×
Ad

ಕೊಡಗಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ನೆಲಕ್ಕುರುಳಿದ ನೂರಾರು ವಿದ್ಯುತ್ ಕಂಬಗಳು

Update: 2025-05-25 19:45 IST

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ, ಮರಗಳು ಬಿದ್ದ ಪರಿಣಾಮ ಹಲವು ಮನೆಗಳು ಹಾನಿಗೀಡಾಗಿವೆ.

ಜಿಲ್ಲೆಯಲ್ಲಿ ಗಂಟೆ ಗಂಟೆಗೂ ಗಾಳಿ ಮಳೆಯ ಆರ್ಭಟ ಜೋರಾಗುತ್ತಿದೆ. ತಲಕಾವೇರಿ, ಭಾಗಮಂಡಲ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಭರ್ತಿಯಾಗಿ ನೀರು ರಸ್ತೆಗಳನ್ನು ಆವರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಮೇ ತಿಂಗಳಿನಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿರುವುದು ಇದೇ ಮೊದಲು. ನಾಪೋಕ್ಲು ಮತ್ತು ಮಡಿಕೇರಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. 

ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ಗಾಳಿ ಸಹಿತ ವ್ಯಾಪಕ ಮಳೆಯಾಗುತ್ತಿದ್ದು, ಹತ್ತಾರು ಮರಗಳು ಹಾಗೂ ನೂರಾರು ವಿದ್ಯುತ್ ಕಂಬಗಳು ಬಿದ್ದಿವೆ. ಗ್ರಾಮೀಣ ಭಾಗದಲ್ಲಿ ನದಿ ತೊರೆಗಳು ತುಂಬಿ ಹರಿಯುತ್ತಿವೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಕಷ್ಟವಾಗಿದೆ. ಗಾಳಿ, ಮಹಾಮಳೆ ಹೀಗೇ ಮುಂದುವರಿದರೆ ಎತ್ತರ ಮತ್ತು ತಗ್ಗು ಪ್ರದೇಶಗಳಲ್ಲಿ ಅಪಾಯ ಎದುರಾಗಬಹುದೆನ್ನುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.

ಸೆಸ್ಕ್ ಮಡಿಕೇರಿ ವಿಭಾಗದಲ್ಲಿ ಗಾಳಿ ಮಳೆಗೆ 200ಕ್ಕೂ ಅಧಿಕ ವಿದ್ಯುತ್ ಕಂಬಗಳು ಬಿದ್ದಿವೆ. ಪವರ್ ಮೆನ್ ಗಳು, ಗ್ಯಾಂಗ್ ಮೆನ್ ಗಳು ಹಾಗೂ ಶಾಖಾಧಿಕಾರಿಗಳು ಸಾರ್ವಜನಿಕರ ಸಹಕಾರದಿಂದ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ರಾಹಕರಿಗೆ ವಿದ್ಯುತ್ ಮರು ಸಂಪರ್ಕ ಒದಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಂ.ರಾಮಚಂದ್ರ ಅವರು ತಿಳಿಸಿದ್ದಾರೆ.

ಗಾಳಿ ಮಳೆಯಿಂದ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ ಕೆ.ಕೆ.ಮಜೀದ ಎಂಬುವವರ ವಾಸದ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕುಶಾಲನಗರ ತಾಲ್ಲೂಕಿನ ವಾಲ್ನೂರು- ತ್ಯಾಗತ್ತೂರು ಗ್ರಾಮದ ನಿವಾಸಿ ಬೀರನ್ ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ವಿರಾಜಪೇಟೆ ಪಟ್ಟಣದ ಮುಖ್ಯ ರಸ್ತೆಗಳು ಜಲಾವೃತಗೊಂಡು ವ್ಯಾಪಾರ ವಹಿವಾಟು, ಜನಜೀವನ ಅಸ್ತವ್ಯಸ್ತಗೊಂಡಿತು. ಮಡಿಕೇರಿ ನಗರದಲ್ಲೂ ರಸ್ತೆಗಳಲ್ಲಿ ನೀರು ತುಂಬಿ ತೊಂದರೆ ಎದುರಾಯಿತು. ಕಾವೇರಿ ಹಾಲ್ ಗೆ ನೀರು ನುಗ್ಗಿ ವಿವಾಹ ಸಮಾರಂಭಕ್ಕೆ ಅಡಚಣೆ ಉಂಟಾಯಿತು.

ಮಡಿಕೇರಿ- ಸಂಪಾಜೆ ಹೆದ್ದಾರಿಯ ಕಾಟಕೇರಿ ಬಳಿ ಬೃಹತ್ ಮರ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಂತರ ತೆರವು ಕಾರ್ಯಾಚರಣೆ ನಡೆಯಿತು. ಸಿದ್ದಾಪುರ, ಚೆಟ್ಟಳ್ಳಿ, ಸೋಮವಾರಪೇಟೆ, ಕುಶಾಲನರ, ನಾಪೋಕ್ಲು, ಬೆಟ್ಟಗೇರಿ ಭಾಗದಲ್ಲೂ ರಸ್ತೆಗೆ ಮರಗಳು ಬಿದ್ದಿವೆ.

ಕಳೆದ 24 ಗಂಟೆಗಳಲ್ಲಿ ತಲಕಾವೇರಿ- ಭಾಗಮಂಡಲದಲ್ಲಿ ದಾಖಲೆಯ 8 ಇಂಚು ಮಳೆಯಾಗಿದೆ. ಹುದಿಕೇರಿ 125 ಮಿ.ಮೀ, ಶಾಂತಳ್ಳಿ 100 ಮಿ.ಮೀ, ಪೊನ್ನಂಪೇಟೆ 93 ಮಿ.ಮೀ, ನಾಪೋಕ್ಲು 72 ಮಿ.ಮೀ, ಮಡಿಕೇರಿ ತಾಲ್ಲೂಕು ಸರಾಸರಿ 85.67 ಮಿ.ಮೀ, ವಿರಾಜಪೇಟೆ 109.6 ಮಿ.ಮೀ, ಸೋಮವಾರಪೇಟೆ 55 ಮಿ.ಮೀ, ಪೊನ್ನಂಪೇಟೆ ತಾಲ್ಲೂಕು 81.44 ಮಿ.ಮೀ ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿ 38.5 ಮಿ.ಮೀ ಮಳೆಯಾಗಿದೆ.

ಮುಂದಿನ ಮೂರು ದಿನಗಳ ಕಾಲ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 26 ರಿಂದ ಆರಂಭಗೊಳ್ಳಬೇಕಿದ್ದ ಜಿಲ್ಲೆಯ ಖಾಸಗಿ ಶಾಲೆಗಳು ಮಳೆಯ ಕಾರಣದಿಂದ ಮೇ 29ಕ್ಕೆ ಆರಂಭಗೊಳ್ಳಿವೆ. 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News