×
Ad

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿದ ಅರ್ಜಿ; ಮಧ್ಯಂತರ ತಡೆ ಕುರಿತು ನಾಳೆ ವಿಚಾರಣೆ ನಡೆಸಲಿರುವ ಹೈಕೋರ್ಟ್

Update: 2025-09-22 19:58 IST

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ (ಸೆಪ್ಟೆಂಬರ್ 22) ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಗೆ ತಡೆ ನೀಡುವಂತೆ ಕೋರಲಾಗಿರುವ ಮಧ್ಯಂತರ ಮನವಿಯ ಕುರಿತು ಮಂಗಳವಾರ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.

ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ನಡೆಸಲು 2025ರ ಆಗಸ್ಟ್‌ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್‌, ಅಖಿಲ ಭಾರತ ವೀರಶೈವ ಮಹಾಸಭೆಯ ಬಿ.ಆರ್. ಉದಯಶಂಕರ್‌ ಸೇರಿ 9 ಮಂದಿ ಹಾಗೂ ಹಿರಿಯ ವಕೀಲ ಕೆ.ಎನ್‌. ಸುಬ್ಬಾರೆಡ್ಡಿ ಸೇರಿ ನಾಲ್ವರು ಸಲ್ಲಿಸಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಭುಲಿಂಗ ಕೆ.ನಾವದಗಿ, ಅಶೋಕ ಹಾರನಹಳ್ಳಿ, ಜಯಕುಮಾರ್ ಎಸ್‌. ಪಾಟೀಲ್, ವಿವೇಕ್ ರೆಡ್ಡಿ, ಎಸ್‌. ಶ್ರೀರಂಗ ಹಾಗೂ ಎಸ್‌.ಎಂ. ಚಂದ್ರಶೇಖರ್ ಅವರ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಾದದಲ್ಲಿ ಹುರುಳಿರುವಂತಿದೆ. ಅದಾಗ್ಯೂ, ಎಲ್ಲ ಅರ್ಜಿದಾರರೂ ತಮ್ಮ ಲಿಖಿತ ಸಾರಾಂಶ ಸಲ್ಲಿಸಲಿ ಎಂದು ಸೂಚಿಸಿ, ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಅರ್ಜಿದಾರರ ವಾದವೇನು?

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಇದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಲ್ಲ. ಅದರ ಹೆಸರಿನಲ್ಲಿ ನಡೆಸಲಾಗುತ್ತಿರುವ ಜನರ ಜಾತಿಗಣತಿ. ಜನಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದೇನಿದ್ದರೂ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ ವಿಚಾರ. ರಾಜ್ಯದ ಜನರ ಸ್ಥಿತಿಗತಿ ಪರಿಶೀಲನೆ ಹಿಂದುಳಿದ ವರ್ಗಗಳ ಕರ್ತವ್ಯವಲ್ಲ. ಸರ್ಕಾರ ಸಮೀಕ್ಷೆಯ ಹೆಸರಿನಲ್ಲಿ ಹೊಸ ಜಾತಿಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ಸರ್ಕಾರದ ಈ ನಡೆ ಸಂವಿಧಾನದ ಪರಿಚ್ಛೇದ 342 ಎ(3) ಮತ್ತು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ–1995ರ ಸೆಕ್ಷನ್ 11ಕ್ಕೆ ವಿರುದ್ಧವಾಗಿದೆ. ಈ ಹಿಂದೆ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಈ ಹಿಂದಿನ ವರದಿಯನ್ನು ರಾಜ್ಯ ಸರ್ಕಾರದ ಮುಂದಿಡಲಾಗಿತ್ತು. ಆದರೆ, ಆ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೇ ಈಗ ಹೊಸದಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಜಾತಿಗಣತಿಯ ಅಂಕಿ ಅಂಶಗಳನ್ನು ಜಿಯೋ ಟ್ಯಾಗಿಂಗ್ ಮೂಲಕ ಆಧಾರ್‌ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತಿದೆ. ಇದು ಆಧಾರ್‌ ಕಾಯ್ದೆಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.

ರಾಜ್ಯ ಸರ್ಕಾರ ಜಾತಿ ಗಣತಿ ನಡೆಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. ರಾಜ್ಯ ಸರ್ಕಾರಕ್ಕೆ ಸೂಕ್ತ ಕಾರಣಗಳನ್ನು ನೀಡಿ ಯಾವುದಾದರು ಒಂದು ಜಾತಿಯನ್ನು ಹಿಂದುಳಿದ ವರ್ಗಗಳಿಗೆ ಸೇರ್ಡಡೆ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾತ್ರ ಮಾಡಬಹುದಾಗಿದೆ. ಆದರೆ, ಬ್ರಾಹ್ಮಣ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಸೇರಿದಂತೆ ಹೊಸ ಜಾತಿಗಳನ್ನು ಸೇರ್ಪಡೆ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ನಡೆಸುತ್ತಿರುವ ಗಣತಿ ಯಾವ ಯಾವ ಸಮುದಾಯದ ಜನಸಂಖ್ಯೆ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವಾಗಿದೆ. ಇದರ ಹಿಂದೆ ರಾಜಕೀಯ ಅಡಗಿದ್ದು, ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರದ ವಾದವೇನು?

ರಾಜ್ಯ ಸರ್ಕಾರದ ಪರ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿ, ಸರ್ಕಾರ ಕಳೆದ ಆಯವ್ಯಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವುದಕ್ಕೆ ಹಣ ಮೀಸಲಿರಿಸಿತ್ತು. ದಸರಾ ರಜೆಯ ಸಂದರ್ಭದಲ್ಲಿ ಸಮೀಕ್ಷೆ ನಡೆಸುವುದಕ್ಕೆ ಆಶಾ ಕಾರ್ಯಕರ್ತರು,‌ ಶಿಕ್ಷಕರು ಸೇರಿ ಸಾವಿರಾರು ಜನರನ್ನು ನಿಯೋಜಿಸಲಾಗಿದೆ. ಸಮೀಕ್ಷೆ ಸಂಬಂಧ ಆಗಸ್ಟ್ ತಿಂಗಳಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ, ಕೊನೇ ಘಳಿಗೆಯಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮ ಜಾರಿಗೆ ಅಂಕಿ-ಅಂಶ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆಯ ಅಂಕಿ-ಅಂಶ ಸಂಗ್ರಹಿಸುತ್ತೇವೆ. 2014ರ ಸಮೀಕ್ಷೆಯ ಅಂಕಿ-ಅಂಶಗಳನ್ನು ನವೀಕರಿಸುತ್ತಿದ್ದೇವೆ. ಸರ್ಕಾರ ಜನಗಣತಿ ಮಾಡುತ್ತಿಲ್ಲ. ಕೇವಲ ಸಮೀಕ್ಷೆ ನಡೆಸುತ್ತಿದೆ ಎಂದು ತಿಳಿಸಿದರಲ್ಲದೆ, ಇದೇ ರೀತಿಯ ಪ್ರಕರಣದಲ್ಲಿ ಹಿಂದೆಯೂ ಮಧ್ಯಂತರ ತಡೆ ನೀಡಿಲ್ಲ. ಆದ್ದರಿಂದ, ಯಾವುದೇ ಮಧ್ಯಂತರ ತಡೆ ನೀಡಬಾರದು ಎಂದು ಮನವಿ ಮಾಡಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಸಮೀಕ್ಷೆಗೆ ತಡೆ ನೀಡುವಂತೆ ಕೋರಲಾಗಿರುವ ಮಧ್ಯಂತರ ಮನವಿಯ ಕುರಿತು ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News