಬೆಳೆದಿದ್ದಾರೆ. ಅವರಿಗೆ ಎದುರು ನಿಲ್ಲುವ ಮತ್ತೊಬ್ಬ ನಾಯಕ ಇಡೀ ದೇಶದಲ್ಲಿ ಯಾರೂ ಇಲ್ಲ’ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ರವಿವಾರ ಇಲ್ಲಿನ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ‘ಜನರೊಂದಿಗೆ ಜನತಾದಳ’ ಎಂಬ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟನೆಗಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಪ್ರವಾಸ ಹಾಗೂ ‘ಮಿಸ್ ಕಾಲ್’ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೋದಿ ಮಟ್ಟದ ನಾಯಕ ಯಾವ ಪಕ್ಷದಲ್ಲಿಯೂ ಇಲ್ಲ. ಈ ಕಾರಣಕ್ಕಾಗಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿ ಕೊಂಡಿದ್ದೇವೆ. ನಾವು ಪ್ರಧಾನಿ ಜತೆ ಕೈ ಜೋಡಿಸಿದ್ದೇವೆ. ಅವರ ವಿಶ್ವಾಸ ಗಳಿಸಿದ್ದೇವೆ. ಕುಮಾರಸ್ವಾಮಿಯನ್ನು ಸಚಿವರನ್ನಾಗಿ ಮಾಡಿ ಎಂದು ನಾನು ಕೇಳಿದವನಲ್ಲ. ಆದರೆ, ಮೋದಿ ಅವರನ್ನು ತಮ್ಮ ಸಂಪುಟ ದಲ್ಲಿ ಸಚಿವರನ್ನಾಗಿ ಮಾಡಿ ಉತ್ತಮ ಖಾತೆಗಳನ್ನು ನೀಡಿದ್ದಾರೆ ಎಂದು ದೇವೇಗೌಡ ಹೇಳಿದರು.
ಎಚ್‍ಡಿಕೆ, ಜನಪ್ರಿಯತೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ :
‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಅಪಪ್ರಚಾರದಲ್ಲಿ ಯಾರೂ ಗೆಲುವು ಕಂಡಿಲ್ಲ, ಕಾಣುವುದೂ ಇಲ್ಲ’ ಎಂದು ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಕುಮಾರಸ್ವಾಮಿಗೆ ಕೆಲವರು ಬಹಳ ಯಾತನೆ ಕೊಡುತ್ತಿದ್ದಾರೆ. ಸುಖಾ ಸುಮ್ಮನೆ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ಆರೋಪಗಳನ್ನು ಸಾಬೀತು ಮಾಡಲು ಅವರಿಂದ ಆಗಿಲ್ಲ, ಆಗುವುದೂ ಇಲ್ಲ. ಕೇವಲ ಆರೋಪ ಮಾಡಿಕೊಂಡೇ ಅವರೆಲ್ಲ ಸೋಲುತ್ತಿದ್ದಾರೆ ಎಂದು ಹೇಳಿದರು.
ಕೆಲವರಿಗೆ, ಕುಮಾರಸ್ವಾಮಿಯವರ ಏಳ್ಗೆ, ಅವರ ವ್ಯಕ್ತಿತ್ವ, ಜನಪ್ರಿಯತೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ರೈತರ ಸಾಲಮನ್ನಾ ಮಾಡಿದಂತೆ ದೇಶದಲ್ಲಿ ಯಾರೂ ಸಾಲಮನ್ನಾ ಮಾಡಿದ್ದನ್ನು ನಾನು ನೋಡಿಲ್ಲ ಎಂದ ಅವರು, ಸೋಲು ಗೆಲುವಿಗೆ ಬುನಾದಿ ಆಗುತ್ತದೆ ಎಂಬುದನ್ನು ಮರೆಯಬಾರದು. ಸೋಲಾಯಿತು ಎಂದು ಎದೆಗುಂದಬಾರದು ಎಂದು ತಿಳಿಸಿದರು.
ಮತ್ತೆ ಪುಟಿದೇಳುತ್ತೇವೆ: ಚನ್ನಪಟ್ಟಣ ಉಪಚುನಾವಣೆಯಲ್ಲಿ 32 ಕಡೆ ಬಹಿರಂಗ ಸಭೆ ಮಾಡಿದ್ದೇನೆ. ಆದರೆ ಜನರು ಏಕೆ ನಮ್ಮನ್ನು ಕೈ ಬಿಟ್ಟರು, ಹೇಗೆ ಸೋತೆವು? ಎಂದು ನಾನು ಹೇಳಲು ಹೋಗುವುದಿಲ್ಲ. ಈ ಒಂದು ಸೋಲು ನಮ್ಮನ್ನು ಎದೆಗುಂದಿಸಲು ಸಾಧ್ಯವಿಲ್ಲ. ಎದೆಗುಂದು ಪ್ರಶ್ನೆಯೂ ಇಲ್ಲ. ಮತ್ತೆ ಪುಟಿದೆದ್ದು ಬರುತ್ತೇವೆ. ಆ ಶಕ್ತಿ ನಮ್ಮ ಪಕ್ಷಕ್ಕಿದೆ ಎಂದು ಅವರು ನುಡಿದರು.
ನಮ್ಮನ್ನು ಮುಗಿಸಲು ಸಾಧ್ಯವಿಲ್ಲ: ಮೊರಾರ್ಜಿ ದೇಸಾಯಿ ನನಗೆ ಪಕ್ಷವನ್ನು ಕೊಟ್ಟರು. ಜನತಾದಳ ಎಷ್ಟೇ ಭಾಗ ಆದರೂ ಈ ಪಕ್ಷ ಇನ್ನೂ ಉಳಿದಿದೆ. ನಾನು ಹೋದ ಮೇಲೆಯೂ ಪಕ್ಷ ಉಳಿಯುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ, ಈ ಪಕ್ಷವನ್ನು ಮುಗಿಸುತ್ತೇನೆ ಎನ್ನುವ ಮಹಾನುಭಾವ ಎಂದಿಗೂ ಹುಟ್ಟಲು ಸಾಧ್ಯವಿಲ್ಲ ಎಂದು ದೇವೇಗೌಡ ಹೇಳಿದರು.