×
Ad

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿ ರಿಟ್ ಅರ್ಜಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2025-09-20 18:35 IST

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ರಿಟ್ ಅರ್ಜಿ ಸಂಬಂದ ರಾಜ್ಯ ಸರಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಸಮೀಕ್ಷೆಗೆ ಇಂಧನ ಇಲಾಖೆಯ ವಿದ್ಯುತ್ ಮೀಟರ್ ರೀಡರ್‌ಗಳ ಬಳಕೆ ಪ್ರಶ್ನಿಸಿ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ ಸೆಕ್ಷನ್‌ 9ಕ್ಕೆ ಮಾಡಿರುವ ತಿದ್ದುಪಡಿಯನ್ನು ಸಂವಿಧಾನಬಾಹಿರವೆಂದು ಘೋಷಿಸಲು ಕೋರಿ ಹಾವೇರಿಯ ಹಿರೇಕೆರೂರಿನ ಲಿಂಗರಾಜ ಚಪ್ಪರದಳ್ಳಿ ಸಲ್ಲಿಸಿರುವ ರಿಟ್‌ ಅರ್ಜಿ ಕುರಿತು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ನವೆಂಬರ್‌ 4ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಗಂಗಾಧರ ಗುರುಮಠ ವಾದ ಮಂಡಿಸಿ, ಸಂವಿಧಾನ, ಕಾಯ್ದೆ ಮತ್ತು ಸುಪ್ರೀಂಕೋರ್ಟ್‌ ರೂಪಿಸಿರುವ ಕಾನೂನಿನ ನೆಲೆಯಲ್ಲಿ ನೋಡುವುದಾದರೆ ಜಾತಿ ಗಣತಿ ನಡೆಸಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಯು ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದು, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವುದಿಲ್ಲ. ಈ ಹಿಂದೆಯೂ ಜಾತಿ ಗಣತಿ ನಡೆಸಲಾಗಿದ್ದು, ಅದಕ್ಕೆ 180 ಕೋಟಿ ರೂ. ವ್ಯಯಿಸಲಾಗಿದೆ. ಈಗ ಜಾತಿ ಸಮೀಕ್ಷೆಗಾಗಿ 450 ಕೋಟಿ ವಿನಿಯೋಗಿಸಲಾಗುತ್ತಿದೆ. ಸಮೀಕ್ಷೆ ನಡೆಸಲು ರಾಜ್ಯ ಸರಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧಿಕಾರವಿಲ್ಲ ಎಂದರು.

ಆಗ ನ್ಯಾಯಪೀಠ, ಆಗಸ್ಟ್‌ 13ರಂದು ಸರಕಾರ ಅಧಿಸೂಚನೆ ಹೊರಡಿಸಿದೆ. ಗುರುವಾರ ಅರ್ಜಿ ಸಲ್ಲಿಸಲಾಗಿದ್ದು, ಶುಕ್ರವಾರ ವಿಚಾರಣೆಗೆ ಬಂದಿದೆ. ಸಮೀಕ್ಷೆಯು ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುತ್ತದೆ. ಸಮೀಕ್ಷೆಯಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ನುಡಿಯಿತು.

ಹಿಂದುಳಿದ ವರ್ಗಗಳ ಆಯೋಗದ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ವಾದ ಮಂಡಿಸಿ, ಅರ್ಜಿದಾರರು ಯಾವ ರೀತಿ ಬಾದಿತರಾಗಿದ್ದಾರೆ, ಅವರ ಹಕ್ಕುಗಳೇನು, ಅವರ ಯಾವ ಹಕ್ಕಗಳನ್ನು ಕಸಿಯಲಾಗಿದೆ ಎಂಬುದನ್ನು ತಿಳಿಸಿಲ್ಲ. ನಿರ್ದಿಷ್ಟವಾಗಿ ಹೊಸ ಜಾತಿ ಸೃಷ್ಟಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಅರ್ಜಿದಾರರ ಜಾತಿ ಯಾವುದು, ಇದರಿಂದ ಅವರು ಹೇಗೆ ಬಾದಿತರಾಗಿದ್ದಾರೆ ತಿಳಿದಿಲ್ಲ. ಊಹೆಯೊಂದಿಗೆ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ಎರಡು ದಿನಗಳ ಹಿಂದೆ ಸಮೀಕ್ಷೆ ಆರಂಭವಾಗಿದೆ. ಈ ಹಿಂದೆ ನಡೆಸಿದ್ದ ಜಾತಿ ಸಮೀಕ್ಷೆಯನ್ನು ಪ್ರಶ್ನಿಸಿದ್ದು, ಅದರಲ್ಲೂ ಮಧ್ಯಂತರ ತಡೆ ಇರಲಿಲ್ಲ. ಈ ಅರ್ಜಿಯ ಊರ್ಜಿತತ್ವದ ಬಗ್ಗೆಯೇ ನಮಗೆ ಆಕ್ಷೇಪವಿದೆ ಎಂದರು.

ರಾಜ್ಯ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು, ಸಮೀಕ್ಷೆಗೆ ಸಂಬಂಧಿಸಿದಂತೆ ಪಿಐಎಲ್‌ ರೂಪದಲ್ಲಿ ವಿಭಾಗೀಯ ನ್ಯಾಯಪೀಠದ ಮುಂದೆ ಅರ್ಜಿಗಳು ವಿಚಾರಣೆಯಾಗಿದ್ದು, ಪ್ರತಿವಾದಿಗಳಿಗೆ ನೋಟಿಸ್‌ ಜಾರಿಯಾಗಿದೆ. ಇದೇ ರೀತಿಯ ಕೋರಿಕೆ ಆ ಅರ್ಜಿಗಳಲ್ಲೂ ಇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News